ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದುಗರ ಮೇಲೆ ಕಾರಂತರ ಚಿಂತನೆಯ ಪ್ರಭಾವ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ ಅಧ್ಯಕ್ಷ ಡಿ.ಬಿ. ಶಂಕರಪ್ಪ
Last Updated 9 ಜನವರಿ 2021, 16:56 IST
ಅಕ್ಷರ ಗಾತ್ರ

ಶಿವಮೊಗ್ಗ: ಶಿವರಾಮ ಕಾರಂತರ ಜೀವನ ದೃಷ್ಟಿಕೋನ ಹಾಗೂ ವಿಶಿಷ್ಟ ಚಿಂತನೆಯು ಓದುಗರ ಮೇಲೆ ಗಾಢ ಪ್ರಭಾವ ಬೀರುತ್ತವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ ಅಧ್ಯಕ್ಷ ಡಿ.ಬಿ. ಶಂಕರಪ್ಪ ಅಭಿಪ್ರಾಯಪಟ್ಟರು.

ನಗರದ ಪತ್ರಿಕಾ ಭವನದಲ್ಲಿ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನ ಹಾಗೂ ಡಾ.ಶಿವರಾಮ ಕಾರಂತರ ಪ್ರತಿಷ್ಠಾನದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ನಮ್ಮ ಪ್ರೀತಿಯ ಅಮರನಾಥಶೆಟ್ಟಿ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ‘2019ರ ಶಿವರಾಮ ಕಾರಂತ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.‌

‘ಬಾಲ್ಯದಲ್ಲಿ ಶಿವರಾಮ ಕಾರಂತರ ಕೃತಿಗಳು ನನ್ನ ಮೇಲೂ ಪ್ರಭಾವ ಬೀರಿದ್ದವು. ನಮ್ಮೂರಿನ ಪರಿಸರ, ಚಿತ್ರಣ ಹಾಗೂ ಬಾಲ್ಯದಲ್ಲಿ ನಾನು ಕಾಣುತ್ತಿದ್ದ ಊರಿನ ಜನರ ಜೀವನ ಶೈಲಿಯ ಬಗ್ಗೆಯೂ ಕೃತಿಗಳಲ್ಲಿ ದಾಖಲಿಸಬೇಕೆಂಬುದು ನನ್ನ ಆಸೆಯಾಗಿತ್ತು. ಅದರಂತೆ ಬದುಕಿನಲ್ಲಿ ಕಂಡಂತಹ ಅಂಶಗಳನ್ನು ಒಳಗೊಂಡು ಅನೇಕ ಕೃತಿ ರಚಿಸಿದ್ದೇನೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ರುದ್ರಮುನಿ ಸಜ್ಜನ್, ‘ಕನ್ನಡ ಸಾಹಿತ್ಯ ಪರಿಷತ್‍ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಡಿ.ಬಿ. ಶಂಕರಪ್ಪ ಅವರಿಗೆ ಶಿವರಾಮ ಕಾರಂತ ಪ್ರಶಸ್ತಿ ಲಭಿಸಿರುವುದು ನಮ್ಮೆಲ್ಲರಿಗೂ ಸಂತಸದ ಸಂಗತಿ’ ಎಂದರು.

ಸಾಹಿತಿ ಡಾ. ಜಯಪ್ರಕಾಶ ಮಾವಿನಕುಳಿ, ‘ಮೂಡಬಿದಿರೆ ಶಾಸಕ ಅಮರನಾಥ ಶೆಟ್ಟಿ ಬಹಳ ಅಪರೂಪದ ರಾಜಕಾರಣಿ. ಅತ್ಯಂತ ಪ್ರಾಮಾಣಿಕವಾಗಿ ರಾಜಕೀಯ ಜೀವನ ನಡೆಸಿದವರಲ್ಲಿ ಒಬ್ಬರು. ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಸಚಿವರಾಗಿದ್ದ ಅವರ ಬಳಿ ಯಾರೇ ಕಷ್ಟ ಎಂದು ಹೇಳಿಕೊಂಡು ಬಂದರೂ ಕೂಡಲೇ ಸ್ಪಂದಿಸುತ್ತಿದ್ದರು’ ಎಂದು ಬಣ್ಣಿಸಿದರು.‌

ಕಾರ್ಯಕ್ರಮದಲ್ಲಿ ಡಿ.ಬಿ. ಶಂಕರಪ್ಪ ಅವರಿಗೆ 2019ರ ಶಿವರಾಮ ಕಾರಂತರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಾ.ಜಯಪ್ರಕಾಶ ಮಾವಿನಕುಳಿ ರಚನೆಯ ‘ನಮ್ಮ ಪ್ರೀತಿಯ ಅಮರನಾಥಶೆಟ್ಟಿ’ ಪುಸ್ತಕವನ್ನು ಸಾಹಿತಿ ವಿಜಯಾ ಶ್ರೀಧರ್ ಲೋಕಾರ್ಪಣೆಗೊಳಿಸಿದರು.

ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷೆ ಕಿರಣ್‍ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಜಿಎಸ್‍ಎಸ್ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಈಶ್ವರಪ್ಪ, ಚನ್ನಬಸಪ್ಪ
ನ್ಯಾಮತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT