ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಕ್ಷಣೆ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ?

ಸ್ನೇಹಿತರ ಜೊತೆ ಗಾಜನೂರು ಜಲಾಶಯ ನೋಡಲು ತೆರಳಿದ್ದ ಯುವತಿ
Published 3 ಜುಲೈ 2024, 15:55 IST
Last Updated 3 ಜುಲೈ 2024, 15:55 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಗಾಜನೂರು ಜಲಾಶಯ ನೋಡಲು ಮಂಗಳವಾರ ಸಂಜೆ ಗೆಳೆಯರೊಂದಿಗೆ ತೆರಳಿದ್ದ ಯುವತಿಯನ್ನು ರಕ್ಷಣೆ ಮಾಡುವ ನೆಪದಲ್ಲಿ ನಾಲ್ವರು ಯುವಕರ ಗುಂಪು ಬಲವಂತವಾಗಿ ಕರೆದೊಯ್ದು ಪಂಪ್‍ಹೌಸ್‍ನಲ್ಲಿ ರಾತ್ರಿ ಇಡೀ ಇರಿಸಿಕೊಂಡಿದೆ. ಈ ವೇಳೆ ಗುಂಪಿನಲ್ಲಿದ್ದವರು ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಹೇಳಲಾಗಿದೆ.

ಪ್ರಕರಣದ ವಿವರ: 

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರದ ಇಬ್ಬರು ಯುವಕರು ಯುವತಿಯೊಬ್ಬರನ್ನು ಕಾರಿನಲ್ಲಿ ಗಾಜನೂರು ಜಲಾಶಯ ವೀಕ್ಷಿಸಲು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಜಗಳವಾಗಿದೆ. ಅದನ್ನು ಗಮನಿಸಿದ ಸ್ಥಳೀಯರ ಗುಂಪು ಮಧ್ಯ ಪ್ರವೇಶಿಸಿದೆ. ಗುಂಪಿನಲ್ಲಿದ್ದವರು ಇಬ್ಬರನ್ನೂ ಥಳಿಸಿ ಅವರೊಂದಿಗೆ ಇದ್ದ ಯುವತಿಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ಹಲ್ಲೆಗೀಡಾದ ಯುವಕರು ಪೊಲೀಸ್‌ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ರಾತ್ರಿಯಿಡೀ ಯುವತಿಯ ಹುಡುಕಾಟ ನಡೆಸಿದ್ದಾರೆ. ಬುಧವಾರ ಬೆಳಿಗ್ಗೆ ಗಾಜನೂರು ಜಲಾಶಯದ ಕೆಳಭಾಗದ ತೋಟವೊಂದರ ಪಂಪ್‍ಹೌಸ್‍ನಲ್ಲಿ ಯುವತಿಯನ್ನು ಪತ್ತೆ ಹಚ್ಚಲಾಗಿದೆ. ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳಿಸಲಾಗಿದೆ.

ಆಕೆಯ ಹೇಳಿಕೆ ಆಧರಿಸಿ ದೂರು ದಾಖಲಿಸಿಕೊಂಡಿರುವ ಪೊಲೀಸರು, ಗಾಜನೂರು ಜಲಾಶಯ ಸಮೀಪದ ನಿವಾಸಿಗಳಾದ ಅಭಿಷೇಕ್, ಮಂಜುನಾಥ, ವಿನಯ್, ಕೌಶಿಕ್ ವಿರುದ್ಧ ತುಂಗಾ ನಗರ ಠಾಣೆಯಲ್ಲಿ ಅಪಹರಣ ಹಾಗೂ ಲೈಂಗಿಕ ಕಿರುಕುಳ ಆರೋಪದ ಮೇಲೆ ಎಫ್‌ಐಆರ್‌ ದಾಖಲಿಸಿದ್ದಾರೆ.

‘ಆರೋಪಿಗಳಲ್ಲಿ ಅಭಿಷೇಕ್‌, ಮಂಜುನಾಥ ಅವರನ್ನು ಬಂಧಿಸಲಾಗಿದೆ. ವಿನಯ್‌ ಹಾಗೂ ಕೌಶಿಕ್‌ ತಲೆಮರೆಸಿಕೊಂಡಿದ್ದಾರೆ. ಯುವತಿಯೊಂದಿಗೆ ಬಂದಿದ್ದವರೇ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಅವರಿಂದ ರಕ್ಷಿಸಲು ಪಂಪ್‌ಹೌಸ್‌ಗೆ ಕರೆದೊಯ್ದಿದ್ದೆವು ಎಂದು ವಿಚಾರಣೆ ವೇಳೆ ಬಂಧಿತರು ಹೇಳಿದ್ದಾರೆ. ಜಲಾಶಯಕ್ಕೆ ಯುವತಿಯನ್ನು ಕರೆದೊಯ್ದಿದ್ದ ಇಬ್ಬರು ಯುವಕರ ಮೇಲೂ ಪ್ರಕರಣ ದಾಖಲಿಸಿ ಅವರನ್ನೂ ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT