ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲ: ಮಲೆನಾಡ ರಸ್ತೆಗಳು ದುಃಸ್ವಪ್ನ

ಸಸಿಮಡಿಗೆ ಹದಗೊಂಡ ಗ್ರಾಮೀಣ ರಸ್ತೆಗಳು
Last Updated 4 ಜುಲೈ 2022, 4:31 IST
ಅಕ್ಷರ ಗಾತ್ರ

ಶಿವಮೊಗ್ಗ: ಈಗ ಮತ್ತೊಂದು ಮಳೆಗಾಲ ಆರಂಭವಾಗಿದೆ. ಮಲೆನಾಡಿನಲ್ಲಿ ಬಿಟ್ಟುಬಿಡದೆ ಸುರಿವ ಮಳೆ, ತುಂಬಿ ಹರಿವ ನದಿ, ಹಳ್ಳಗಳ ನಡುವೆ ದೈನಂದಿನ ಬದುಕಿನ ಬಂಡಿ ನಿಭಾಯಿಸಲು ಗ್ರಾಮೀಣ ಭಾಗದಲ್ಲಿ ರಸ್ತೆಗಳೇ ಸಂಪರ್ಕ ಕೊಂಡಿಗಳಾಗಿವೆ.

ಇದೇ ಮಾತು ಅಲ್ಲಿನ ಪಟ್ಟಣಗಳಿಗೂ ಅನ್ವಯಿಸುತ್ತದೆ. ಆದರೆ ಬಹುತೇಕ ಕಡೆ ಟಾರು ಕಾಣದ ರಸ್ತೆಗಳಲ್ಲಿ ಮಳೆಗಾಲದಲ್ಲಿ ಸಂಚರಿಸುವುದೇ ದುಸ್ತರ. ಸಂಪರ್ಕ ಕೊಂಡಿಗಳು ಸಂಚಾರ ದುಃಸ್ವಪ್ನಕ್ಕೂ ಕಾರಣವಾಗುತ್ತಿವೆ.

ಮಲೆನಾಡಿನಲ್ಲಿ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಸರ್ಕಾರ ಹೇಳುತ್ತದೆ. ಜನಪ್ರತಿನಿಧಿಗಳೂ ಆ ನಿಟ್ಟಿನಲ್ಲಿ ಆಸ್ಥೆ ವಹಿಸುವ ಭರವಸೆ ನೀಡುತ್ತಾರೆ. ಅದರ ನಡುವೆಯೂ ಇಲ್ಲಿನ ಗ್ರಾಮೀಣ ಹಾಗೂ ಪಟ್ಟಣ ಭಾಗದ ರಸ್ತೆಗಳು ಹೇಗಿವೆ ಎಂಬುದರ ಬಗ್ಗೆ ಈ ವಾರದ ನಮ್ಮ ಜನ ನಮ್ಮ ಧ್ವನಿ ಬೆಳಕು ಚೆಲ್ಲಿದೆ.

ಬಾಲ್ಯದ ಜಾರಬಂಡಿ ನೆನಪಿಸುವ ಹಳ್ಳಿ ರಸ್ತೆ

ನಿರಂಜನ ವಿ

ತೀರ್ಥಹಳ್ಳಿ: ಮಲೆನಾಡಿನ ಗ್ರಾಮೀಣ ರಸ್ತೆಗಳು ಅಭಿವೃದ್ದಿಗೆ ತೆರೆದುಕೊಂಡಿವೆ. ಆದರೆ ಅರೆಬರೆ ಕಾಮಗಾರಿಯಿಂದ ರಸ್ತೆಗಳಿಗೆ ಹಾಕಿದ ಗ್ರಾವೆಲ್‌ ಮೃದುಗೊಂಡು ವಾಹನಗಳು ಓಡಾಡದ ಪರಿಸ್ಥಿತಿ ಇದೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಶಾಲೆಗೆ ತೆರಳುವ ಮಕ್ಕಳಿಗೆ ಇದೊಂದು ಸೋಜಿಗವಾಗಿ ಕಾಣಿಸುತ್ತಿದೆ. ರಜಾ ದಿನಗಳಲ್ಲಿ ರಸ್ತೆಯನ್ನೇ ಜಾರಬಂಡಿ ಮಾಡಿಕೊಂಡು ಆಟವಾಡುವ ದಿನಗಳಿಗೆ ಮೆಲುಕು ಹಾಕುವಷ್ಟು ಕೋಮಲವಾಗಿ ಹಳ್ಳಿಯ ರಸ್ತೆಗಳು ರೂಪುಗೊಂಡಿವೆ.

ತಾಲ್ಲೂಕಿನ ಮುಖ್ಯ ರಸ್ತೆಗಳು ಹೊಂಡಗುಂಡಿಯಿಂದ ಕೂಡಿದ್ದು ಒಂದೆರಡು ಅಡಿಯಷ್ಟು ನೀರು ತುಂಬಿಕೊಂಡ ಸ್ಥಿತಿಯಲ್ಲಿವೆ. ಟಾರ್‌, ಕಾಂಕ್ರಿಟ್‌ ರಸ್ತೆಗಳ ಹೊಂಡ ಗುಂಡಿಗಳು ಸುಗಮ ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿದೆ. ಮುಖ್ಯರಸ್ತೆಗೆ ಅಂಟಿಕೊಂಡ ಬಹುತೇಕ ಗ್ರಾಮೀಣ ರಸ್ತೆಗಳ ಸ್ಥಿತಿ ಚಿಂತಾಜನಕವಾಗಿದೆ.

ಬಿರುಸುಗೊಂಡ ಕೃಷಿ ಚಟುವಟಿಕೆಯಿಂದ ಬಾಗಾಯ್ತು, ತರಿ ಜಮೀನಿನ ಔಷಧೋಪಚಾರ ನಡೆಯುತ್ತಿದೆ. ಕೃಷಿ ವಾಹನಗಳಾದ ಟ್ರಾಕ್ಟರ್‌, ಟಿಲ್ಲರ್‌, ಕಲ್ಟಿವೇಟರ್‌, ವೀಡರ್‌ಗಳು ರಸ್ತೆಗೆ ತಾಗಿ ಬಹಳಷ್ಟು ಹಾಳಾಗುತ್ತಿವೆ. ಇದರ ಜೊತೆಗೆ ಗೃಹ ನಿರ್ಮಾಣದ ಸಾಮಾಗ್ರಿ ಹೊತ್ತೊಯ್ಯುವ ಬೃಹತ್‌ ಗಾತ್ರದ ಲಾರಿ, ಪಿಕಪ್‌, ಗೂಡ್ಸ್‌ ವಾಹನಗಳಿಂದ ಮಣ್ಣಿನ ರಸ್ತೆಗಳಲ್ಲಿ ಬೈಕು, ಕಾರುಗಳು ಚಲಿಸದಂತಹ ಸ್ಥಿತಿ ನಿರ್ಮಾಣವಾಗಿದೆ.

ಓಡಾಟಕ್ಕೆ ತ್ರಾಸು

ಭತ್ತದ ಸಸಿ ನೆಡಲು ತಯಾರಿ ಮಾಡುವ ಸಸಿಮಡಿಗಳಂತೆ ಹಳ್ಳಿಗಳ ರಸ್ತೆ ಕಾಣಿಸುತ್ತಿವೆ. ಮಹಿಳೆಯರು, ವೃದ್ದರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ನಡೆಯಲು ಸಾಧ್ಯವಾಗದಂತಿದೆ. ಮನೆಯಿಂದ ತಡವಾಗಿ ಹೊರಟು ಬಸ್ಸು ಹಿಡಿಯುವ ಭರದಲ್ಲಿ ಓಡುವಾಗ ಜಾರಿ ಬಿದ್ದು ಬಟ್ಟೆ ಬದಲಾಯಿಸುವ ಪ್ರಮೇಯ ಬಹಳಷ್ಟು ಕಡೆಗಳಲ್ಲಿ ನಡೆದಿವೆ. ಬೈಕ್‌ ಏರಿದವರು ಕೂಡ ಮಣ್ಣು ಎಳೆದುಕೊಂಡು ಹೋಗುವ ಕಡೆಗೆ ತಿರುಗಿ ಜಾರಿ ಬೀಳುವಂತಹ ಸ್ಥಿತಿ ಇದೆ. ಹಳ್ಳಿ ಪ್ರದೇಶಕ್ಕೆ ಕೃಷಿ, ಬ್ಯಾಂಕ್‌, ಕಂದಾಯ, ಸರ್ವೆ, ಡಾಕ್ಟರ್‌, ಶಿಕ್ಷಕರು ಬೈಕ್‌ನಲ್ಲಿ ಹೋಗುವಾಗ ಗ್ರಾಮೀಣ ಪ್ರದೇಶದವರ ಮಾರ್ಗದರ್ಶನ, ಸಹಾಯ ಪಡೆಯಲೇಬೇಕು. ಖಾಸಗಿ ಕಂಪನಿಗಳ ಸೇವೆಗಳಿಗಾಗಿ ಪಟ್ಟಣದಿಂದ ತೆರಳುವ ಯುವಕ, ಯುವತಿಯರು ರಸ್ತೆಯ ಸ್ಥಿತಿಗತಿ ತಿಳಿಯದೆ ಜಾರುತ್ತಿದ್ದಾರೆ.

ಸಸಿ ನೆಡುವ ಅಭಿಯಾನ

ಮಲೆನಾಡಿನ ರಸ್ತೆಗಳಿಗೆ ಜಲ್ಲಿ, ಮರುಬು ಮಣ್ಣು, ಬಂಡೆ ಮಣ್ಣು, ಎಂ ಸ್ಯಾಂಡ್‌ ತಳಿಯುವಂತೆ ಗ್ರಾಮ ಪಂಚಾಯಿತಿ ಮನವಿ ನೀಡಿದರೂ ಸ್ಪಂದಿಸುತ್ತಿಲ್ಲ. ಕಳೆದ 2021ರಲ್ಲಿ ತಾಲ್ಲೂಕಿನ ಮಲ್ಲೇಸರ ಗ್ರಾಮಸ್ಥರು ರಸ್ತೆಯ ಮಧ್ಯೆ ನಾಟಿ ಮಾಡುವ ಅಭಿಯಾನ ನಡೆಸಿದ್ದರು. ರಾಜ್ಯ ಮಟ್ಟದ ಸುದ್ದಿಯಾದ ಪರಿಣಾಮ ತಕ್ಷಣ ರಸ್ತೆ ನಿರ್ಮಾಣವಾಗಿದೆ. ಇದನ್ನು ತಿಳಿದ ಬಹಳಷ್ಟು ಗ್ರಾಮಸ್ಥರು ಸಸಿ ನೆಡುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಸಸಿಗಳು ಆರಂಭವಾಗದ ಕಾರಣ ಅಭಿಯಾನಕ್ಕೆ ತೊಡಕಾಗಿದೆ.

ಪುರಸಭೆಯಾದರೂ ಅಭಿವೃದ್ಧಿಗೊಳ್ಳದ ರಸ್ತೆ

ರಾಘವೇಂದ್ರ ಟಿ.

ಸೊರಬ: ಇಲ್ಲಿನ ಪುರಸಭೆ ಈ ಮೊದಲು ಪಟ್ಟಣ ಪಂಚಾಯ್ತಿ ಆಗಿದ್ದು,ವರ್ಷದ ಹಿಂದೆ ಮೇಲ್ದರ್ಜೆಗೆ ಏರಿದೆ. ಆದರೆ ರಸ್ತೆಗಳ ದುರಸ್ತಿ ಕಾರ್ಯ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಕೆಲವು ಭಾಗದಲ್ಲಿ ಬಾಕ್ಸ್ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದೆ.

ಚರಂಡಿ ನೀರು ರಸ್ತೆ ಮೇಲೆ ಹರಿಯುವ ಪರಿಣಾಮ ರಸ್ತೆಯ ಮಧ್ಯೆ ಆಳ ಗುಂಡಿಗಳು ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ಕಾನಕೇರಿ ವ್ಯಾಪ್ತಿಯ ಬಹುತೇಕ ವಾರ್ಡ್‍ಗಳ ರಸ್ತೆಗಳು ಡಾಂಬರೀಕರಣಗೊಂಡಿಲ್ಲ.

’ರಸ್ತೆಯ ಇಕ್ಕೆಲಗಳಲ್ಲಿ ಗಿಡ ಗಂಟೆ ಬೆಳೆದು ನಿಂತಿವೆ. ಚರಂಡಿಯಲ್ಲಿ ಮಣ್ಣು ತುಂಬಿಕೊಂಡಿದೆ. ಆಸ್ಪತ್ರೆಗಳಿಗೆ ತೆರಳಲು ಆಟೊ ಸವಾರರು ಬರಲು ಹಿಂದೇಟು ಹಾಕುತ್ತಾರೆ‘ ಎಂದು ಸ್ಥಳೀಯರಾದ ನಜೀಬುಲ್ಲಾ ದೂರುತ್ತಾರೆ.

ಕಾನಕೇರಿ ಬಡಾವಣೆಯ ನಾಲ್ಕು ವಾರ್ಡ್‍ಗಳಲ್ಲೂ ಬಹುತೇಕ ಜನ ಕೂಲಿ ಕಾರ್ಮಿಕರೆ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಒಂದೆಡೆ ರಸ್ತೆಗಳು ಗುಂಡಿಯಿಂದ ಕೂಡಿದ್ದರೆ, ಚರಂಡಿ ಸ್ವಚ್ಛತೆ ಮಾಡದ ಕಾರಣ ಮಳೆಯ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರಿಂದ ಕೆಸರುಯುಕ್ತ ನೀರು ರಸ್ತೆ ಮೇಲೆ ಹರಿಯುತ್ತಿದೆ.

ಬಹುತೇಕ ಗ್ರಾಮಗಳಿಗೆ ಉತ್ತಮ ರಸ್ತೆ ಸೌಲಭ್ಯ

ಎಚ್.ಎಸ್. ರಘು

ಶಿಕಾರಿಪುರ: ತಾಲ್ಲೂಕಿನಲ್ಲಿ ಬಹುತೇಕ ಗ್ರಾಮಗಳಿಗೆ ಸಂಚಾರ ನಡೆಸಲು ರಸ್ತೆ ಸೌಲಭ್ಯ ಉತ್ತಮವಾಗಿದೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಸಂದರ್ಭದಲ್ಲಿ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಶರಾವತಿ ಮುಳುಗಡೆ ಸಂತ್ರಸ್ತರು ವಾಸವಿರುವ ಕಟ್ಟಿಗೆಹಳ್ಳ, ಯರೇಕೊಪ್ಪ, ಗೊಬ್ಬರದಹೊಂಡ ಸೇರಿದಂತೆ ಅರಣ್ಯ ಪ್ರದೇಶದ ಸಮೀಪವಿರುವ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಕೇವಲ ಗ್ರಾಮಗಳಿಗೆ ಮಾತ್ರವಲ್ಲ ರೈತರು ಕೃಷಿ ಭೂಮಿಗೆ ತೆರಳಲು ಅಗತ್ಯವಿರುವ ರಸ್ತೆಗಳು ನಿರ್ಮಾಣವಾಗಿವೆ. ತಾಲ್ಲೂಕಿನಲ್ಲಿ ಕೃಷಿ ಭೂಮಿಗಳಿಗೆ ತೆರಳಲು ಟಾರು ರಸ್ತೆ ನಿರ್ಮಿಸಿರುವುದು ವಿಶೇಷ.

ತಾಲ್ಲೂಕಿನ ಗ್ರಾಮಗಳು ಸೇರಿದಂತೆ ರೈತರು ಕೃಷಿ ಭೂಮಿಗೆ ತೆರಳಲು ಅಗತ್ಯ ರಸ್ತೆಗಳನ್ನು ನಿರ್ಮಿಸಿದ್ದು, ವಾಹನ ಹಾಗೂ ಎತ್ತಿನ ಗಾಡಿಯೊಂದಿಗೆ ಕೃಷಿ ಭೂಮಿಗೆ ತೆರಳಲು ಯಾವುದೇ ತೊಂದರೆಯಾಗುತ್ತಿಲ್ಲ ಎನ್ನುತ್ತಾರೆ ರೈತ ರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT