ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿ ಸಾಧನೆಗೆ ಹೆಚ್ಚಿನ ಅನುದಾನ ಅಗತ್ಯ: ಸುರೇಶ್‍ ಕುಮಾರ್

ಡಾ.ಬಿ.ಆರ್.ಅಂಬೇಡ್ಕರ್ ನಿಗಮ ಕಟ್ಟಡ ನಿರ್ಮಾಣ ಶಿಲಾನ್ಯಾಸ ಸಮಾರಂಭದಲ್ಲಿ ಸುರೇಶ್‍ಕುಮಾರ್
Last Updated 12 ಜನವರಿ 2022, 5:40 IST
ಅಕ್ಷರ ಗಾತ್ರ

ಶಿವಮೊಗ್ಗ: ನಿಗಮದ ವಿವಿಧ ಯೋಜನೆಯಡಿ ಸಾವಿರಾರು ಅರ್ಜಿಗಳು ಬರುತ್ತಿದ್ದು, ಗುರಿ ಸಾಧನೆಗೆ ಹೆಚ್ಚಿನ ಅನುದಾನ ಅವಶ್ಯಕತೆ ಇದೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಸುರೇಶ್‍ ಕುಮಾರ್ ಮನವಿ ಮಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ನಗರದ ಮಲ್ಲೇಶ್ವರ ನಗರದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿಯ ನೂತನ ಕಟ್ಟಡ ನಿರ್ಮಾಣದ ಶಿಲಾನ್ಯಾಸದಲ್ಲಿ ಅವರು ಮಾತನಾಡಿದರು.

‘ಪರಿಶಿಷ್ಟ ಜಾತಿಗೆ ಸೇರಿದವರಿಗೆ ನಿಗಮದಲ್ಲಿ ನೇರ ಸಾಲ, ಉದ್ಯಮಶೀಲತಾ ಯೋಜನೆ, ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆ, ಸಮೃದ್ಧಿ ಯೋಜನೆ, ಕೌಶಲ ತರಬೇತಿ, ಗಂಗಾ ಕಲ್ಯಾಣ, ಭೂ ಒಡೆತನ ಸೇರಿ ಹಲವು ಯೋಜನೆಗಳಿವೆ. ನಿಗಮದ ಯೋಜನೆಯೊಂದರಲ್ಲಿ 5 ಸಾವಿರ ಗುರಿಗೆ 76 ಸಾವಿರ ಅರ್ಜಿಗಳು ಬಂದಿವೆ. ಈ ವರ್ಷ ಒಟ್ಟಾರೆ 1.19 ಲಕ್ಷ ಅರ್ಜಿಗಳು ಬಂದಿದ್ದು, ಗುರಿಯ ಸಂಖ್ಯೆಯನ್ನು ಹೆಚ್ಚಿಸಲು ಹೆಚ್ಚುವರಿ ಅನುದಾನದ ಅವಶ್ಯಕತೆ ಇದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ, ಹೆಚ್ಚುವರಿ ಅನುದಾನ ನೀಡಿದರೆ ಬಹಳಷ್ಟು ಮಂದಿಗೆ ಅನುಕೂಲವಾಗಲಿದೆ’ ಎಂದು ಮನವಿ ಮಾಡಿದರು.

ಸೌಲಭ್ಯ ಪಡೆಯಿರಿ: ಹಿಂದುಳಿದ ವರ್ಗಗಳಿಗೆ ಸಮಾನತೆ ಒದಗಿಸಿ, ಮುಖ್ಯವಾಹಿನಿಗೆ ತರಲು ಸರ್ಕಾರ ವಿವಿಧ ನಿಗಮಗಳನ್ನು ಸ್ಥಾಪಿಸಿದ್ದು, ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿ ಇರುವ ಯೋಜನೆಗಳನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ನಾಗೇಶ್ ಹೇಳಿದರು.

‘ಯಾವುದೇ ರೀತಿಯ ಕುಂದು–ಕೊರತೆಗಳು ಇದ್ದಲ್ಲಿ ಫಲಾನುಭವಿಗಳು ನೇರವಾಗಿ ನನ್ನನ್ನು ಸಂಪರ್ಕಿಸಿ ಬಗೆಹರಿಸಿಕೊಳ್ಳಬಹುದು. ಶಿವಮೊಗ್ಗದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮದ ಶಿವಮೊಗ್ಗ ಜಿಲ್ಲಾ ಕಚೇರಿಯು ಬಾಡಿಗೆ ಕಟ್ಟಡದಲ್ಲಿತ್ತು. ಇದೀಗ ಸರ್ಕಾರದಿಂದ ಕಟ್ಟಡಕ್ಕೆ ಭೂಮಿ ಮಂಜೂರಾಗಿ ಶಿಲಾನ್ಯಾಸ ನೆರವೇರಿಸಿದ್ದು, ಬಿಜೆಪಿ ಅವಧಿಯಲ್ಲೇ ಕಟ್ಟಡ ಉದ್ಘಾಟನೆ ಮಾಡುವ ಯೋಜನೆ ಇದೆ’ ಎಂದು ತಿಳಿಸಿದರು.

‘ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿಯ ಯೋಜನೆಗಳು ಫಲಾನುಭವಿಗಳನ್ನು ತಲುಪಲು ಹಿಂದೆ ಮಧ್ಯವರ್ತಿಗಳ ಕಾಟ ಇತ್ತು. ಅದನ್ನು ತಪ್ಪಿಸಲು ಫಲಾನುಭವಿಗಳಿಗೆ ನೇರವಾಗಿ ಸೌಲಭ್ಯ ನೀಡುವ ಆರ್‌ಟಿಜಿಎಸ್‌ ನೇರಪಾವತಿ ವ್ಯವಸ್ಥೆ ಮಾಡಲಾಗಿದೆ. 225 ವಿಧಾನಸಭಾ ಕ್ಷೇತ್ರಗಳಿಗೂ ನಿಗಮದ ಅನುದಾನ ಹಂಚಿಕೆಯಾಗಿದ್ದು, ಮುಂಬರುವ ಅನುದಾನವನ್ನೂ ಮರು ಹಂಚಿಕೆ ಮಾಡಲಾಗುವುದು. ಉತ್ತರ ಕರ್ನಾಟಕ ಭಾಗದಲ್ಲಿ ಭೂಒಡೆತನ ಯೋಜನೆಯಡಿ ಫಲಾನುಭವಿಗಳು ಸೌಲಭ್ಯ ಪಡೆಯುತ್ತಿದ್ದು, ಈ ಭಾಗದಲ್ಲೂ ಫಲಾನುಭವಿಗಳು ಮುಂದೆ ಬರಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಬೋರ್‌ವೆಲ್ ‍, ಪಂಪ್‍ಸೆಟ್‍ಗಳು ಮತ್ತು ನೇರ ಸಾಲದ ಸೌಲಭ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ವಿತರಿಸಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ನಗರಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜ್ಯೋತಿ ಪ್ರಕಾಶ್, ಡಾ.ಬಿ.ಆರ್. ಅಂಬೇಡ್ಕರ್ ನಿಗಮದ ನಿರ್ದೇಶಕ ದೇವಾನಂದ್, ಬಿಳಕಿ ಕೃಷ್ಣಮೂರ್ತಿ, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಂ.ಪಿ. ಪರಮೇಶ್ವರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT