ಗುರುವಾರ , ಆಗಸ್ಟ್ 18, 2022
25 °C
ಕುದುರೆಗಣೆ ಯುವ ರೈತ ಹೇಮಂತಕುಮಾರ್ ಯಶೋಗಾಥೆ

ಪ್ರಯೋಗದಿಂದ ಪ್ರಯೋಜನ ಪಡೆದ ಕೃಷಿಕ

ರಾಘವೇಂದ್ರ ಟಿ. Updated:

ಅಕ್ಷರ ಗಾತ್ರ : | |

Prajavani

ಸೊರಬ: ತಾಲ್ಲೂಕಿನ ಕುದುರೆಗಣೆ ಗ್ರಾಮದ ಯುವ ರೈತ ಹೇಮಂತಕುಮಾರ್ ಚಿಕ್ಕ ವಯಸ್ಸಿನಲ್ಲಿಯೇ ಕೃಷಿಯಲ್ಲಿ ಆಸಕ್ತಿವಹಿಸಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಅಧಿಕ ಲಾಭ ಗಳಿಸುವ ಮೂಲಕ ಅತಿ ಸಣ್ಣ ರೈತರಿಗೆ ಮಾದರಿಯಾಗಿದ್ದಾರೆ.

ಅವೈಜ್ಞಾನಿಕ ಕೃಷಿ ಪದ್ಧತಿ ರೈತರ ಆದಾಯಕ್ಕೆ ಮುಳುವಾಗಿದ್ದು, ಮಾಹಿತಿ ಕೊರತೆಯಿಂದಾಗಿ ಅಜ್ಜ, ಮುತ್ತಜ್ಜನ ಕಾಲದಿಂದಲೂ ಕೃಷಿ ಕುಟುಂಬಗಳು ತಮ್ಮ ಆರ್ಥಿಕ ವ್ಯವಸ್ಥೆಯನ್ನು ಬಲಿಷ್ಠಗೊಳಿಸಿಕೊಳ್ಳುವಲ್ಲಿ ವಿಫಲವಾಗಿವೆ. ಕೃಷಿಗೆ ಅಧಿಕ ಬಂಡವಾಳ ಹೂಡಿ ಉತ್ತಮ ಬೆಲೆ ದೊರೆಯದಿರುವ ಪರಿಣಾಮ ರೈತರು ಆಸಕ್ತಿ ಕಳೆದುಕೊಂಡಿರುವ ಈ ಹೊತ್ತಿನಲ್ಲಿ ಹೇಮಂತಕುಮಾರ್ ಸಮಯ ಪ್ರಜ್ಞೆ ಮೆರೆದು ಹಲವು ವೈವಿಧ್ಯಮಯ ಪ್ರಯೋಗ ನಡೆಸಿ ಸಮಗ್ರ ಹಾಗೂ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಆರ್ಥಿಕ ಪ್ರಗತಿ ಕಂಡಿದ್ದಾರೆ.

ತಮ್ಮ 8.14 ಎಕರೆ ಜಮೀನಿನಲ್ಲಿ 4 ಎಕರೆ ಅಡಿಕೆ ಬೆಳೆದಿದ್ದಾರೆ. 2 ಎಕರೆ ಜಮೀನಿನಲ್ಲಿ ಭತ್ತ ಹಾಗೂ ಉಳಿದ 2 ಎಕರೆಯಲ್ಲಿ ಶುಂಠಿ, ಜೋಳ ಬೆಳೆದಿದ್ದಾರೆ. ಅಡಿಕೆ ಬೆಳೆಗೆ ‘ಗೋಕೃಪಾಮೃತ’ ಬಳಸಿದರೆ; ಭತ್ತಕ್ಕೆ ಸಂಪೂರ್ಣ ಸಾವಯವ ಕೃಷಿ ಪದ್ಧತಿ ಅಳವಡಿಸಿದ್ದಾರೆ. ಇದರಿಂದ ಗುಣಮಟ್ಟದ ಇಳುವರಿ ಬಂದಿದ್ದು, ಅಡಿಕೆಯೊಂದಿಗೆ ಕಾಳು ಮೆಣಸು ಬಳ್ಳಿ ಬೆಳೆಸಿ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಹೈನುಗಾರಿಕೆ, ಮೀನು ಸಾಕಣೆ: ಕೃಷಿ ಜೊತೆಗೆ ಉಪ ಕಸುಬಾಗಿ ಹೈನುಗಾರಿಕೆ ಹಾಗೂ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ. ಹಸುಗಳಲ್ಲಿ ಅಧಿಕ ಹಾಲು ಉತ್ಪಾದನೆಗೆ ಹೊಸ ಪ್ರಯೋಗ ಕಂಡುಕೊಂಡಿರುವ ಹೇಮಂತಕುಮಾರ್, ಹಸಿರೆಲೆ ಆಹಾರವನ್ನು ಹೊಸಕ್ರಮದಲ್ಲಿ ಉಪಯೋಗಿಸುತ್ತಿದ್ದಾರೆ. ಇದರಿಂದ ಹಸು ಹಾಗೂ ಎಮ್ಮೆಗಳಲ್ಲಿ ಹೆಚ್ಚುವರಿ ಹಾಲು ಉತ್ಪಾದನೆ ಆಗುವ ಜೊತೆಗೆ ಹಸುಗಳು ಕೂಡ ಆರೋಗ್ಯದಿಂದಿವೆ.

ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಎದುರಾದರೆ ಬೆಳೆಗಳಿಗೆ ತೊಂದರೆ ಆಗದಂತೆ ತೋಟದ ಮಧ್ಯೆದಲ್ಲಿ ಕೃಷಿ ಹೊಂಡ ಮಾಡಿ ಮೀನು ಸಾಕಣೆ ಮಾಡಲಾಗಿದೆ. ಬೇಸಿಗೆಯಲ್ಲಿ ಅಡಿಕೆ ತೋಟ ತೇವಾಂಶದಿಂದ ಕೂಡಿರುವ ಜತೆಗೆ ವಿದ್ಯುತ್ ಪರಿವರ್ತಕಗಳು ಹಾಳಾದ ಸಂದರ್ಭದಲ್ಲಿ ಕೃಷಿ ಹೊಂಡದಲ್ಲಿನ ನೀರನ್ನು ತೋಟಕ್ಕೆ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಮೀನು ಸಾಕಾಣಿಕೆಯಿಂದ‌ ಪ್ರತಿ ವರ್ಷ ಒಂದು ಲಕ್ಷಕ್ಕೂ ಅಧಿಕ ಲಾಭ ಗಳಿಸುತ್ತಿದ್ದಾರೆ.

ಕೃಷಿಯಲ್ಲಿ ಅಪಾರ ಆಸಕ್ತಿ ಇರುವ ಹೇಮಂತಕುಮಾರ್ ಕೃಷಿ ಇಲಾಖೆ ಆಯೋಜಿಸುವ ತರಬೇತಿ ಕಾರ್ಯಕ್ರಮಗಳಿಗೆ ತಮ್ಮ ಗ್ರಾಮದಿಂದ ಆಸಕ್ತ ರೈತರನ್ನು ಕರೆದೊಯ್ಯುವ ಮೂಲಕ ಕುರಿ ಸಾಕಣೆ, ಹೈನುಗಾರಿಕೆ, ಬಗ್ಗೆ ಅರಿವು ಮೂಡಲು ನೆರವಾಗುತ್ತಿದ್ದಾರೆ.

ತೋಟಕ್ಕೆ ಗೊಬ್ಬರ ಹಾಕಲು ಸಣ್ಣ ಟ್ರಿಲ್ಲರ್‌ ಬಳಸುತ್ತಿದ್ದಾರೆ. ಹಸುಗಳ ಮೂತ್ರ ಹಾಗೂ ಯೂರಿಯಾ ಗೊಬ್ಬರವನ್ನು ಬಳಸಿ ತಾವೇ ಕಳೆನಾಶಕ ಸಿದ್ಧಪಡಿಸಿಕೊಂಡಿದ್ದಾರೆ.

ಹೀಗೆ ಹೊಸ ಪ್ರಯೋಗಗಳ ತುಡಿತ ಹೊಂದಿರುವ ಹೇಮಂತಕುಮಾರ್ ಇಲಾಖೆ ನೀಡುವ ತರಬೇತಿ ಪಡೆದು ಅನುಷ್ಠಾನಗೊಳಿಸುತ್ತಾರೆ. ಸೂಕ್ತ ಸಮಯಕ್ಕೆ ಬೆಳೆಗೆ ಬೇಕಾದ ನೀರು ಹಾಗೂ ಪೋಷಕಾಂಶ ನೀಡಿ ಅಧಿಕ ಇಳುವರಿ ಪಡೆದು ಲಾಭದತ್ತ ಮುಖಮಾಡಿದ್ದಾರೆ.

***

ಹಸಿರೆಲೆ ಆಹಾರದಿಂದ ಹಣ ಉಳಿತಾಯ

ಶೇಂಗಾ ಹಿಂಡಿ ಹಾಗೂ ಹತ್ತಿಕಾಳು 50 ಕೆ.ಜಿ. ಚೀಲಕ್ಕೆ ಮಾರುಕಟ್ಟೆಯಲ್ಲಿ ₹ 2 ಸಾವಿರ ಬೆಲೆ ಇದೆ. ಬೆಲ್ಲ ಹಾಗೂ ಉಪ್ಪು ಮಿಶ್ರಿತ ನೀರಿನಲ್ಲಿ ಹಸಿ ಹುಲ್ಲನ್ನು ಸಣ್ಣದಾಗಿ ಕತ್ತರಿಸಿ ಬ್ಯಾರಲ್‍ನಲ್ಲಿ 40 ದಿನಗಳ ಕಾಲ ನೆನೆಹಾಕಿದರೆ ಮೃದುಗೊಂಡು ಹಸಿರೆಲೆ ಆಹಾರ ಸಿದ್ಧವಾಗುತ್ತದೆ. ಇದು ಕೇವಲ
₹ 150 ವೆಚ್ಚದಲ್ಲಿ ತಯಾರಾಗುತ್ತದೆ. ಪ್ರತಿದಿನ ಹಸು ಹಾಗೂ ಎಮ್ಮೆಗಳಿಗೆ ತಲಾ 1 ಕೆ.ಜಿ.ಯಷ್ಟು ಬಳಸಲಾಗುತ್ತದೆ. ‘ಇದರಿಂದ ತಿಂಗಳಿಗೆ ಸಾವಿರಾರು ರೂಪಾಯಿ ಉಳಿತಾಯ ಮಾಡಬಹುದು’ ಎನ್ನುತ್ತಾರೆ ಹೇಮಂತಕುಮಾರ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.