ಗುರುವಾರ , ಮೇ 13, 2021
35 °C
‌ರಾಜಕಾಲುವೆ, ಮೋರಿಗಳ ಸುತ್ತ ನೆಲೆಸಿದವರಿಗೆ ನಿತ್ಯ ನರಕ

ತುಂಬಿದೆ ಹೂಳು: ವರ್ಷವೂ ಇದೇ ಗೋಳು

ಗಣೇಶ್ ತಮ್ಮಡಿಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ನಗರದೊಳಗಿನ ರಾಜ ಕಾಲುವೆಗಳಲ್ಲಿ ಕಳೆ ಬೆಳೆದು, ಹೂಳು, ತ್ಯಾಜ್ಯ ತುಂಬಿಕೊಂಡಿದೆ. ದುರ್ನಾತ ಬೀರುತ್ತಿದೆ. ಸೊಳ್ಳೆ ಕಾಟ ಜೋರಾಗಿದೆ. ಕೊರೊನಾ ಸೋಂಕಿನಿಂದ ಆತಂಕಗೊಂಡಿರುವ ಸಾರ್ವಜನಿಕರಲ್ಲಿ ಈಗ ಇತರೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.

‌ರಾಜಕಾಲುವೆ, ಮೋರಿಗಳ ಸುತ್ತ ವಾಸಿಸುತ್ತಿರುವವರಿಗೆ ನಿತ್ಯ ನರಕವಾಗಿದೆ. ಬಹುತೇಕ ಬಡಾವಣೆಗಳ ಕಾಲುವೆಗಳಲ್ಲಿ ಈ ಸಮಸ್ಯೆ ಇದೆ. ಸೊಳ್ಳೆ ಕಾಟ ಎಷ್ಟು ಜೋರಿದೆ ಎಂದರೆ ಬ್ಯಾಟು, ಬತ್ತಿ, ಕಾಯಿಲ್‌ಗಳೂ ಪ್ರಯೋಜನಕ್ಕೆ ಬಾರದಂತಾಗಿವೆ.

ಈಗಾಗಲೇ ಒಂದು ಸುತ್ತು ಮಳೆ ಬಂದು ಹೋಗಿದೆ. ಒಂದೆರಡು ತಿಂಗಳಲ್ಲಿ ಮುಂಗಾರು ಆರಂಭವಾಗಲಿದೆ. ಮಳೆಯಿಂದ ಸಂಭವಿಸಬಹುದಾದ ಅನಾಹುತಗಳನ್ನು ತಡೆಯಲು ಇಷ್ಟರಲ್ಲಿ ಮಹಾನಗರ ಪಾಲಿಕೆ ಸಿದ್ಧವಾಗಬೇಕಿತ್ತು. ‌

‘ಮುಂಗಾರು ಪ್ರವೇಶಕ್ಕೂ ಮುನ್ನವೇ ಕಾಮಗಾರಿ ನಡೆದರೆ ಅನಾಹುತ ತಪ್ಪಿಸಬಹುದು. ಪಾಲಿಕೆಗೆ ನಮ್ಮ ಗೋಳು ಕೇಳಿದಂತಿಲ್ಲ. ಕಾಲುವೆಗಳ ಸ್ವಚ್ಛತೆ ಬಗ್ಗೆ ಗಮನ ಹರಿಸಿಲ್ಲ. ಪ್ರತಿ ವರ್ಷ ಇದೇ ಗೋಳು’ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಗರದ ರಾಜಕಾಲುವೆಗಳಲ್ಲಿ ಹೂಳು, ಕಟ್ಟಡ ಅವಶೇಷ, ತ್ಯಾಜ್ಯ ತುಂಬಿಕೊಂಡಿವೆ. ಗಿಡಗಳು ಬೆಳೆದು ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಜಾಗವೂ ಇಲ್ಲದಂತೆ ಮುಚ್ಚಿ ಹೋಗಿವೆ. ಸುತ್ತಮುತ್ತಲಿನ ನಿವಾಸಿಗಳು, ವಾಣಿಜ್ಯ ಮಳಿಗೆ, ಅಂಗಡಿ ಯವರು ತ್ಯಾಜ್ಯ, ಮದ್ಯದ ಪೌಚ್‌–ಬಾಟಲಿ, ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳನ್ನು ಎಸೆಯುತ್ತಿದ್ದಾರೆ. ಇನ್ನೊಂದೆಡೆ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ರಾತ್ರಿ ವೇಳೆ ತಂದು ಹಾಕುತ್ತಿದ್ದಾರೆ. ಇದು ಹಲವಾರು ಸಮಸ್ಯೆಗಳನ್ನು ಸೃಷ್ಟಿಸಿದೆ. ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ವಿವಿಧ ಬಗೆಯ ರೋಗ–ರುಜಿನಗಳ ಉಗಮ ಸ್ಥಾನವಾಗಿದೆ.

ಮಳೆ ನೀರಷ್ಟೇ ಹರಿಯಬೇಕಿದ್ದ ರಾಜಕಾಲುವೆಗಳಿಗೆ ನಗರದ ಹಲವು ಬಡಾವಣೆಗಳ ಒಳಚರಂಡಿ ನೀರು ಬಂದು ಸೇರುತ್ತಿದೆ. ಹೀಗಾಗಿ, ಕೆಲ ರಾಜಕಾಲುವೆಗಳು ಕೊಳಚೆ ಕಾಲುವೆಗಳಾಗಿವೆ.

ರಾಜಕಾಲುವೆ ನಿರ್ವಹಣೆಯನ್ನು ಖಾಸಗಿ ಕಂಪನಿಗಳಿಗೆ ನೀಡಲಾಗಿದೆ. ಸಮಸ್ಯೆಗಳು ಎದುರಾದಾಗ ಪಾಲಿಕೆ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಶರಾವತಿ ನಗರದಿಂದ ಹಾದು ಹೋಗುವ ರಾಜಕಾಲುವೆ ಹಾಳಾಗಿದೆ. ಕಾಲುವೆ ಗಳಲ್ಲಿ ಸರಿಯಾಗಿ ನೀರು ಹರಿಯದ ಕಾರಣ ಬಾಪೂಜಿ ನಗರದ, ಹೊಸ ನಗರ ಮನೆ ಬಡಾವಣೆಯಂತ ತಗ್ಗು ಪ್ರದೇಶದ ಮನೆಗಳು ಸಣ್ಣ ಮಳೆಗೂ ಜಲಾವೃತಗೊಳ್ಳುತ್ತವೆ. ಈ ಸಮಸ್ಯೆ ಹಲವು ವರ್ಷಗಳಿಂದ ಜೀವಂತವಾಗಿದೆ. ಶಾಶ್ವತ ಪರಿಹಾರ ಕಾಣದೆ ಜನರು ಹೈರಾಣಾಗಿದ್ದಾರೆ. ಮಳೆಗಾಲ ಆರಂಭವಾಗುತ್ತಿದ್ದಂತೆ ತಗ್ಗು ಪ್ರದೇಶದ ಜನರು ಪ್ರಾಣ ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ.

ಪಾಲಿಕೆಯಿಂದ ಅಮೃತ್ ಯೋಜನೆಯಡಿ ರಾಜ ಕಾಲೇಜು ದುರಸ್ತಿ ಕಾರ್ಯ ಮಾಡುತ್ತಿದ್ದಾರೆ. ಬಹಳಷ್ಟು ಕಡೆ ಕಾಮಗಾರಿ ಪೂರ್ಣಗೊಂಡಿಲ್ಲ. ಮಳೆ ನೀರು ಹರಿಯಲು ರಾಜಕಾಲುವೆಗಳನ್ನು ನಿರ್ಮಿಸಿದ್ದರೂ ಹೆಚ್ಚಿನ ಒಳಚರಂಡಿ ಮಾರ್ಗವನ್ನು ರಾಜಕಾಲುವೆಗಳಿಗೆ ಸಂಪರ್ಕಿಸಲಾಗಿದೆ. ಇದರಿಂದ ಸಮಸ್ಯೆ ನಿರ್ಮಾಣವಾಗಿದೆ. ಕೆಲವೆಡೆ ರಾಜಕಾಲುವೆಗಳಲ್ಲಿ ಗಿಡಗಳು ಬೆಳೆದು ಹಾವುಗಳು, ವಿಷ ಜಂತುಗಳು ಸೇರಿಕೊಂಡಿವೆ. ಮಳೆ ಬಂದಾಗ ನೀರು ಹರಿಸಲು ರಾಜಕಾಲುವೆ ಬಳಕೆಯಾಗಬೇಕು ಎಂದು ಪಾಲಿಕೆ ಸದಸ್ಯ ಬಿ.ಎ. ರಮೇಶ್ ಹೆಗ್ಡೆ ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು