ಮಂಗಳವಾರ, ಜನವರಿ 31, 2023
19 °C
ಕಾರ್ಮಿಕರಿಗೆ ಮಿಷನ್ ಕಿಟ್ ವಿತರಣಾ ಸಮಾರಂಭದಲ್ಲಿ ಸಂಸದ

2.68 ಲಕ್ಷ ಕಾರ್ಮಿಕರಿಗೆ ಇ–ಶ್ರಮ್ ಕಾರ್ಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರು ಸೇರಿದಂತೆ ಬೇರೆ ಬೇರೆ ವಲಯದ 2.68 ಲಕ್ಷ ಕಾರ್ಮಿಕರಿಗೆ ಇ–ಶ್ರಮ್ ಕಾರ್ಡ್ ನೋಂದಣಿ ಮಾಡಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಕಾರ್ಮಿಕ ಇಲಾಖೆ, ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಶಿವಮೊಗ್ಗ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘಟನೆಗಳ ಒಕ್ಕೂಟದಿಂದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಮಿಷನ್ ಕಿಟ್, ಎಲೆಕ್ಟ್ರಿಕಲ್‌ ಕಿಟ್ ಹಾಗೂ ಶಾಲಾ ಕಿಟ್ ವಿತರಣಾ ಸಮಾರಂಭ ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕೊರೊನಾ ಸಂದರ್ಭದಿಂದ ಇಲ್ಲಿಯವರೆಗೆ ₹ 100 ಕೋಟಿಗೂ ಹೆಚ್ಚು ಹಣ ಜಿಲ್ಲೆಯ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳ ಮುಖಾಂತರ ನೀಡಲಾಗಿದೆ. ಕಾರ್ಮಿಕ ಭವನ ನಿರ್ಮಾಣ, ಅಪಾರ್ಟ್‌ಮೆಂಟ್‌ಗಳ ನಿರ್ಮಾಣ, ಕಾರ್ಮಿಕರಿಗಾಗಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಆಗುತ್ತಿದೆ. ನಗರದ ರಾಗಿಗುಡ್ಡದಲ್ಲಿ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ನಿರ್ಮಾಣ ಭರದಿಂದ ಸಾಗಿದೆ. ಅಷ್ಟೇ ಅಲ್ಲದೆ ಬರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ಅಷ್ಟು ಸಂಸದರು ಒಟ್ಟಾಗಿ ಕಾರ್ಮಿಕರಿಗೆ ಇನ್ನು ಹೆಚ್ಚಿನ ಸೌಲಭ್ಯ ಒದಗಿಸಲು ಪ್ರಯತ್ನ ಮಾಡುತ್ತೇವೆ’ ಎಂದು ಹೇಳಿದರು. 

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರ ಹಿಂದೆ ಯಾರೂ ನೀಡದಷ್ಟು ನೆರವು ನೀಡಿ ಅವರ ಹಿತಾಸಕ್ತಿ ಕಾಪಾಡಿದೆ ಎಂದರು.

ರಾಜ್ಯದಲ್ಲಿ ₹1.30 ಕೋಟಿಗೂ ಹೆಚ್ಚು ಅಸಂಘಟಿತ ಕಾರ್ಮಿಕರಿದ್ದಾರೆ. ಜನಪ್ರತಿನಿಧಿಗಳು ಕೂಡ ಅತ್ಯಂತ ಕಡುಬಡತನದಲ್ಲಿ ಹುಟ್ಟಿ ಮೇಲೆ ಬಂದವರಾಗಿರಬೇಕು. ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಇರುವ ಕಾರ್ಮಿಕ ಮಂತ್ರಿ ಶಿವರಾಮ್ ಹೆಬ್ಬಾರ್ ಒಬ್ಬರು ಡ್ರೈವರ್ ಆಗಿದ್ದವರು. ನಾನು ಆಟೋ ಡ್ರೈವರ್ ಆಗಿದ್ದೆ. ಈಶ್ವರಪ್ಪ ಕೂಡ ಬಡತನದಲ್ಲೇ ಹುಟ್ಟಿದವರು. ಅಂತಹವರ ಕೈಗೆ ಅಧಿಕಾರ ಸಿಕ್ಕಿದಾಗ ಮಾತ್ರ ಬದಲಾವಣೆ ಸಾಧ್ಯ ಎಂದರು. 

ಆನೆಯ ಕಾವಾಡಿಗರಿಗೆ ಕೇವಲ ₹8 ಸಾವಿರ ಸಂಬಳ ಸಿಗುತ್ತಿತ್ತು. ದಸರಾ ಸಂದರ್ಭದಲ್ಲಿ ಆನೆಯ ಜೊತೆಗೆ ಬರುವುದಿಲ್ಲ ಎಂದು ಅವರು ಪ್ರತಿಭಟಿಸಿದಾಗ ಎಚ್ಚೆತ್ತ ಸರ್ಕಾರ ವೇತನ ₹12 ಸಾವಿರಕ್ಕೆ ಹೆಚ್ಚಳ ಮಾಡಿತು. ಸಿಮೆಂಟ್ ಕಲಸುವ ಕೈಗಳನ್ನು ನೋಡಿದಾಗ ಕಾರ್ಮಿಕರ ಸಂಕಷ್ಟ ಅರಿವಾಗುತ್ತದೆ ಎಂದರು. 

ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ಸದಸ್ಯ ಡಿ.ಎಸ್.ಅರುಣ್, ಪಾಲಿಕೆ ಮೇಯರ್ ಶಿವಕುಮಾರ್, ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ಕಾರ್ಮಿಕ ಸಂಘಟನೆಯ ಗೌರವಾಧ್ಯಕ್ಷ ಕೆ.ಈ.ಕಾಂತೇಶ್, ಕಾರ್ಮಿಕ ಒಕ್ಕೂಟದ ಅಧ್ಯಕ್ಷ ರವಿ, ಕಾರ್ಯದರ್ಶಿ ಸಂಜಯ್ ಕುಮಾರ್, ಕಾರ್ಮಿಕ ಸಂಘಟನೆಯ ಪ್ರಮುಖರಾದ ಪರಂದಾಮರೆಡ್ಡಿ, ಶಶಿಧರ್, ಅಹಮ್ಮದ್ ಪಾಷ, ಎನ್.ಡಿ.ಸತೀಶ್, ರಾಜು, ಜಿಲ್ಲಾ ಕಾರ್ಮಿಕ ಅಧಿಕಾರಿ ಸಿ.ಬಿ.ರಂಗಯ್ಯ, ಕಾರ್ಮಿಕ ನಿರೀಕ್ಷಕರಾದ ಭೀಮೇಶ್ ಪಿ., ಕಾರ್ಮಿಕ ಯೋಜನಾ ನಿರ್ದೇಶಕರಾದ ರಘುನಾಥ್ ಉಪಸ್ಥಿತರಿದ್ದರು.

ವಂಚಕರಿಗೆ ಜೈಲು ಶಿಕ್ಷೆ: ಈಶ್ವರಪ್ಪ

ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಇವತ್ತು ಒಟ್ಟು 885 ಕಾರ್ಮಿಕ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ನಗರದಲ್ಲಿರುವ 13 ಕಾರ್ಮಿಕ ಸಂಘಟನೆ ಯಾವಾಗಲೂ ಒಟ್ಟಾಗಿರಬೇಕು. ಆಗ ಮಾತ್ರ ಸರ್ಕಾರದಿಂದ ಸೌಲಭ್ಯ ಪಡೆಯಲು ಸಾಧ್ಯ ಎಂದರು.

‘ನಕಲಿ ಕಾರ್ಮಿಕ ಕಾರ್ಡ್ ಪಡೆದು ನಿಜವಾದ ಕಾರ್ಮಿಕನ ಸೌಲಭ್ಯವನ್ನು ಪಡೆದ ವಂಚಕರಿಗೆ ಜೈಲು ಶಿಕ್ಷೆಯಾಗುತ್ತದೆ. ಬಡ ಕಾರ್ಮಿಕನ ಹೊಟ್ಟೆಯ ಮೇಲೆ ಹೊಡೆದು ಅವನಿಗೆ ಸಿಗಬೇಕಾದ ಸೌಲಭ್ಯವನ್ನು ಯಾರಾದರೂ ಸುಳ್ಳು ಹೇಳಿ ಪಡೆದಲ್ಲಿ ಅವರು ಖಂಡಿತವಾಗಿಯೂ ಉದ್ಧಾರವಾಗಲ್ಲ. ದೇವರ ಮೇಲೆ ಆಣೆ ಇಟ್ಟು ಹೇಳುತ್ತೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು