ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ | ಮುಂಗಾರು ಹಂಗಾಮು; ಕೃಷಿ ಚಟುವಟಿಕೆಗೆ ಜೀವ

Published 23 ಮೇ 2024, 7:15 IST
Last Updated 23 ಮೇ 2024, 7:15 IST
ಅಕ್ಷರ ಗಾತ್ರ

ಶಿವಮೊಗ್ಗ: ಕೃತ್ತಿಕಾ ಮಳೆ ಕಳೆದೊಂದು ವಾರದಿಂದ ಶಿವಮೊಗ್ಗ ಸೇರಿದಂತೆ ಜಿಲ್ಲೆಯ ಹಲವೆಡೆ ಆರ್ಭಟಿಸಿದೆ. ಇದರೊಂದಿಗೆ ಮುಂಗಾರು ಪೂರ್ವ ಮಳೆ ಮುಂದಿನ ಮಳೆಗಾಲಕ್ಕೆ ಶುಭಸೂಚನೆಯ ಮುನ್ನುಡಿ ಬರೆದಿದೆ.

ಮಳೆಯ ಆರಂಭದಿಂದ ಜಿಲ್ಲೆಯಲ್ಲಿ ನಿಧಾನವಾಗಿ ಕೃಷಿ ಚಟುವಟಿಕೆಯೂ ಗರಿಗೆದರುತ್ತಿದೆ. ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ನೆಲ ಹದ ಮಾಡಿಕೊಳ್ಳಲು ಮುಂದಾಗಿದ್ದಾರೆ. ಜೊತೆಗೆ ಬೇಸಿಗೆಯಲ್ಲಿ ಬತ್ತಿ ಬೆಂಗಾಡಾಗಿದ್ದ ಹಲವು ಕೆರೆಯಂಗಳಗಳು ಈಗ ನೀರಿನ ಸಮೃದ್ಧಿಗೆ ತೆರೆದುಕೊಳ್ಳುತ್ತಿವೆ.

ಹೊಸನಗರ, ಭದ್ರಾವತಿಯಲ್ಲಿ ಮಳೆಯ ಕೊರತೆ: ಶಿವಮೊಗ್ಗ ಜಿಲ್ಲೆಯಲ್ಲಿ 2024ರ ಜನವರಿ 1ರಿಂದ ಮೇ 18ರವರೆಗೆ ವಾಡಿಕೆಯಂತೆ 85 ಮಿ.ಮೀ. ಮುಂಗಾರು ಪೂರ್ವ ಮಳೆಯಾಗಬೇಕಿದೆ. ಆದರೆ 119 ಮಿ.ಮೀ ಮಳೆ ಸುರಿದಿದೆ. ಆ ಪೈಕಿ ಭದ್ರಾವತಿ ತಾಲ್ಲೂಕಿನಲ್ಲಿ ವಾಡಿಕೆಯಂತೆ 82 ಮಿ.ಮೀ ಮಳೆಯಾಗಬೇಕಿತ್ತು. ಆದರೆ 62 ಮಿ.ಮೀ ಸುರಿದಿದೆ. ವಾಡಿಕೆಗಿಂತ ಶೇ 20ರಷ್ಟು ಕಡಿಮೆ ಆಗಿದೆ. ಹೊಸನಗರ ತಾಲ್ಲೂಕಿನಲ್ಲಿ 114 ಮಿ.ಮೀ ಆಗಬೇಕಿದ್ದ ಮಳೆ 98 ಮಿ.ಮೀ ಸುರಿದಿದ್ದು, ಶೇ 15ರಷ್ಟು ಕೊರತೆ ಆಗಿದೆ.

ನಾಲ್ಕು ತಾಲ್ಲೂಕು, ವಾಡಿಕೆಗಿಂತ ಹೆಚ್ಚು ಮಳೆ: ಸಾಗರ ತಾಲ್ಲೂಕಿನಲ್ಲಿ ವಾಡಿಕೆಯಂತೆ ಸಾಮಾನ್ಯ ಮಳೆ 78 ಮಿ.ಮೀ ಸುರಿಯಬೇಕಿತ್ತು. ಅಲ್ಲಿ 127 ಮಿ.ಮೀ. ಸುರಿದಿದೆ. ಶೇ 61ರಷ್ಟು ಹೆಚ್ಚಾಗಿದೆ. ಶಿಕಾರಿಪುರ ತಾಲ್ಲೂಕಿನಲ್ಲಿ 107 ಮಿ.ಮೀ ಮಳೆಯಾಗಬೇಕಿತ್ತು. ಅಲ್ಲಿ 134 ಮಿ.ಮೀ ಮಳೆ ಬಿದ್ದಿದ್ದು, ವಾಡಿಕೆಗಿಂತ ಶೇ 25ರಷ್ಟು ಅಧಿಕವಾಗಿದೆ. ಶಿವಮೊಗ್ಗ ತಾಲ್ಲೂಕಿನಲ್ಲಿ ವಾಡಿಕೆಯಂತೆ 89 ಮಿ.ಮೀ ಮಳೆಯಾಗಬೇಕಿತ್ತು. 104 ಮಿ.ಮೀ ಸುರಿದು ಶೇ 17ರಷ್ಟು ಹೆಚ್ಚಾಗಿದೆ. ಸೊರಬ ತಾಲ್ಲೂಕಿನಲ್ಲಿ ವಾಡಿಕೆಯಷ್ಟೇ 80 ಮಿ.ಮೀ ಮಳೆ ಸುರಿದಿದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ವಾಡಿಕೆಯಂತೆ 81 ಮಿ.ಮೀ ಮಳೆಯಾಗಬೇಕಿದ್ದು, ಅಲ್ಲಿ 173 ಮಿ.ಮೀ ಸುರಿದಿದೆ. ಶೇ 114ರಷ್ಟು ಹೆಚ್ಚು ಮಳೆ ಸುರಿದಿದೆ.

ಬಿತ್ತನೆಗೆ ಸಿದ್ಧತೆ:

ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯು 1,23,588 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದೆ. ಇದರಲ್ಲಿ ಭತ್ತ ಅತಿಹೆಚ್ಚು ಇದ್ದು, 74,916 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಪ್ರಮುಖವಾಗಿ ಮೆಕ್ಕೆಜೋಳ 47,000 ಹೆಕ್ಟೇರ್, ಹತ್ತಿ 355, ಕಬ್ಬು 744, ಹೈಬ್ರೀಡ್ ಜೋಳ 20, ರಾಗಿ 360 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ.

ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು: ಮುಂಗಾರು ಬಿತ್ತನೆಗೆ ಜಿಲ್ಲೆಯಲ್ಲಿ ಯೂರಿಯಾ, ಡಿಎಪಿ, ಎಂಇಪಿ, ಎನ್‌ಪಿಕೆಎಸ್ ಹಾಗೂ ಎಸ್‌ಎಸ್‌ಪಿ ರಸಗೊಬ್ಬರಗಳ ಅಗತ್ಯವಿದೆ. ಮೇ ತಿಂಗಳ ಅಂತ್ಯದವರೆಗೆ 27,181 ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆ ಇದ್ದು, ಜಿಲ್ಲೆಯಲ್ಲಿ 56,823 ಮೆಟ್ರಿಕ್ ಟನ್ ದಾಸ್ತಾನು ಇದೆ.

ಬಿತ್ತನೆಗೆ ಭತ್ತ, ಮುಸುಕಿನ ಜೋಳ, ತೊಗರಿ, ರಾಗಿ, ಅಲಸಂದಿ ಹಾಗೂ ಶೇಂಗಾ ಬೀಜಕ್ಕೆ ಒಟ್ಟು 24,744 ಕ್ವಿಂಟಲ್‌ಗೆ ಬೇಡಿಕೆ ಇದ್ದು, ಜಿಲ್ಲೆಯಲ್ಲಿ 35,625 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಇದೆ ಎಂದು ಕೃಷಿ ಅಧಿಕಾರಿ ಶಿವಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಶಿವಮೊಗ್ಗ ಹೊರವಲಯದ ಸೋಮಿನಕೊಪ್ಪ ಕೆರೆ ಮಳೆಯಿಂದ ಜೀವ ಪಡೆಯುತ್ತಿದೆ
ಶಿವಮೊಗ್ಗ ಹೊರವಲಯದ ಸೋಮಿನಕೊಪ್ಪ ಕೆರೆ ಮಳೆಯಿಂದ ಜೀವ ಪಡೆಯುತ್ತಿದೆ
ಕೆರೆ ಹೂಳೆತ್ತಲು ಸಣ್ಣ ನೀರಾವರಿ ಇಲಾಖೆಗೆ ಕಳೆದ ವರ್ಷ ಯಾವುದೇ ಅನುದಾನ ಬಾರದ ಕಾರಣ ಆ ಕಾಮಗಾರಿ ಕೈಗೊಂಡಿಲ್ಲ. ಈ ಬಾರಿ ಅನುದಾನ ಕೋರಿ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ.
ಪುರುಷೋತ್ತಮ ಸಣ್ಣ ನೀರಾವರಿ ಇಲಾಖೆ ಎಇಇ
ಮುಂಗಾರು ಹಂಗಾಮಿನ ಬಿತ್ತನೆಗೆ ಬೀಜ–ರಸಗೊಬ್ಬರ ಬೇಡಿಕೆಯಷ್ಟು ದಾಸ್ತಾನು ಲಭ್ಯವಿದೆ. ವಿತರಣೆ ಕೂಡ ಆರಂಭಿಸಲಾಗಿದೆ. ರೈತರು ಸಮೀಪದ ರೈತ ಸಂಪರ್ಕ ಕೇಂದ್ರಗಳಿಂದ ಪಡೆಯಬಹುದು.
ಪೂರ್ಣಿಮಾ ಜಂಟಿ ನಿರ್ದೇಶಕಿ ಕೃಷಿ ಇಲಾಖೆ
ಕೆರೆಗಳಿಗೆ ನೀರು ಹರಿದುಬರುತ್ತಿದೆ..
ವಾರದಿಂದ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ಹರಿದುಬರುತ್ತಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಶಿವಮೊಗ್ಗ ತಾಲ್ಲೂಕಿನಲ್ಲಿ 54 ಕೆರೆಗಳು ಇದ್ದು ಮುಂಗಾರು ಪೂರ್ವ ಮಳೆಗೆ ಶೇ 30ರಷ್ಟು ತುಂಬಿವೆ. ಹೊಸನಗರ ತಾಲ್ಲೂಕಿನ 9 ಕೆರೆಗಳಿಗೆ ಶೇ 27.56 ತೀರ್ಥಹಳ್ಳಿ ತಾಲ್ಲೂಕಿನ 9 ಕೆರೆಗಳಿಗೆ ಶೇ 28ರಷ್ಟು ಹಾಗೂ ಭದ್ರಾವತಿ ತಾಲ್ಲೂಕಿನ ನಾಲ್ಕು ಕೆರೆಗಳು ಶೇ 28ರಷ್ಟು ತುಂಬಿವೆ ಎಂದು ಸಣ್ಣ ನೀರಾವರಿ ಇಲಾಖೆ ಶಿವಮೊಗ್ಗ ವಿಭಾಗದ ಎಇಇ ಪುರುಷೋತ್ತಮ ತಿಳಿಸಿದರು. ಈ ಬಾರಿಯ ಭೀಕರ ಬರದ ಕಾರಣ ಶಿವಮೊಗ್ಗ ತಾಲ್ಲೂಕಿನ ಮುದ್ದಿನಕೊಪ್ಪದ ಚಿಕ್ಕೆರೆ ಕುಂಸಿ ಈರಣ್ಣನ ಕೆರೆ ಮೊದಲ ಬಾರಿಗೆ ನೀರು ಇಲ್ಲದೇ ತಳಕಂಡಿದ್ದವು. ಈಗ ಆ ಕೆರೆಗಳಿಗೂ ನೀರು ಬರುತ್ತಿದೆ ಎಂದು ಹೇಳುತ್ತಾರೆ.
ಮನೆಗಳಿಗೆ ನುಗ್ಗಿದ ನೀರು
ಕಳೆದ ನಾಲ್ಕು ದಿನಗಳಿಂದ ಸುರಿದ ಅರೆಕಾಲಿಕ ಮಳೆಯಿಂದಾಗಿ ಹಾನಿಗಳನ್ನು ಲೆಕ್ಕಹಾಕಲಾಗಿದೆ. ಶಿವಮೊಗ್ಗದ ಗೋಂಧಿಚಟ್ನಳ್ಳಿಯಲ್ಲಿ 9 ಮನೆ ಆರ್‌ಎಂಎಲ್ ನಗರ ಮತ್ತು ಬಾಪೂಜಿನಗರದ 200 ಮನೆಗಳಿಗೆ ನೀರು ನುಗ್ಗಿರುವ ವರದಿಯಾಗಿದೆ. ಮೇ 20ರವರೆಗೆ ಸುರಿದ ಮಳೆಯಿಂದಾಗಿ ಸಿದ್ದೇಶ್ವರ ನಗರದ 1 2 3ನೇ ತಿರುವಿನಲ್ಲಿ 15 ಮನೆಗಳು ಮೂರನೇ ಅಡ್ಡ ರಸ್ತೆ ಮೂರನೇ ಮುಖ್ಯ ರಸ್ತೆಗಳಲ್ಲಿ 35 ಮನೆಗಳಿಗೆ ನೀರು ನುಗ್ಗಿದೆ. 19 ಸಾಕು ಪ್ರಾಣಿಗಳು ಸಾವಾದರೆ ಎರಡು ಎತ್ತುಗಳು ಸಿಡಿಲಿನಿಂದ ಸಾವನ್ನಪ್ಪಿದೆ. ಭದ್ರಾವತಿಯಲ್ಲಿ 3 ಮನೆ ತೀರ್ಥಹಳ್ಳಿಯಲ್ಲಿ 6 ಮನೆ ಸಾಗರದಲ್ಲಿ 2 ಶಿಕಾರಿಪುರದಲ್ಲಿ 3 ಸೊರಬ 3 ಹೊಸನಗರದಲ್ಲಿ 1 ಮನೆ ಸೇರಿ 21 ಮನೆಗಳು ಹಾನಿಗೊಳಗಾಗಿವೆ. ಮೇ 20ವರೆಗೆ ಸುರಿದ ಮಳೆಯಲ್ಲಿ ಮೂರು ಜೀವಹಾನಿಯಾಗಿದೆ. ಶಿವಮೊಗ್ಗ ತೀರ್ಥಹಳ್ಳಿ ನತ್ತು ಶಿಕಾರಿಪುರದಲ್ಲಿ ತಲಾ ಒಂದೊಂದು ಜೀವಹಾನಿಯಾಗಿದೆ. ಅದರಂತೆ ಸಣ್ಣಪುಟ್ಟ ಮಳೆಗೆ ಹಳ್ಳ ಜಲಾಶಯಗಳು ಭರ್ತಿಯಾಗಿವೆ. 588.24 ಅಡಿ ತುಂಗ ಡ್ಯಾಂನಲ್ಲಿ 585.62 ಅಡಿ ನೀರು ಸಂಗ್ರಹವಾಗಿದೆ. ಅಂಜನಾಪುರ ಅಂಬ್ಳಿಗೊಳ್ಳ ಚಕ್ರಜಲಾಶಯಗಳಲ್ಲಿ 2– 3 ಅಡಿ‌ನೀರು ಸಂಗ್ರಹವಾಗಿದೆ. ಆದರೆ ಭದ್ರ ಮತ್ತು ಲಿಂಗನಮಕ್ಕಿಗೆ ಅಗಾಧ ಪ್ರಮಾಣದ ನೀರು ಹರಿದು ಬರಬೇಕಿದೆ. ಭದ್ರಾದಲ್ಲಿ 113 ಅಡಿ ಡೆಡ್ ಸ್ಟೋರೇಜ್ ಇದ್ದು ಅದಕ್ಕಿಂತ ಎರಡು ಅಡಿ ನೀರು ಹೆಚ್ಚಿಗೆ ಇದೆ ಅಷ್ಟೆ. ಕಳೆದ ವರ್ಷ ಭದ್ರಾಜಲಾಶಯ 139 ಅಡಿ ನೀರು ಸಂಗ್ರಹವಾಗಿತ್ತು. ಇಂದು ಅದು 115.7 ಅಡಿಗೆ ಕುಸಿದಿದೆ. ಇದರ ಗರಿಷ್ಠ ನೀರು ಸಂಗ್ರಹದ ಸಾಮರ್ಥ್ಯ 186 ಅಡಿ. ಅದರಂತೆ ಲಿಂಗನಮಕ್ಕಿಯಲ್ಲಿ 1752.9 ಅಡಿ ನೀರು ಇತ್ತು ಈ ಬಾರಿ 1747.3 ಅಡಿ ನೀರು ಸಂಗ್ರಹವಾಗಿದೆ. ಇದರ ಗರಿಷ್ಠ ನೀರು ಸಂಗ್ರಹ 1819 ಅಡಿ ಎತ್ತರದಷ್ಟು ನೀರು ಸಂಗ್ರಹವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT