ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಕಾರ್ಮಿಕ ದಿನಾಚರಣೆ: ಹಕ್ಕುಗಳಿಗೆ ಕಾರ್ಮಿಕರ ಕಾನೂನು ಹೋರಾಟ

Last Updated 1 ಮೇ 2022, 5:43 IST
ಅಕ್ಷರ ಗಾತ್ರ

ಭದ್ರಾವತಿ: ‘ಸರ್, ನಿಮ್ಮ ಹಕ್ಕಿನ ಕಾನೂನು ಹೋರಾಟ ಎಲ್ಲಿಗೆ ಬಂತು’ಎಂದು ಪ್ರಶ್ನಿಸಿದರೆ, ಸದ್ಯ ಕೋರ್ಟ್ ರಜೆ ಇದೆ ಸಾರ್. ಜೂನ್ ನಂತರದಲ್ಲಿ ಪುನಃ ಆರಂಭ ಆಗುತ್ತೆ’ ಎಂದು ಎಂಪಿಎಂ ಕಾರ್ಮಿಕ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್ ಹೇಳಿದರು.

2015 ನವೆಂಬರ್ ತಿಂಗಳಲ್ಲಿ ಎಂಪಿಎಂ ಕಾರ್ಖಾನೆ 1200 ಮಂದಿಗೆ ಸ್ವಯಂ ನಿವೃತ್ತಿ ಘೋಷಿಸುವ ಮೂಲಕ ಸಹಸ್ರಾರು ಗುತ್ತಿಗೆ ಕಾರ್ಮಿಕರಿಗೂ ಬಾಕಿ ವೇತನ ಸೇರಿ ಕೊಡುವುದನ್ನು ಕೊಟ್ಟು ಕಾರ್ಖಾನೆ ಉತ್ಪಾದನೆ ಸ್ಥಗಿತ ಮಾಡಿದ್ದು ಈಗ ಇತಿಹಾಸ.

ಕೆಲವು ನೌಕರರು ಎಂಪಿಎಂ ಕಡೆಯಿಂದ ಬೇರೊಂದಿಷ್ಟು ರಾಜ್ಯ ಸರ್ಕಾರದ ನಿಗಮ, ಮಂಡಳಿಗಳಿಗೆ ಎರವಲು ಸೇವೆ ಮೇಲೆ ತೆರಳಿದರೆ ಇನ್ನು ನೂರಕ್ಕೂ ಅಧಿಕ ಮಂದಿ ಸ್ವಯಂ ನಿವೃತ್ತಿಗೆ ಅರ್ಜಿ ಹಾಕದೆ ಕಾನೂನು ಸಮರ ಮೂಲಕ ಎಂಪಿಎಂ ನೌಕರರಾಗಿ ಬದುಕು ಸವೆಸಲು ಮುಂದಾಗಿದ್ದಾರೆ.

ಇದಕ್ಕೂ ಸಂಚಕಾರ ಎಂಬಂತೆ ಕಳೆದ ವರ್ಷದ ಸೆಪ್ಟೆಂಬರ್‌ 7 ರಂದು ರಾಜ್ಯ ಸರ್ಕಾರ ಹೊರಡಿಸಿದ ಕ್ಲೋಸರ್ ಆದೇಶದಂತೆ ಎಂಪಿಎಂ ಬಂದ್ ಆಯಿತು. ಆದರೆ ಈ ನೌಕರರು ಮಾತ್ರ ಜಗ್ಗದೆ ಈಗಲೂ ತಮ್ಮ ಕಾನೂನು ಸಮರದ ಹೋರಾಟ ಮುನ್ನಡೆಸುತ್ತಿದ್ದಾರೆ.

ನ್ಯಾಯಾಲಯದತ್ತ ಮುಖ: ‘ಕಾರ್ಖಾನೆ ಕಡೆಯಿಂದ ತಮಗೆ ಬರಬೇಕಾದ ನೆರವು ಹಾಗೂ ಇನ್ನಿತರೆ ಬಾಕಿ ವೇತನ, ತುಟ್ಟಿಭತ್ಯೆ ಹಾಗೂ ನೌಕರರಾಗಿ ತಮ್ಮನ್ನು ಮುಂದುವರಿಸುವ ಸಂಬಂಧ ಕಾನೂನು ಸಮರ ನಡೆಸಿದ್ದೇವೆ’ ಎನ್ನುತ್ತಾರೆತಮ್ಮ ಹಕ್ಕಿನ ರಕ್ಷಣೆಗಾಗಿ ಕಾನೂನು ಸಮರ ನಡೆಸಿರುವ ಸದ್ಯದ ನೌಕರರ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್.

ಎಂಪಿಎಂ ಅರಣ್ಯವನ್ನು ಕಾರ್ಖಾನೆ ಪಾಲಿಗೆ ಮುಂದಿನ ಮೂವತ್ತು ವರ್ಷಗಳ ತನಕ ಮುಂದುವರಿಸುವ ನಿರ್ಧಾರ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟದ ಕೈಗೊಂಡಿದ್ದ ನಿರ್ಧಾರ ಹೊಸ ಭರವಸೆ ಮೂಡಿಸಿತ್ತು. ಆದರೆ ಮಂದಗತಿಯ ಹೆಜ್ಜೆಗಳು ವಿಳಂಬಕ್ಕೆಕಾರಣ ಎನ್ನುತ್ತಾರೆ ಅಧಿಕಾರಿಗಳು.

72 ಜನರ ಸಂಕಷ್ಟ: ‘131 ಮಂದಿಗೆ ಎರವಲು ಸೇವೆ ಮೇಲೆ ಸರ್ಕಾರದ ವಿವಿಧ ಇಲಾಖೆ, ನಿಗಮಗಳಲ್ಲಿ ಕೆಲಸ ನಿರ್ವಹಿಸಲು ಅವಕಾಶ ಸಿಕ್ಕಿದ್ದು ಅವರಿಗೂ ವೇತನ ಸಿಗುತ್ತಿದೆ. ಆದರೆ 72 ಮಂದಿ ನೌಕರರು ಅತಂತ್ರ ಪರಿಸ್ಥಿತಿಯಲ್ಲಿದ್ದು, ವೇತನವೂ ಇಲ್ಲದೆ ಬದುಕು ನಡೆಸುವ ಪರಿಸ್ಥಿತಿ’ ಇದೆ ಎನ್ನುತ್ತಾರೆ ಚಂದ್ರಶೇಖರ್.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ರಾಘವೇಂದ್ರ ಅವರ ಪ್ರಯತ್ನ ಫಲವಾಗಿ ಎರವಲು ಸೇವೆಯ ಭಾಗ್ಯ ಕೆಲವರಿಗೆ ಸಿಕ್ಕಿದ್ದು ಇದರ ಸದುಪಯೋಗವಾಗಿದೆ. ಆದರೆ ಭವಿಷ್ಯದ ದಿನದಲ್ಲಿ ಯಾವ ರೀತಿಯ ಸಂಕಷ್ಟ ಎದುರಾಗುತ್ತದೋ ಎಂಬ ಭಯದ ವಾತಾವರಣ ಮನೆ ಮಾಡಿದೆ ಎನ್ನುತ್ತಾರೆ ಅವರು.

ಮೇ ದಿನದ ಕೆಂಬಣ್ಣ ಈಗಿಲ್ಲ: ಮೇ ದಿನಾಚರಣೆಯ ಕೆಂಬಣ್ಣದ ರಂಗಿನ ಬಂಟಿಂಗ್ಸ್, ಧ್ವಜಗಳ ಹಾರಾಟ, ಕಾರ್ಮಿಕರ ಸಭೆಗಳು ಘೋಷಣೆಯ ಸದ್ದಿನ ಕಳೆಯನ್ನು ಏಳು ವರ್ಷಗಳಿಂದ ಕಳೆದುಕೊಂಡಿರುವ ಎಂಪಿಎಂ ಕಾರ್ಖಾನೆ ಹಾಗೂ ಸುತ್ತಲಿನ ಕಾರ್ಮಿಕ ವಸತಿ ಗೃಹಗಳ ಸಮುಚ್ಛಯದಲ್ಲಿ ಇದೀಗ ಮೌನ ಆವರಿಸಿದೆ.

‘2015ರಲ್ಲಿ ಕಾರ್ಖಾನೆ ನಷ್ಟದ ನೆಪದಲ್ಲಿ ಸ್ವಯಂ ನಿವೃತ್ತಿ ಯೋಚನೆ ಮಾಡಿದ ಸರ್ಕಾರ ಇದರ ಪುನಶ್ಚೇತನ ಕುರಿತು ನಕ್ಷೆ ತಯಾರು ಮಾಡದ ಕಾರಣ ಬದುಕು ಸಂಕಷ್ಟದಲ್ಲಿದೆ’ ಎನ್ನುವ ಕಾರ್ಮಿಕರು, ಕಾರ್ಖಾನೆ ಗತವೈಭವ ನೆನೆಯುತ್ತಾ ಮೌನಕ್ಕೆ ಶರಣಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT