ಮಂಗಳವಾರ, ಮಾರ್ಚ್ 21, 2023
20 °C
ಜಿ.ಪಂ., ತಾ.ಪಂ ಮೀಸಲಾತಿ ಪ್ರಕಟ: ಗರಿಗೆದರಿದ ರಾಜಕೀಯ ಚಟುವಟಿಕೆ

ರಾಜಕೀಯಕ್ಕೆ ಧುಮುಕಲು ಕಾಗೋಡು ಪುತ್ರಿ ಸಜ್ಜು

ಎಂ.ರಾಘವೇಂದ್ರ Updated:

ಅಕ್ಷರ ಗಾತ್ರ : | |

Prajavani

ಸಾಗರ: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ಘೋಷಣೆಯಾಗುತ್ತಿದ್ದಂತೆ ತಾಲ್ಲೂಕಿನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ಯಾವ ಕ್ಷೇತ್ರಕ್ಕೆ ಯಾವ ಪಕ್ಷದಿಂದ ಯಾರು ಅಭ್ಯರ್ಥಿಗಳಾಗುತ್ತಾರೆ ಎನ್ನುವ ಕುರಿತು ಚರ್ಚೆಗೆ ರಾಜಕೀಯ ವಲಯದಲ್ಲಿ ಚಾಲನೆ ದೊರಕಿದೆ.

ಆವಿನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ ಕಾಗೋಡು ಕಣಕ್ಕೆ ಇಳಿಯುತ್ತಾರೆ ಎಂಬ ಸುದ್ದಿ ದಟ್ಟವಾಗಿದೆ. ಕೆಪಿಸಿಸಿ ಕಾರ್ಯದರ್ಶಿಯೂ ಆಗಿರುವ ಅವರು ಈ ಮೂಲಕ ಇದೇ ಮೊದಲ ಬಾರಿಗೆ ಚುನಾವಣಾ ರಾಜಕಾರಣಕ್ಕೆ ಧುಮುಕಲು ಸಿದ್ಧತೆ ನಡೆಸಿದ್ದಾರೆ.

ಜಿಲ್ಲಾ ಪಂಚಾಯಿತಿ ಚುನಾವಣೆಗೆ ತಯಾರಿ ನಡೆಸಿದ್ದ ಕೆಲವು ಆಕಾಂಕ್ಷಿಗಳಿಗೆ ಮೀಸಲಾತಿ ದೊರಕದ ಕಾರಣ ನಿರಾಶರಾಗಬೇಕಾಗಿದೆ. ಪ್ರಮುಖವಾಗಿ ಆವಿನಹಳ್ಳಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಹಕ್ರೆ ಅವರು ಈ ಕ್ಷೇತ್ರದ ಮೀಸಲಾತಿ ಸಾಮಾನ್ಯ ಮಹಿಳೆಗೆ ನಿಗದಿಯಾಗಿರುವುದರಿಂದ ಸ್ಪರ್ಧಾ ಕಣದಿಂದ ಹಿಂದೆ ಸರಿಯುವುದು ಅನಿವಾರ್ಯವಾಗಿದೆ.

ಆವಿನಹಳ್ಳಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಳೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶಾಸಕ ಎಚ್. ಹಾಲಪ್ಪ ಹರತಾಳು ಅವರ ಸೋದರ ಸಂಬಂಧಿ ರವಿ ಬಸರಾಣಿ ಅಲ್ಪ ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಮೀಸಲಾತಿ ತಮಗೆ ಅನುಕೂಲಕರವಾಗಿದ್ದರೆ ಮತ್ತೊಮ್ಮೆ ಸ್ಪರ್ಧಿಸಲು ಅವರು ಸಿದ್ಧರಾಗಿದ್ದರು. ಆದರೆ ಮಹಿಳಾ ಮೀಸಲಾತಿ ನಿಗದಿಯಾಗಿರುವುದು ಅವರ ಆಸೆಗೂ ತಣ್ಣೀರು ಎರಚಿದಂತಾಗಿದೆ.

ಈ ಕ್ಷೇತ್ರದಲ್ಲಿ ರಾಜನಂದಿನಿ ಅವರ ಹೆಸರು ಕಾಂಗ್ರೆಸ್‌ನಿಂದ ಅಂತಿಮವಾದರೆ ಅವರ ಎದುರು ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಸವಾಲು ಬಿಜೆಪಿಯ ಎದುರು ಇದೆ. ತಾಲ್ಲೂಕು ಪಂಚಾಯಿತಿ ಸದಸ್ಯೆ ಸುವರ್ಣ ಟೀಕಪ್ಪ, ಹೆಗ್ಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾ, ಸ್ಥಳೀಯರಾಗಿರುವ ರೂಪಾ ಅವರ ಹೆಸರು ಸದ್ಯಕ್ಕೆ ಬಿಜೆಪಿಯಲ್ಲಿ ಕೇಳಿಬರುತ್ತಿದೆ.

ಆನಂದಪುರಂ ಕ್ಷೇತ್ರಕ್ಕೆ ತ್ಯಾಗರ್ತಿ ಎಂಬ ನೂತನ ಹೆಸರು ಬಂದಿದ್ದು, ಇಲ್ಲಿ ಸಾಮಾನ್ಯ ಮೀಸಲಾತಿ ನಿಗದಿಯಾಗಿದೆ. ಇಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಜಟಾಪಟಿ ನಡೆಯುವುದು ನಿಶ್ಚಿತವಾಗಿದೆ. ಒಮ್ಮೆ ಈ ಕ್ಷೇತ್ರದಿಂದ ಗೆದ್ದಿರುವ ಕಾಂಗ್ರೆಸ್‌ನ ಹೊನಗೋಡು ರತ್ನಾಕರ್ ಮತ್ತೊಮ್ಮೆ ಕಣಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ಹಲವು ವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿರುವ ರವಿ ಜಂಬೂರುಮನೆ ಕೂಡ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯಿಂದ ಎಪಿಎಂಸಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರು ಅವರ ಹೆಸರು
ಕೇಳಿಬರುತ್ತಿದೆ.

ತಾಳಗುಪ್ಪ ಕ್ಷೇತ್ರಕ್ಕೆ ಕಾನ್ಲೆ ಕ್ಷೇತ್ರವೆಂಬ ನೂತನ ಹೆಸರು ಬಂದಿದೆ. ಈ ಕ್ಷೇತ್ರದ ಹಾಲಿ ಸದಸ್ಯ ರಾಜಶೇಖರ ಗಾಳಿಪುರ ಅವರು ಅವಕಾಶ ದೊರೆತರೆ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯಾಗಲು ಮನಸ್ಸು ಮಾಡಿದ್ದರು. ಹೊಸದಾಗಿ ರಚನೆಯಾಗಿರುವ ಈ ಕ್ಷೇತ್ರಕ್ಕೆ ಹೊಂದಿಕೊಂಡಂತಿರುವ ಕುದರೂರು ಕ್ಷೇತ್ರದ ಮೇಲೂ ಅವರು ಕಣ್ಣಿಟ್ಟಿದ್ದರು. ಆದರೆ ಕಾನ್ಲೆಗೆ ಸಾಮಾನ್ಯ ಮಹಿಳೆ, ಕುದರೂರು ಕ್ಷೇತ್ರಕ್ಕೆ ಎಸ್.ಟಿ. ಮೀಸಲಾತಿ ನಿಗದಿಯಾಗಿರುವುದು ರಾಜಶೇಖರ ಗಾಳಿಪುರ ಅವರಿಗೆ ನಿರಾಸೆ ತಂದಿದೆ.

ಕಾನ್ಲೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಲು ಈ ಹಿಂದೆ ಎರಡು ಬಾರಿ ಸದಸ್ಯರಾಗಿದ್ದ ಲಲಿತಾ ನಾರಾಯಣ್ ಸಿದ್ಧರಾಗಿದ್ದಾರೆ. ಕಾಂಗ್ರೆಸ್ನಿಂದ ಈ ಹಿಂದೆ ಕೆಳದಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಸುಮಂಗಲಾ ರಾಮಕೃಷ್ಣ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.

ಕಳೆದ ಚುನಾವಣೆಯಲ್ಲಿ ಆನಂದಪುರಂ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಅನಿತಾಕುಮಾರಿ ಅವರು ಎಸ್.ಸಿ. ಮಹಿಳೆ ಮೀಸಲಾತಿ ಬಂದಿರುವ ಕೆಳದಿ ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸಲು ಮುಂದಾಗಿದ್ದಾರೆ. ಆದರೆ ಕಾಂಗ್ರೆಸ್ನ ಒಂದು ಗುಂಪು ಅವರ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಬಿಜೆಪಿ ಸ್ಥಳೀಯವಾಗಿ ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿದೆ.

ರಾಜಕೀಯವಾಗಿ ಬೆಳೆಯಲು ಉತ್ಸುಕರಾಗಿದ್ದ ದ್ವಿತೀಯ ಹಂತದ ಹಲವು ನಾಯಕರಿಗೆ ಹೊಸದಾಗಿ ನಿಗದಿಯಾಗಿರುವ ಮೀಸಲಾತಿ ಪಟ್ಟಿ ತೊಡಕಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ತಾವು ರಾಜಕೀಯವಾಗಿ ಬೆಳೆಯಬಾರದು ಎನ್ನುವ ಕಾರಣಕ್ಕಾಗಿಯೇ ಈ ರೀತಿಯ ತಂತ್ರಗಾರಿಕೆಯನ್ನು ಅಧಿಕಾರಸ್ಥ ರಾಜಕಾರಣಿಗಳು ಹೆಣೆದಿದ್ದಾರೆ ಎಂಬ ಹೇಳಿಕೆಗಳು ಯುವ ರಾಜಕಾರಣಿಗಳಿಂದ ಮಾರ್ದನಿಸುತ್ತಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು