ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣ ಹೊಸತಲ್ಲ, ಜನರ ಧ್ವನಿಯಾಗಿ ಕೆಲಸ ಮಾಡುವೆ: ಗೀತಾ ಶಿವರಾಜಕುಮಾರ್

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್
Published 25 ಮಾರ್ಚ್ 2024, 14:19 IST
Last Updated 25 ಮಾರ್ಚ್ 2024, 14:19 IST
ಅಕ್ಷರ ಗಾತ್ರ

ಸೊರಬ: ಸಾರ್ವಜನಿಕ‌ ಜೀವನದಲ್ಲಿ ಬದ್ಧತೆ ಪ್ರದರ್ಶಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರಂತೆ ಜನರ ಧ್ವನಿಯಾಗಿ ಕೆಲಸ ಮಾಡುವೆ ಎಂದು ‌ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ತಿಳಿಸಿದರು.

ತಾಲ್ಲೂಕಿನ ಚಂದ್ರಗುತ್ತಿ ರೇಣುಕಾಂಬಾ ದೇವಸ್ಥಾನಕ್ಕೆ ಪತಿ ಶಿವರಾಜಕುಮಾರ್, ಸಹೋದರ ‌ಹಾಗೂ‌ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮತ್ತು ನೂರಾರು ಕಾರ್ಯಕರ್ತರೊಂದಿಗೆ ಸೋಮವಾರ ತೆರಳಿ‌ ವಿಶೇಷ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ನನಗೆ ರಾಜಕಾರಣ ಹೊಸತಲ್ಲ. ತಂದೆ ಬಂಗಾರಪ್ಪ ಅವರಿಂದ ಸಾಕಷ್ಟು ಕಲಿತಿದ್ದೇನೆ. ಸಹೋದರ‌ ಮಧು ಬಂಗಾರಪ್ಪ ಅವರಿಂದ ರಾಜಕಾರಣದ ಬಗ್ಗೆ ಕೇಳಿ ತಿಳಿದುಕೊಂಡಿದ್ದೇನೆ. ನಾವಿಬ್ಬರೂ ಸೇರಿ ಎಸ್.ಬಂಗಾರಪ್ಪ ಅವರಂತೆಯೇ ಜನಪರ ರಾಜಕಾರಣವನ್ನು‌ ಮುಂದುವರಿಸಿಕೊಂಡು ಹೋಗುತ್ತೇನೆ’ ಎಂದು ತಿಳಿಸಿದರು.

‘ರೇಣುಕಾಂಬಾ ದೇವಿ ನಮ್ಮ ಮನೆ ದೇವರಾಗಿದ್ದು ಹಿಂದೆ ತಾಯಿ ಜತೆಗೆ ಭೇಟಿ ನೀಡಿದ್ದೆ. ಈಗ ಸಹೋದರ ಮಧು ಬಂಗಾರಪ್ಪ ಹಾಗೂ ಪತಿ ಶಿವರಾಜಕುಮಾರ್ ಅವರ ಜೊತೆಗೆ ಆಗಮಿಸಿದ್ದು ಸಂಸತ ಉಂಟು ಮಾಡಿದೆ’ ಎಂದು ಹೇಳಿದರು.

ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆಗಳನ್ನು ನಡೆಸಿದ್ದು ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಜನಪರ ಆಡಳಿತ ನೀಡುವ ಕಾಂಗ್ರೆಸ್ ಪರ ಜನರ ಒಲವು ಇದೆ. ಜಿಲ್ಲೆಯಲ್ಲಿಯೂ ಉತ್ತಮ ಸ್ಪಂದನೆ ಇದ್ದು, ಗೆಲ್ಲುವ ವಿಶ್ವಾಸ ಇದೆ ಎಂದರು.

ನಟ ಶಿವರಾಜಕುಮಾರ್ ಅವರು ತಮ್ಮ ಪತ್ನಿ ಗೀತಾ ಶಿವರಾಜಕುಮಾರ್ ಅವರ ಕೈ ಹಿಡಿದು, ಸಂತಸದಿಂದ ಗುಡ್ಡ ಏರಿ ರೇಣುಕಾಂಬಾ ದೇವಿ, ಪರಶುರಾಮ, ಕಾಲಭೈರೆರವೇಶ್ವರ, ಶೂಲದ ಭೀರಪ್ಪ ಸೇರಿ ಪರಿವಾರ ದೇವರುಗಳಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

‘ರಾಜಕಾರಣ ಹಾಗೂ ಸಿನಿಮಾ ಕ್ಷೇತ್ರ ಯುದ್ಧವಿದ್ದಂತೆ. ಈ ಯುದ್ಧವನ್ನು ಗೆಲ್ಲಲು ಪ್ರೀತಿ, ವಿಶ್ವಾಸ ಬೇಕು. ಅವುಗಳನ್ನೇ ಮುಂದಿಟ್ಟುಕೊಂಡು ಸ್ವಇಚ್ಛೆಯಿಂದಲೇ ಗೀತಾ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ಗೆಲ್ಲುವ ವಿಶ್ವಾಸವಿದೆ’ ಎಂದು ನಟ ಶಿವರಾಜಕುಮಾರ್‌ ತಿಳಿಸಿದರು.

ಗೀತಾ ಪರವಾಗಿ ಚುನಾವಣಾ ಪ್ರಚಾರ ನಡೆಸಲು ಚಲನಚಿತ್ರ ನಟ, ನಟಿಯರನ್ನು ಆಹ್ವಾನಿಸಿಲ್ಲ. ನಮ್ಮ ಕುಟುಂಬದ ಮೇಲೆ ಅಪಾರ ಪ್ರೀತಿ, ಗೌರವ ಹೊಂದಿದ ಅವರೇ ಸ್ವಇಚ್ಛೆಯಿಂದ ಬಂದರೂ ಅಚ್ಚರಿ ಇಲ್ಲ ಎಂದು ಹೇಳಿದರು.

‘ನಮ್ಮ ತಂದೆ ಡಾ.ರಾಜಕುಮಾರ್ ಅವರು ಆಸಕ್ತಿ ಇರುವ ಕೆಲಸಗಳನ್ನು ಮಾತ್ರ ಮಾಡಿ ಎಂದು ಸಲಹೆ ನೀಡುತ್ತಿದ್ದರು. ಎಸ್.ಬಂಗಾರಪ್ಪ ಅವರ ಮಗಳಾದ ಗೀತಾ ಕೂಡ ರಾಜಕಾರಣವನ್ನು ಆಸಕ್ತಿದಾಯಕ ವಿಷಯವಾಗಿ ತೆಗೆದುಕೊಂಡು ಚುನಾವಣೆಗೆ ಸ್ಪರ್ಧಿಸಿದ್ದಾಳೆ. ಜನಪರವಾಗಿ ಕೆಲಸ ನಿರ್ವಹಿಸುತ್ತಾಳೆ. ಮೈಸೂರಿನ ಶಕ್ತಿಧಾಮ ಇನ್ನಿತರ ಜವಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದಾಳೆ’ ಎಂದು ತಿಳಿಸಿದರು.

ಸಚಿವ ಮಧು ಬಂಗಾರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಬಲಿ ಬಂಗಾರಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಗಣಪತಿ, ಎನ್.ಜಿ.ನಾಗರಾಜ್, ಸುನಿಲ್‍ಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಿತಾ ಕೃಷ್ಣಪ್ಪ, ಸದಸ್ಯರಾದ ಶ್ರೀಮತಿ ಚಂದ್ರಕಾಂತ್, ರೇಣುಕಾಪ್ರಸಾದ್, ಎಂ.ಪಿ.ರತ್ನಾಕರ್, ಧರ್ಮಪ್ಪ, ಜೆ.ಪ್ರಕಾಶ್, ದರ್ಶನ್, ಪ್ರಭು ಶಿಗ್ಗಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT