ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ | ನನ್ನ ಸ್ಪರ್ಧೆ ನಿಶ್ಚಿತ, ಗೊಂದಲ ಬೇಡ – ಕೆ.ಎಸ್.ಈಶ್ವರಪ್ಪ

Published 11 ಏಪ್ರಿಲ್ 2024, 8:23 IST
Last Updated 11 ಏಪ್ರಿಲ್ 2024, 8:23 IST
ಅಕ್ಷರ ಗಾತ್ರ

ಶಿವಮೊಗ್ಗ: ’ನಾನು ನರೇಂದ್ರ ಮೋದಿ ಫೋಟೊ ಬಳಕೆ ಮಾಡಬಾರದು ಎಂದು ಹೇಳುವ ಬಿಜೆಪಿಯವರು ಯಡಿಯೂರಪ್ಪ, ರಾಘವೇಂದ್ರ ಮತ್ತು ವಿಜಯೇಂದ್ರ ಅವರ ಫೋಟೋ ಇಟ್ಟುಕೊಂಡು ಹೋಗಿ ಚುನಾವಣೆ ಗೆದ್ದು ತೋರಿಸಲಿ ನೋಡೋಣ‘ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ನರೇಂದ್ರ ಮೋದಿ ವಿಶ್ವನಾಯಕ. ಅವರ ಫೋಟೋ ಹಾಕಬಾರದು ಎಂದು ನನಗೆ ಹೇಳಲು ಇವರ್ಯಾರು? ಮೋದಿ ಯಾರಪ್ಪನ ಮನೆಯ ಆಸ್ತಿ ಅಲ್ಲ. ಯಡಿಯೂರಪ್ಪ ಕುಟುಂಬದವರು ತಾಕತ್ತಿದ್ದರೆ ನರೇಂದ್ರ ಮೋದಿ ಫೋಟೋ ಬಿಟ್ಟು ಪ್ರಚಾರ ಮಾಡಿ ಗೆಲ್ಲಲಿ ನೋಡೋಣ‘ ಎಂದರು.

’ನಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಎಂದು ಕೆಲವು ಶಕ್ತಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿವೆ. ಹೀಗಾಗಿ ಕಾರ್ಯಕರ್ತರಲ್ಲಿ ಇನ್ನೂ ಗೊಂದಲವಿದೆ. ಸ್ಪರ್ಧೆಯಿಂದ ಹಿಂದೆ ಸರಿದಾರು ಎಂಬ ಆತಂಕವಿದೆ. ಸೋಲಿನ ಭಯದಿಂದ ವಿರೋಧಿಗಳು ಗೊಂದಲ ಸೃಷ್ಟಿಸುತ್ತಿದ್ದಾರೆ. ಯಾವ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನನ್ನನ್ನು ನಂಬಿಕೊಂಡವರನ್ನು ನಡು ನೀರಲ್ಲಿ ಕೈ ಬಿಡುವುದಿಲ್ಲ‘ ಎಂದು ಸ್ಪಷ್ಟಪಡಿಸಿದರು.

’ಕಾಂಗ್ರೆಸ್‌ ಅಭ್ಯರ್ಥಿ ಬಗ್ಗೆ ಅತೃಪ್ತಿ ಇರುವುದರಿಂದ ನನ್ನ ಬೆಂಬಲಕ್ಕೆ ದೊಡ್ಡ ಸಂಖ್ಯೆಯಲ್ಲಿ ಹಿಂದುಳಿದ ವರ್ಗದ ಜನರು ನಿಂತಿದ್ದಾರೆ. ದಲಿತರು ಜೊತೆಯಾಗಿದ್ದಾರೆ. ಬಿಜೆಪಿ ಬೆಂಬಲಿಸುತ್ತಿದ್ದ ಬ್ರಾಹ್ಮಣರು, ಲಿಂಗಾಯಿತರು ಮತ್ತು ಒಕ್ಕಲಿಗರು ಅವರದ್ದೇ ಆದ ಬೇರೆ ಬೇರೆ ಕಾರಣಕ್ಕೆ ನನಗೆ ಬೆಂಬಲ ಸೂಚಿಸಿದ್ದಾರೆ. ಇದು ನನ್ನಲ್ಲಿ ಆತ್ಮವಿಶ್ವಾಸ ಮೂಡಿಸಿದೆ‘ ಎಂದರು.

’ನನ್ನ ಜೊತೆ ಕೈಜೋಡಿಸಿರುವ ಸಾವಿರಾರು ಕಾರ್ಯಕರ್ತರ ಮುಖವನ್ನು ನಾನು ಇದೇ ಮೊದಲ ಬಾರಿಗೆ ನೋಡಿದ್ದು. ಆದರೆ ಅವರು ನನ್ನನ್ನು, ನನ್ನ ಉದ್ದೇಶವನ್ನು, ಹಿಂದುತ್ವ ಮತ್ತು ಪಕ್ಷ ಉಳಿಸುವ ನನ್ನ ಬದ್ಧತೆ ನಂಬಿ ಜೊತೆಯಾಗಿದ್ದಾರೆ‘ ಎಂದು ಹೇಳಿದರು.

’ಪ್ರಚಾರ ಮಾಡಲು ಬೇರೆ ಯಾವ ದೊಡ್ಡ ನಾಯಕರೂ ನನಗಿಲ್ಲ. ಸಾಮಾನ್ಯ ಕಾರ್ಯಕರ್ತರೇ ಸ್ಟಾರ್‌ ಪ್ರಚಾರಕರು ಎಂದು ಹೇಳಿದ ಈಶ್ವರಪ್ಪ, ರಾಷ್ಟ್ರಭಕ್ತ ಮುಸಲ್ಮಾನರು ಮತ ಖಂಡಿತವಾಗಿಯೂ ಬೀಳುತ್ತವೆ. ನನ್ನನ್ನು ಅರ್ಥ ಮಾಡಿಕೊಂಡ, ನನ್ನಿಂದ ಸಹಾಯ ಪಡೆದ ಮುಸಲ್ಮಾನರು ಖಂಡಿತವಾಗಿಯೂ ನನಗೆ ಮತ ಚಲಾಯಿಸುತ್ತಾರೆ‘ ಎಂದು ಹೇಳಿದರು.

ಬಿಜೆಪಿ ವರಿಷ್ಠರ ಜೊತೆ ನನ್ನ ಮಾತುಕತೆ ಮುಗಿದಿದೆ. ಇನ್ನು ಯಾರ ಜೊತೆಗೂ ಮಾತುಕತೆಗೆ ಕೂರುವುದಿಲ್ಲ. ನನ್ನನ್ನು ಇನ್ನೂ ಪಕ್ಷದಿಂದ ಯಾಕೆ ಉಚ್ಚಾಟಿಸಿಲ್ಲ ಎಂಬುದೇ ಗೊತ್ತಾಗುತ್ತಿಲ್ಲ. ಉಚ್ಚಾಟಿಸಿದರಷ್ಟೇ ಇನ್ನಷ್ಟು ಕಟುವಾಗಿ ಮಾತಾಡಲು ಸಾಧ್ಯ.
ಕೆ.ಎಸ್.ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT