ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳಗುಂದದಲ್ಲಿದೆ ‘ಸಂಗೀತದ’ ಉಲ್ಲೇಖವಿರುವ ಮೊದಲ ಶಾಸನ

ಭಾಗ – 3
Last Updated 19 ನವೆಂಬರ್ 2022, 5:30 IST
ಅಕ್ಷರ ಗಾತ್ರ

ಶಿರಾಳಕೊಪ್ಪ: 4ನೇ ಶತಮಾನದ ಪೂರ್ವದಲ್ಲಿಯೇ ತಾಳಗುಂದ ಗ್ರಾಮದಲ್ಲಿ ಸಂಗೀತ ನಿನಾದ ಝೇಂಕರಿಸುತ್ತಿತ್ತು ಎಂದು ಕ್ರಿ.ಶ. 450ರಲ್ಲಿ ಸ್ಥಾಪಿಸಲಾಗಿರುವ ಸ್ತಂಭ ಶಾಸನ ಸ್ಪಷ್ಟವಾಗಿ ವಿವರಿಸುತ್ತದೆ. ತಾಳಗುಂದ ಗ್ರಾಮ ರಾಜಕೀಯವಾಗಿ, ಶೈಕ್ಷಣಿಕವಾಗಿ ಮಾತ್ರವಲ್ಲದೆ ಸಂಗೀತ, ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಕೂಡ ಶ್ರಿಮಂತಿಕೆ ಹೊಂದಿತ್ತು.

ಇಲ್ಲಿ ಸೂರ್ಯಾಸ್ತವಾದ ನಂತರ ಅಗ್ರಹಾರದ ಬೀದಿಯಲ್ಲಿ ನಡೆದರೆ ಅದು ಈ ‘ಭೂಲೋಕದ ಸ್ವರ್ಗ’ ಎಂದೂ ಭಾಸವಾಗುತ್ತಿತ್ತು. ಇಲ್ಲಿನ ಅಗ್ರಹಾರದಲ್ಲಿ ಸಾಗುತ್ತಿದ್ದರೆ ರಸ್ತೆ ಇಕ್ಕೆಲಗಳಲ್ಲಿ ಮುಂಜಾನೆಯ ರಂಗೋಲಿ ಅಳಿಸದ ಹಾಗೇ ಅದು ಕಣ್ಣಿಗೆ ರಾಚುತ್ತಿತ್ತು. ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದ ಕಲಾ ಪ್ರಕಾರದ ಸಂಗೀತ ಮತ್ತು ನೃತ್ಯ ಕಲಾವಿದರು ನೃತ್ಯಾಸಕ್ತರಿಗೆ ತಮ್ಮ ವಿದ್ಯೆಗಳನ್ನು ಹೇಳಿಕೊಡುತ್ತಿದ್ದರು. ಇನ್ನು ಗೆಜ್ಜೆಯ ಮತ್ತು ಸಂಗೀತದ ನಾದ ಹರಿದು ಕಿವಿಯನ್ನು ತಂಪಾಗಿಸುತ್ತಿದ್ದವು.

ಗಿಳಿವಿಂಡುಗಳ ಆತ್ಮೀಯ ಹಾರೈಕೆಗಳು ಒಂದೆಡೆಯಾದರೆ ಶ್ಲೋಕಗಳನ್ನು ಘಟಿಕಾಸ್ಥಾನಗಳಲ್ಲಿ ಕಲಿತು ಅವುಗಳನ್ನು
ತಮ್ಮ ಮುಂದಿನ ಪೀಳಿಗೆಗೆ ಧಾರೆ ಎರೆಯುತ್ತಿರುವ ವೇದವಿದರ ಶ್ರೋತ್ರೀಯರ ಮಂತ್ರಘೋಷಗಳು ಕಿವಿಗೆ ಮುದ ನೀಡುತ್ತಿರುವುದು ಇನ್ನೊಂದೆಡೆ ಕೇಳಬಹುದಾಗಿತ್ತು. ಮತ್ತೊಂದು ಕಡೆ ಧನುರ್ವೇದವನ್ನು ಕಲಿಸುತ್ತಾ ಗರಡಿಯ ತಾಲೀಮು ನಡೆಯುತ್ತಿದ್ದುದು ಕಾಣಿಸುತ್ತಿತ್ತು.

‘ನಾನಾ ವಿಧ ದ್ರವಿಣಸಾರ ಸಮುಚ್ಚಯೇಷು ಮತ್ತದ್ವಿಪೇಂದ್ರಮದವಾಸಿತ ಗೋಪುರೇಷು| ಸಂಗೀತ ವಲ್ಗು ನಿನಾದೇಷು ಗೃಹೇಷು’ ಎಂದು ಕವಿ ಕುಬ್ಜ ತಾನು ಬರೆದ ಶಾಂತಿವರ್ಮನ ತಾಳಗುಂದದ ಸ್ತಂಭ ಶಾಸನದಲ್ಲಿ ಬಣ್ಣಿಸಿದ್ದಾನೆ. ಕದಂಬರ ರಾಜಕೀಯ ಆಸಕ್ತಿಯ ಜೊತೆ ಅವರ ಧಾರ್ಮಿಕ ಮತ್ತು ಕಲಾಸಕ್ತಿಯನ್ನು ಬಿಂಬಿಸಿದ್ದಾನೆ. ಅಂದರೆ ಪ್ರಾಯಶಃ ತಾಳಗುಂದದ ಪಾವಿತ್ರ್ಯ ಮತ್ತು ಅಲ್ಲಿನ ಘಟಿಕಾಸ್ಥಾನದ ಮಹತ್ವವನ್ನು ಬಣ್ಣಿಸಿದ್ದಾನೆ.

‘ನಾನಾವಿಧ ದ್ರವಿಣ ಸಾರ ಸಮುಚ್ಚಯೇಷು ಮತ್ತದ್ವಿಪೇಂದ್ರ ಮದವಾಸಿತ ಗೋಪುರೇಷು| ಸಂಗೀತ ವಲ್ಗು ನಿನಾದೇಷು ಗೃಹೇಷು ಯಸ್ಯ ಲಕ್ಷ್ಯ್ಮಾ ಙ್ಗನಾಧೃ ತಿಮತೀ ಸು ಚಿ ರಂ ಚ ರೇ ಮೇ’|

ಈ ಸಾಲು ಬಹಳ ಮಹತ್ವವನ್ನು ಪಡೆಯುತ್ತದೆ. ಕದಂಬರ ಕಾಲದಲ್ಲಾಗಲೇ ಸಂಗೀತ ಶಾಸ್ತ್ರವೂ ಪ್ರಚಲಿತಕ್ಕೆ ಬಂದು ದಕ್ಷಿಣದಲ್ಲಿ ತನ್ನ ಸ್ಥಾನ ಪಡೆದುಕೊಂಡಿತ್ತು. ಅಂದರೆ ಕದಂಬರು ಕೇವಲ ರಾಜ್ಯಾಡಳಿತಕ್ಕೆ ಸೀಮಿತರಾಗಿರದೇ ಸಾಂಸ್ಕೃತಿಕ ರಂಗದಲ್ಲಿಯೂ ಗುರುತಿಸಿಕೊಂಡಿದ್ದರು.

ಗುಪ್ತರೇ ಮೊದಲಾದ ಸಾಮ್ರಾಟರ
ಸ್ನೇಹ ಆ ಹೊತ್ತಿಗೆ ಕದಂಬರಿಗೆ ಲಭಿಸಿ
ಯಾಗಿತ್ತು. ಕದಂಬರನ್ನು ಅತ್ಯಂತ ಸ್ನೇಹ
ಮತ್ತು ಗೌರವಾದರಗಳಿಂದ ನೋಡಿಕೊಳ್ಳುತ್ತಿದ್ದರು. ಎಲ್ಲ ರಾಜರೂ ಅತ್ಯಾದರದಿಂದ ನೋಡುವಂತಹ ಒಂದು ಹಂತವನ್ನು ಕದಂಬರು ಸಂಪಾದಿಸಿದರು. ತಮ್ಮ ಮಗಳನ್ನು ಕೊಟ್ಟು ಉಳಿದ ರಾಜರುಗಳಲ್ಲಿ ಸಂಬಂಧವನ್ನು ಬೆಳೆಸಿಕೊಂಡರು.

ಗುಪ್ತಾದಿ ಪಾರ್ಥಿವ ಕುಲಾಂಬುರುಹ ಸ್ಥಲಾನಿ ಸ್ನೇಹಾದರ ಪ್ರಣಯ ಸಂಭ್ರಮ ಕೇಸರಾಣಿ| ಶ್ರೀಮಂತ್ಯನೇಕನೃಪ ಷಟ್ಪದ ಸೇವಿತಾನಿ ಯೋ ಬೋಧಯದ್ದುಹಿತೃ ದೀಧಿತಿಭಿರ್ನೃಪಾರ್ಕ್ಕಃ |

‘ವಸಂತತಿಲಕಾ ವೃತ್ತದಲ್ಲಿ ಬರೆದ ಈ ಸಾಲುಗಳು ಶಾಸನದ 12ನೇ ಸಾಲಿನಲ್ಲಿ ಕಾಣಸಿಗುತ್ತದೆ.ಸಂಗೀತದ ಬಗ್ಗೆ ಮೊಟ್ಟ ಮೊದಲ ಬಾರಿಗೆ ತಾಳಗುಂದದ ಈ ಶಾಸನದಲ್ಲಿ ಉಲ್ಲೇಖ ಕಂಡುಬರುತ್ತದೆ. ಇದಕ್ಕೂ ಪೂರ್ವದಲ್ಲಿ ರಾಜ್ಯದ ಬೇರೆ ಶಾಸನಗಳಲ್ಲಿ ಸಂಗೀತ ಬಗ್ಗೆ ಮಾಹಿತಿ ಲಭಿಸುವುದಿಲ್ಲ’ ಎಂದು ಸದ್ಯೋಜಾತ ಭಟ್ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT