ಶುಕ್ರವಾರ, ಜನವರಿ 27, 2023
26 °C
ಕರೂರು– ಭಾರಂಗಿ ಹೋಬಳಿ: ಸರ್ಕಾರಗಳಿಗೆ ಕೆಪಿಸಿಸಿ ಕಾರ್ಯದರ್ಶಿ ರಾಜನಂದಿನಿ ಕಾಗೋಡು ಒತ್ತಾಯ

ಕುದರೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ನೆಟ್‌ವರ್ಕ್ ಸೌಲಭ್ಯ ಕಲ್ಪಿಸುವಂತೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ತಾಲ್ಲೂಕಿನ ಕುದರೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಮೊಬೈಲ್ ನೆಟ್‌ವರ್ಕ್ ಸೌಲಭ್ಯ ಕಲ್ಪಿಸಲು ಅಗತ್ಯವಿರುವ ವ್ಯವಸ್ಥೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು ಒತ್ತಾಯಿಸಿದ್ದಾರೆ.

ತಾಲ್ಲೂಕಿನ ಕುದರೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇರುವ ಕಾರಣ ಬುಧವಾರ ಜಿಯೋ ಕಂಪೆನಿ ಪ್ರತಿನಿಧಿಗಳೊಂದಿಗೆ ಗ್ರಾಮಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಮಾತನಾಡಿದರು.

ನಾಡಿಗೆ ಬೆಳಕು ನೀಡಲು ಜಲ ವಿದ್ಯುತ್ ಯೋಜನೆಗಾಗಿ ಈ ಭಾಗದ ಜನರು ತಮ್ಮ ಬದುಕನ್ನೆ ತ್ಯಾಗ ಮಾಡಿದ್ದಾರೆ. ಇಂತಹ ಜನರಿಗೆ ಮೂಲ ಸೌಕರ್ಯ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಡಿಜಿಟಲ್ ತಂತ್ರಜ್ಞಾನದ ಈ ಯುಗದಲ್ಲಿ ಗ್ರಾಮೀಣ ಜನರು ಮೊಬೈಲ್ ನೆಟ್‌ವರ್ಕ್ ಸೌಲಭ್ಯದಿಂದ ವಂಚಿತರಾಗಿರುವುದು ದುರ್ದೈವದ ಸಂಗತಿ ಎಂದರು.

‘ಕರೂರು– ಭಾರಂಗಿ ಹೋಬಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುಡ್ಡ ಬೆಟ್ಟಗಳಿವೆ. ವಿದ್ಯುತ್ ಸರಬರಾಜಿನಲ್ಲೂ ಆಗಾಗ ವ್ಯತ್ಯಯ ಉಂಟಾಗುತ್ತದೆ. ಇದೂ ಸೇರಿ ಹಲವು ತಾಂತ್ರಿಕ ಕಾರಣಗಳಿಗೆ ಖಾಸಗಿ ಮೊಬೈಲ್ ಕಂಪನಿಗಳು ಇಲ್ಲಿ ಟವರ್ ನಿರ್ಮಿಸಲು ಹಿಂದೇಟು ಹಾಕುತ್ತಿವೆ. ಸ್ಥಳ ಪರಿಶೀಲನೆ ನಡೆಸಿ ಟವರ್ ನಿರ್ಮಿಸುವ ಬಗ್ಗೆ ಆಸಕ್ತಿ ವಹಿಸಲು ಜಿಯೋ ಕಂಪೆನಿ ಪ್ರತಿನಿಧಿಗಳನ್ನು ಈ ಭಾಗದ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದೇವೆ’ ಎಂದು ಅವರು ಹೇಳಿದರು.

‘ಮೊಬೈಲ್ ನೆಟ್‌ವರ್ಕ್ ಸೌಲಭ್ಯ ಇಲ್ಲ ಎನ್ನುವ ಕಾರಣಕ್ಕೆ ಈ ಭಾಗದ ಜನರು ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಿ ‘ನೋ ನೆಟ್‌ವರ್ಕ್– ನೋ ವೋಟಿಂಗ್’ ಅಭಿಯಾನ ನಡೆಸುತ್ತಿದ್ದಾರೆ. ಚುನಾವಣೆ ಬಹಿಷ್ಕರಿಸದಂತೆ ಜನರಿಗೆ ಅವರು ಕೇಳುತ್ತಿರುವ ಸೌಲಭ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ’ ಎಂದರು.

ತುಮರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ, ಕರೂರು– ಭಾರಂಗಿ ಹೋಬಳಿಯ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 12ರಿಂದ 15 ಸಣ್ಣ ಹಾಗೂ ದೊಡ್ಡ ಗಾತ್ರದ ಟವರ್ ನಿರ್ಮಿಸಿದರೆ ಈ ಪ್ರದೇಶದ ಶೇ 90ರಷ್ಟು ಭೂ ಭಾಗಕ್ಕೆ ನೆಟ್‌ವರ್ಕ್ ಸೌಲಭ್ಯ ಕಲ್ಪಿಸಬಹುದು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ್ ಗಂಟೆ, ಮಾಜಿ ಸದಸ್ಯೆ ಸವಿತಾ ದೇವರಾಜ್, ದೇವರಾಜ ಕಪ್ಪದೂರು, ಓಂಕಾರ್ ಜೈನ್, ಗಣೇಶ್, ಡಿ.ದಿನೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು