ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾದಯಾತ್ರೆ ಹೋರಾಟದ ಅಂತ್ಯವಲ್ಲ, ಆರಂಭ’

ಮಂಜುನಾಥಗೌಡ ನೇತೃತ್ವದ ರೈತ ಕಲ್ಯಾಣ ನಡಿಗೆ ಅಂತ್ಯ
Last Updated 9 ನವೆಂಬರ್ 2020, 14:50 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘ಕೇಂದ್ರ, ರಾಜ್ಯ ಸರ್ಕಾರಕ್ಕೆ ಮಲೆನಾಡಿನ ರೈತರ ಬದುಕಿನ ಮೇಲೆ ಕಾಳಜಿ ಇದ್ದರೆ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲಿ. ರೈತ ಕಲ್ಯಾಣ ನಡಿಗೆ ಪಾದಯಾತ್ರೆ ಹೋರಾಟದ ಅಂತ್ಯವಲ್ಲ, ಆರಂಭ' ಎಂದು ರಾಜ್ಯ ಅಪೆಕ್ಸ್ ಬ್ಯಾಂಕಿನ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಹೇಳಿದರು.

ಡಾ.ಕಸ್ತೂರಿ ರಂಗನ್ ವರದಿ, ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಎಂಪಿಎಂ ನೆಡುತೋಪಿನ ವಿರುದ್ಧ ಆರ್.ಎಂ. ಮಂಜುನಾಥಗೌಡ ನೇತೃತ್ವದಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಮೂರು ದಿನಗಳ ರೈತ ಕಲ್ಯಾಣ ನಡಿಗೆ ಪಾದಯಾತ್ರೆ ಸೋಮವಾರ ತಾಲ್ಲೂಕು ಕಚೇರಿಯಲ್ಲಿ ಸಮಾರೋಪಗೊಂಡಿತು.‌

ಕಸ್ತೂರಿ ರಂಗನ್ ವರದಿಯಿಂದ ಅನ್ನದಾತರ ಬದುಕು ಬೀದಿಗೆ ಬರುವ ಆತಂಕ ಎದುರಾಗಿದೆ. ವರದಿಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ವರದಿಯನ್ನು ಸ್ಥಳೀಯ ಭಾಷೆಯಲ್ಲಿ ನೀಡದೇ, ಸ್ಥಳೀಯರ ಅಭಿಪ್ರಾಯ ಕೇಳದೇ ಹೇರಲಾಗಿದೆ. ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ದವಾಗಿ ಹೇರಲಾದ ವರದಿಯನ್ನು ವಿರೋಧಿಸುವ ಮೂಲಕ ಪ್ರತಿಭಟನೆ ದಾಖಲಿಸಲಾಗಿದೆ. ಕೇರಳ ಮಾದರಿಯಲ್ಲಿ ಜನರ ಬದುಕಿಗೆ ತೊಂದರೆಯಾಗದ ರೀತಿಯಲ್ಲಿ ವರದಿ ಅನುಷ್ಠಾನಕ್ಕೆ ಸರ್ಕಾರ ಮುಂದಾಗಬೇಕು ಎಂದು ಮಂಜುನಾಥಗೌಡ ಆಗ್ರಹಿಸಿದರು.

ಜಿಲ್ಲೆಯಲ್ಲಿ ಒಬ್ಬರು ಸತ್ಯವನ್ನು ಸುಳ್ಳಾಗಿಸಿದರೆ, ಇನ್ನೊಬ್ಬರು ಸುಳ್ಳನ್ನು ಸತ್ಯವನ್ನಾಗಿಸುವ ನಾಯಕರಿದ್ದಾರೆ ಎಂದು ಅವರು ದೂರಿದರು.

ಮಾಜಿ ಶಾಸಕ ಮಧು ಬಂಗಾರಪ್ಪ, ‘ಅಮಾಯಕ ರೈತರ ಮೇಲೆ ಜನ ವಿರೋಧಿ ಕಾನೂನನ್ನು ಹೇರಲಾಗುತ್ತಿದೆ. ಅಡಿಕೆ ಆರೋಗ್ಯಕ್ಕೆ ಹಾನಿಕರ ಎಂಬ ವರದಿ ನೀಡಿ ರೈತರನ್ನು ಅಭದ್ರಗೊಳಿಸುವ ಸಂಚು ರೂಪಿಸಲಾಗುತ್ತಿದೆ. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಮೂಲಕ ರೈತರನ್ನು ಬಡವರನ್ನಾಗಿಸಲಾಗುತ್ತಿದೆ. ವರದಿ ತಿರಸ್ಕರಿಸದಿದ್ದರೆ ರೈತರ ಕಿಚ್ಚು ಹೆಚ್ಚಲಿದೆ’ ಎಂದು ಎಚ್ಚರಿಸಿದರು.

ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ, ‘ರೈತರ ವಿರೋಧಿ ಕಾಯ್ದೆಯನ್ನು ಓಡಿಸುವವರೆಗೆ ರೈತರು ನಿದ್ದೆ ಮಾಡುವುದಿಲ್ಲ. ರೈತರನ್ನು ಸಮಾಧಿ ಮಾಡುವ ಸರ್ಕಾರ ಇರಬಾರದು. ಮುಖ್ಯಮಂತ್ರಿ ಯಡಿಯೂರಪ್ಪ ರೈತರ ಹಿತ ಮರೆತಿದ್ದಾರೆ’ ಎಂದು ದೂರಿದರು.

ಪರಿಸರ ಪ್ರೇಮಿ ಕಲ್ಲಹಳ್ಳ ಶ್ರೀಧರ್, ‘ಮಲೆನಾಡಿನ ಗುಡ್ಡಗಳು ಅಕೇಶಿಯಾ ಮುಕ್ತವಾಗಬೇಕು. ಜನರು ಜಾಗೃತರಾಗಿ ಅಕೇಶಿಯಾ ಕಾಡನ್ನು ಬದಲಿಸಬೇಕು. ಗ್ರಾಮ ಪಂಚಾಯಿತಿ ಆಡಳಿತ ಜಾಗೃತವಾದರೆ ಯಾವ ವರದಿಯ ಅಗತ್ಯವೂ ಇರುವುದಿಲ್ಲ’ ಎಂದರು.

ಸಹಕಾರಿ ಮುಖಂಡ ಬಸವಾನಿ ವಿಜಯದೇವ್, ಶಿವಮೊಗ್ಗ ಎಪಿಎಂಸಿ ಅಧ್ಯಕ್ಷ ದುಗ್ಗಪ್ಪಗೌಡ, ಕಲ್ಲುಳಿ ವಿಠಲ ಹೆಗ್ಡೆ, ಜನಶಕ್ತಿ ವೇದಿಕೆಯ ಕೆ.ಎಲ್. ಅಶೋಕ್, ಟಿ.ಎಲ್. ಸುಂದರೇಶ್ ಇದ್ದರು. ರಾಘವೇಂದ್ರ ಶೆಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT