ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ ಋಣ ತೀರಿಸಲು ಮತ ಕೊಡಿ: ಆರ್.ಎಂ.ಕುಬೇರಪ್ಪ ಮನವಿ

-
Published 20 ಮೇ 2024, 14:01 IST
Last Updated 20 ಮೇ 2024, 14:01 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಕಾಂಗ್ರೆಸ್ ನೇತೃತ್ವದ ಸರ್ಕಾರ ಶಿಕ್ಷಕರು ಹಾಗೂ ಪದವೀಧರರಿಗೆ ಅನೇಕ ಸೌಲಭ್ಯಗಳನ್ನು ನೀಡಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ ಋಣ ತೀರಿಸಿ’ ಎಂದು ಕೆಪಿಸಿಸಿ ಪದವೀಧರ ಘಟಕದ ಅಧ್ಯಕ್ಷ ಆರ್.ಎಂ.ಕುಬೇರಪ್ಪ ಮನವಿ ಮಾಡಿದರು.

‘ಆರನೇ ಆಯೋಗದ ಎಲ್ಲ ಶಿಫಾರಸು ಯಥಾವತ್ತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೊಳಿಸಿದ್ದರಿಂದ ನೌಕರರಿಗೆ ಲಾಭವಾಗಿದೆ. ಸಿದ್ದರಾಮಯ್ಯ ತಮ್ಮ ಹಿಂದಿನ ಅವಧಿಯಲ್ಲಿ ಲಕ್ಷಗಟ್ಟಲೇ ಹುದ್ದೆಗಳನ್ನು ಸೃಷ್ಟಿಸಿ ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ನೀಡಿದ್ದಾರೆ’ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಅನುದಾನಿತ ಪದವಿ ಕಾಲೇಜುಗಳಲ್ಲಿ ಖಾಲಿಯಾದ ಹುದ್ದೆಗಳನ್ನು ತುಂಬಲು ಅನುಮತಿ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ನೀಡಿದ ಪಂಚ ಗ್ಯಾರಂಟಿಗಳಲ್ಲಿ ನಿರುದ್ಯೋಗ ಪದವೀಧರರಿಗೆ ತಿಂಗಳಿಗೆ ₹ 3,000, ಡಿಪ್ಲೊಮಾ ಪದವೀಧರರಿಗೆ ₹ 1,500 ನೀಡಲಾಗುತ್ತಿದೆ’ ಎಂದರು.

‘ಅತಿಥಿ ಉಪನ್ಯಾಸಕರು ಮಾಡಿದ ಹೋರಾಟಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಅತಿಥಿ ಉಪನ್ಯಾಸಕರಿಗೆ ಮಾಸಿಕ ವೇತನ ಕನಿಷ್ಠ ₹ 38,000ದಿಂದ ₹ 48,000ದವರೆಗೆ ಹೆಚ್ಚಿಸಲಾಗಿದೆ. ಆರೋಗ್ಯ ವಿಮೆ, ನಿವೃತ್ತಿ ಹೊಂದಿದ ಪ್ರತಿಯೊಬ್ಬರಿಗೂ ₹ 5 ಲಕ್ಷ ಇಡುಗಂಟು ನೀಡುವುದಾಗಿ ಆದೇಶ ಮಾಡಲಾಗಿದೆ’ ಎಂದರು.

‘ಈಗಾಗಲೇ 7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಮಧ್ಯಂತರ ಪರಿಹಾರ ಘೋಷಿಸಿದೆ. ಶೀಘ್ರ ವೇತನ ಆಯೋಗದ ಶಿಫಾರಸು ಜಾರಿಯಾಗಲಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ದೇವೇಂದ್ರಪ್ಪ, ಎಚ್.ಎಸ್.ಬಾಲಾಜಿ, ನವೀನ್, ವಿನಯ್ ತಾಂಡ್ಲೆ, ಮೋಹನ್, ಶಂಕರ್, ಗಿರೀಶ್, ಲಕ್ಷ್ಮಣ್, ಭರತ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT