ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧ ವರ್ಷ ಕಳೆದರೂ ಪೂರೈಕೆಯಾಗದ ಪುಸ್ತಕ

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೂ – ಸಾಕ್ಸ್ ವಿತರಣೆ
Last Updated 21 ನವೆಂಬರ್ 2022, 7:15 IST
ಅಕ್ಷರ ಗಾತ್ರ

ಶಿವಮೊಗ್ಗ: ಶೈಕ್ಷಣಿಕ ವರ್ಷ ಆರಂಭವಾಗಿ ಆರು ತಿಂಗಳು ಕಳೆದರೂ ಸರ್ಕಾರಿ ಶಾಲೆಗಳಲ್ಲಿ ಪಠ್ಯಪುಸ್ತಕ, ಸಮವಸ್ತ್ರ ಹಾಗೂ ಶೂ, ಸಾಕ್ಸ್ ವಿತರಣೆ ಪ್ರಕ್ರಿಯೆ ನಡೆಯುತ್ತಲೇ ಇದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಒಂದಲ್ಲಾ ಒಂದು ರೀತಿ ಪರಿಣಾಮ ಬೀರುತ್ತಿದೆ.

ಕೆಲವು ವಿಷಯಗಳ ಪಠ್ಯಪುಸ್ತಕ ತಡವಾಗಿ ವಿತರಣೆಯಾದ ಕಾರಣ ಹಿಂದಿನ ವರ್ಷದ ವಿದ್ಯಾರ್ಥಿಗಳಿಂದ ಪುಸ್ತಕಗಳನ್ನು ಶಿಕ್ಷಕರು ಮಕ್ಕಳಿಗೆ ಕೊಡಿಸಿದ್ದಾರೆ. ಜಿಲ್ಲೆಯಲ್ಲಿ ಪಠ್ಯಪುಸ್ತಕ, ಶೂ– ಸಾಕ್ಸ್ ವಿತರಣೆ ಬಗ್ಗೆ ಈ ವಾರದ ನಮ್ಮ ಜನ ನಮ್ಮ ಧ್ವನಿ ಬೆಳಕು ಚೆಲ್ಲಿದೆ.

ಸೊರಬ ತಾಲ್ಲೂಕಿನಲ್ಲಿ ಶೇ 30ರಷ್ಟು ಶೂ, ಸಾಕ್ಸ್ ವಿತರಣೆ

ರಾಘವೇಂದ್ರ ಟಿ.

ಸೊರಬ: ತಾಲ್ಲೂಕಿನಲ್ಲಿರುವ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಯ ಶೇ 30ರಷ್ಟು ವಿದ್ಯಾರ್ಥಿಗಳಿಗೆ ಉಚಿತವಾಗಿ ಶೂ, ಸಾಕ್ಸ್‌ಗಳನ್ನು ವಿತರಿಸಲಾಗಿದೆ. ಸರ್ಕಾರದಿಂದ ಅನುದಾನ ತಡವಾಗಿ ಬಿಡುಗಡೆ ಆಗಿರುವುದರಿಂದ ಪೂರ್ಣ ಪ್ರಮಾಣದ ವಿತರಣೆ ಇದುವರೆಗೆ ಸಾಧ್ಯವಾಗಿಲ್ಲ.

1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ₹ 265, 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ₹ 295, 9ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ₹ 325ರಂತೆ ಶೂ, ಸಾಕ್ಸ್ ವಿತರಿಸಲು ಆಯಾ ಶಾಲಾ ಮುಖ್ಯ ಶಿಕ್ಷಕರ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದ್ದು, ಖರೀದಿ ನಿಯಮ ಪಾಲಿಸಿ ವಿದ್ಯಾರ್ಥಿಗಳಿಗೆ ಶೂ,ಸಾಕ್ಸ್ ವಿತರಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಚಿಸಿದ್ದಾರೆ.

‘ಎಲ್ಲ ವಿದ್ಯಾರ್ಥಿಗಳಿಗೂ ಒಂದು ಜೊತೆ ಸಮವಸ್ತ್ರವನ್ನು ಈಗಾಗಲೇ ವಿತರಿಸಲಾಗಿದ್ದು, ಎರಡನೇ ಹಂತದಲ್ಲಿ ಸಮವಸ್ತ್ರ ವಿತರಿಸಲು ಅನುದಾನ ಬಿಡುಗಡೆ ಆಗಿಲ್ಲ. ರೆಡಿಮೇಡ್ ಸಮವಸ್ತ್ರ ಖರೀದಿಸಲು ಪ್ರತಿ ವಿದ್ಯಾರ್ಥಿಗೆ ಸರ್ಕಾರ ₹ 200ರಂತೆ ಅನುದಾನ ಬಿಡುಗಡೆ ಮಾಡಬೇಕಿದೆ. ಅನುದಾನ ಬಿಡುಗಡೆಯಾದ ನಂತರ ಕೂಡಲೇ ಸಮವಸ್ತ್ರ ವಿತರಿಸಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ವಿಳಂಬವಾಗಿ ತಲುಪಿದ ಶೂ, ಸಾಕ್ಸ್

ಎಂ.ರಾಘವೇಂದ್ರ

ಸಾಗರ: ತಾಲ್ಲೂಕಿನ ಸರ್ಕಾರಿ ಶಾಲೆಗಳ ಮಕ್ಕಳಿಗೆ ಈ ಬಾರಿ ಶೈಕ್ಷಣಿಕ ವರ್ಷದ ಅರ್ಧ ಭಾಗ ಕಳೆಯುವ ಹೊತ್ತಿಗೆ ಶೂ ಹಾಗೂ ಸಾಕ್ಸ್ ಪೂರೈಸಲಾಗಿದೆ. ಈ ಪ್ರಕ್ರಿಯೆ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ನಂತರ ಶಾಲೆಗಳಿಗೆ ನಡೆದಿದೆ.

ಸಕಾಲದಲ್ಲಿ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ದೊರಕಿಲ್ಲ ಎಂದು ಇಲ್ಲಿನ ತಾಲ್ಲೂಕು ರೈತ ಸಂಘ (ಎಚ್.ಗಣಪತಿಯಪ್ಪ ಬಣ) ಕಾರ್ಯಕರ್ತರು ಭಿಕ್ಷಾಟನೆ ಚಳವಳಿ ನಡೆಸಿದ್ದರು. ಸಾರ್ವಜನಿಕರಿಂದ ₹ 3,116 ಸಂಗ್ರಹಿಸಿ ಅದನ್ನು ಸರ್ಕಾರಕ್ಕೆ ಕಳುಹಿಸುವ ಮೂಲಕ ಗಮನ ಸೆಳೆಯುವ ಪ್ರತಿಭಟನೆ ನಡೆದಿತ್ತು.

‘ತಾಲ್ಲೂಕಿನಲ್ಲಿ 304 ಪ್ರಾಥಮಿಕ ಶಾಲೆಗಳಿದ್ದು, 51 ಪ್ರೌಢಶಾಲೆಗಳಿವೆ. ಪಠ್ಯ ಪುಸ್ತಕಗಳು ಏಪ್ರಿಲ್– ಮೇ ವೇಳೆಗೆ ಪೂರೈಕೆ ಆಗಿದ್ದು ಸಕಾಲದಲ್ಲಿ ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ. ಆಗಸ್ಟ್‌ನಲ್ಲಿ ಸಮವಸ್ತ್ರಗಳನ್ನು ಪೂರೈಸಲಾಗಿದೆ. ಅನುದಾನ ಬಿಡುಗಡೆ ವಿಳಂಬದ ಕಾರಣ ಶೂ, ಸಾಕ್ಸ್ ವಿತರಣೆಗೆ ಸೆಪ್ಟೆಂಬರ್‌ವರೆಗೂ ಕಾಯಬೇಕಾಯಿತು’ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿಂಬ ಕೆ.ಆರ್.

‘ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಕಾಲದಲ್ಲಿ ಪಠ್ಯ ಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದರೆ ಪ್ರತಿ ವರ್ಷ ಒಂದಲ್ಲಾ ಒಂದು ಕಾರಣದಿಂದ ಅವುಗಳ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಸರ್ಕಾರವನ್ನು ಎಚ್ಚರಿಸಲು ನಾವು ಬೀದಿಗಿಳಿದು ಹೋರಾಡಬೇಕಾಯಿತು’ ಎನ್ನುತ್ತಾರೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ.

ಆಸೆಗಣ್ಣಿನಲ್ಲಿ ಕಾದ ಮಕ್ಕಳಲ್ಲಿ ನಿರಾಸೆ..

ರವಿ ನಾಗರಕೂಡಿಗೆ

ಹೊಸನಗರ: ಶಿಕ್ಷಣ ಇಲಾಖೆಯಿಂದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಶೂ ಮತ್ತು ಪುಸ್ತಕ ವಿತರಣೆ ಸಮರ್ಪಕವಾಗಿ ನಡೆದಿಲ್ಲ. ಶೈಕ್ಷಣಿಕ ವರ್ಷ ಆರಂಭದಲ್ಲಿ ವಿತರಣೆ ಆಗಬೇಕಿದ್ದ ಸಮವಸ್ತ್ರ, ಶೂ ಮತ್ತು ಪುಸ್ತಕಗಳು ತಿಂಗಳುಗಟ್ಟಲೇ ತಡವಾಗಿ ವಿತರಣೆ ಆಗಿವೆ. ಇದರಿಂದ ಗ್ರಾಮೀಣ ಪ್ರದೇಶದ, ಬಡ ವಿದ್ಯಾರ್ಥಿಗಳಿಗೆ ಸಹಜವಾಗಿಯೇ ಬೇಸರವಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 238 ಶಾಲೆಗಳಿವೆ. ಇದರಲ್ಲಿ 219 ಪ್ರಾಥಮಿಕ, 19 ಪ್ರೌಢಶಾಲೆಗಳಿವೆ. ಶಾಲೆ ಆರಂಭವಾಗಿ ಕೆಲ ದಿನಗಳಲ್ಲಿ ಒಂದು ಜತೆ ಸಮವಸ್ತ್ರ ವಿತರಿಸಲಾಗಿದೆ. ನಂತರ ಅಕ್ಟೋಬರ್ ಕೊನೆಯಲ್ಲಿ ಮತ್ತೊಂದು ಜತೆ ಸಮವಸ್ತ್ರ ವಿತರಣೆ ಆಗಿದೆ. ಇದರಿಂದ ವಿದ್ಯಾರ್ಥಿಗಳು ಒಂದೇ ಜತೆ ಬಟ್ಟೆಯಲ್ಲಿ ಎಲ್ಲ ದಿನ ಶಾಲೆಗಳಿಗೆ ಹೋಗುವಂತಾಗಿತ್ತು.

ಬರಿಗಾಲಲ್ಲಿ ನಡೆದಾಡಿದರು: ಶೂ ವಿತರಣೆಯಲ್ಲೂ ಅಷ್ಟೇ ಉದಾಸೀನ ತೋರಲಾಗಿದೆ. ಶಿಕ್ಷಣ ಇಲಾಖೆಯಿಂದ ಶಾಲಾ ಅಭಿವೃದ್ಧಿ ಸಮಿತಿಗೆ ಹಣ ನೀಡಲಾಗಿತ್ತು. ಸಮಿತಿಗಳು ಶೂ ಪೂರೈಸಲು ಅಂಗಡಿ ಮಾಲೀಕರಿಗೆ ಹೇಳಿ ತಿಂಗಳುಗಳೇ
ಕಳೆದಿವೆ.

‘ಹೊಸ ಶೂ ಕೊಡುತ್ತಾರೆ’ ಎಂದು ಆಸೆಗಣ್ಣಿನಿಂದ ಕಾದ ವಿದ್ಯಾರ್ಥಿಗಳಿಗೆ ನಿರಾಸೆ ಆಗಿದೆ. ತಮ್ಮ ಬಳಿ ಇದ್ದ ಹರುಕು ಚಪ್ಪಲಿಯಲ್ಲೇ ಶಾಲೆಗೆ ನಡೆದಾಡಿದ್ದಾರೆ. ಕೆಲವಷ್ಟು ವಿದ್ಯಾರ್ಥಿಗಳು ಬರಿಗಾಲಿನಲ್ಲಿ ಶಾಲೆಗೆ ಹೋಗಿ ಬಂದಿದ್ದಾರೆ. ಗ್ರಾಮೀಣ ಮಕ್ಕಳಿಗೆ ಮಳೆಗಾಲದಲ್ಲಿ ಶೂ ಧರಿಸುವುದು ಕಷ್ಟವಾಗುತ್ತದೆ ಎಂದು ಭಾವಿಸಿದ ಇಲಾಖೆ ಚಪ್ಪಲಿ ವಿತರಣೆಗೆ ಮುಂದಾಗಿದೆ. ನಾಲ್ಕಾರು ತಿಂಗಳ ನಂತರ ಗ್ರಾಮೀಣ ಮಕ್ಕಳ ಕಾಲಲ್ಲಿ ಚಪ್ಪಲಿ ನೋಡುವಂತಾಗಿದೆ.

ಇನ್ನೂ ಪುಸ್ತಕ ವಿತರಣೆಯಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿ ವಿತರಣೆಯಲ್ಲಿ ಲೋಪದೋಷಗಳೇ ತಾಂಡವವಾಡಿವೆ. ಒಂದು ಪುಸ್ತಕ ಬಂದರೆ ಇನ್ನೊಂದು ಇಲ್ಲ. ಇನ್ನೊಂದು ಬಂದರೆ ಮತ್ತೊಂದು ಇಲ್ಲ ಎಂಬಂತಾಗಿದೆ.

ಹಿಂದುಳಿದ ತಾಲ್ಲೂಕಿನಲ್ಲಿ ಬಡ ವಿದ್ಯಾರ್ಥಿಗಳಿಗೆ ವಿತರಿಸಬೇಕಿದ್ದ ಸವಲತ್ತುಗಳು ಸಕಾಲಕ್ಕೆ ಲಭ್ಯವಾಗದೇ ಮಕ್ಕಳಲ್ಲಿ ಬೇಸರ ಮೂಡಿಸಿದೆ.

ತಾಲ್ಲೂಕಿನ ಎಲ್ಲ 238 ಶಾಲೆಗಳಿಗೆ ಸಮವಸ್ತ್ರ, ಶೂ, ಪುಸ್ತಕ ವಿತರಿಸಲಾಗಿದೆ. ಶೂ ವಿತರಣೆಗೆ ಸಮಿತಿಗಳಿಗೆ ಹಣ ನೀಡಲಾಗಿತ್ತು. ಅವರು ವಿದ್ಯಾರ್ಥಿಗಳಿಗೆ ಶೂ ಹಂಚಿಕೆ ಮಾಡಿದ್ದಾರೆ. ಎಲ್ಲ ಶಾಲೆಗೂ ಪುಸ್ತಕ ವಿತರಣೆ ಆಗಿದೆ ಎಂದು ಹೊಸನಗರ ಬಿಇಒ ಎಚ್.ಆರ್. ಕೃಷ್ಣಮೂರ್ತಿ ಹೇಳುತ್ತಾರೆ.

***

ಶೂ–ಸಾಕ್ಸ್ ವಿತರಣೆ, 15 ದಿನಗಳಲ್ಲಿ ಪೂರ್ಣ

‘ಎಸ್‌ಡಿಎಂಸಿಗೆ ಅನುದಾನ ಕೊಟ್ಟಿದ್ದು, ಅವರೇ ಶೂ–ಸಾಕ್ಸ್ ವಿತರಿಸಬೇಕಿದೆ. ತ್ವರಿತ ವಿತರಣೆಗೆ ನಿರ್ದೇಶನ ನೀಡಲಾಗಿದೆ. ಈಗಾಗಲೇ ಶೇ 50ರಿಂದ 60ರಷ್ಟು ವಿತರಣೆ ಕಾರ್ಯ ಪೂರ್ಣಗೊಂಡಿದೆ. ಬಹುಶಃ ಮುಂದಿನ 15 ದಿನಗಳಲ್ಲಿ ವಿತರಣೆ ಕಾರ್ಯ ಸಂಪೂರ್ಣಗೊಳ್ಳಲಿದೆ’ ಎಂದು ಶಿವಮೊಗ್ಗ ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ಹೇಳುತ್ತಾರೆ.

ಶೂ–ಸಾಕ್ಸ್ ವಿತರಣೆಗೆ ಕೆಲವು ತಾಲ್ಲೂಕುಗಳಲ್ಲಿನ ಶಾಲೆಗಳಿಗೆ ಅನುದಾನ ಬಿಡುಗಡೆಯಲ್ಲಿ ತಾಂತ್ರಿಕ ತೊಂದರೆ ಆಗಿದೆ. 40ರಿಂದ 50 ಶಾಲೆಗಳಲ್ಲಿ ಈ ಸಮಸ್ಯೆ ಆಗಿತ್ತು. ಅದು ಶೀಘ್ರ ಪರಿಹಾರಗೊಂಡು ಅಲ್ಲಿಯೂ ವಿತರಣೆ ಆಗಲಿದೆ. ಇನ್ನು ಜಿಲ್ಲೆಯ ಶಾಲೆಗಳಿಗೆ ಶೇ 100ರಷ್ಟು ಪಠ್ಯಪುಸ್ತಕಗಳು ಲಭ್ಯವಾಗಿವೆ. ಉರ್ದು ಶಾಲೆಗಳ ಕೆಲವು ವಿಷಯಗಳ ಪುಸ್ತಕಗಳು ಬಂದಿಲ್ಲ. ಪಠ್ಯಪುಸ್ತಕ ವಿತರಣೆ ಕಾರ್ಯ ಶೇ 99ರಷ್ಟು ಪೂರ್ಣಗೊಂಡಿದೆ ಎನ್ನುತ್ತಾರೆ.

***

ಅರ್ಧ ವರ್ಷ ಕಳೆದರೂ ಸಿಗದ ಕನ್ನಡ ಪುಸ್ತಕ

ನಿರಂಜನ ವಿ

ತೀರ್ಥಹಳ್ಳಿ: ಶೈಕ್ಷಣಿಕ ವರ್ಷದ ಅರ್ಧ ಅವಧಿ ಕಳೆದಿದ್ದರೂ ಈವರೆಗೆ 8ನೇ ತರಗತಿಯ ಕನ್ನಡ ಮಾದ್ಯಮದ ಕನ್ನಡ ಪುಸ್ತಕ ಹಂಚಿಕೆಯಾಗಿಲ್ಲ. ಪಠ್ಯ ಪರಿಷ್ಕರಣೆ ಗೊಂದಲವು ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹಿಂದಿನ ವರ್ಷದ ಪುಸ್ತಕ ಹಿಡಿದು ಶೈಕ್ಷಣಿಕ ಅವಧಿ ಮುಂದೂಡುತ್ತಿದ್ದು, ಕೊನೆಯ ಕ್ಷಣದಲ್ಲಿ ಯಾವ ಪಠ್ಯ ಹೊರಗೆ, ಒಳಗೆ ಇರಲಿದೆ ಎಂಬ ಗೊಂದಲ ನಿರ್ಮಾಣವಾಗಿದೆ.

ಸರ್ಕಾರಿ ಶಾಲೆಗಳಿಗೆ ವಿವಿಧ ಸೌಲಭ್ಯಗಳು ದೊರೆಯುತ್ತಿದ್ದರೂ ಪಠ್ಯದ ವಿಷಯದಲ್ಲಿ ಹಿಂದುಳಿಯುತ್ತಿವೆ ಎಂಬ ಆತಂಕ ಪಾಲಕರದ್ದು. ಇಂತಹ ಘಟನೆ ಮರುಕಳಿಸುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪೋಷಕರು ಖಾಸಗಿ ಶಾಲೆಗಳ ಮೊರೆ ಹೋಗುವಂತಾಗಿದೆ.

ಮಲೆನಾಡಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಲವು ಸವಾಲುಗಳೊಂದಿಗೆ ಶಿಕ್ಷಣ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿಯೇ ಕನ್ನಡ ಮಾಧ್ಯಮಕ್ಕೆ ಒತ್ತು ನೀಡದಿರುವುದು ಸಾಹಿತ್ಯ ಪ್ರೇಮಿಗಳು, ಚಿಂತಕರು, ಪ್ರಾಧ್ಯಾಪಕರ ವಲಯದಲ್ಲಿ ಚರ್ಚೆಗೆ ಈಡಾಗಿದೆ.

‘ಸರ್ಕಾರ ಒದಗಿಸಿದ ಉಚಿತ ಶಿಕ್ಷಣದಿಂದ ಜ್ಞಾನದ ಕಡೆಗೆ ನಡೆಯುತ್ತಿದ್ದ ಸಮಾಜ ಈಗ ಮತ್ತೆ ಅಜ್ಞಾನದತ್ತ ಸಾಗಿದೆ. ಬಾಲ್ಯದಲ್ಲಿ ಉತ್ತಮ ಶಿಕ್ಷಣ ಲಭಿಸದಿದ್ದರೆ ಮಕ್ಕಳ ಭವಿಷ್ಯ ಹಾಳಾಗುತ್ತದೆ. ಶಾಲೆಗೆ ಕಳಿಸುವಾಗ ಎಲ್ಲ ಆಯಾಮಗಳಿಂದ ಪಾಲಕರು ಆಲೋಚಿಸುವಂತಾಗಿದೆ’ ಎಂದು ಸರ್ಕಾರಿ ಬಾಲಿಕಾ ಪ್ರೌಢಶಾಲೆಯ ಎಸ್‌ಡಿಎಂಸಿ ಸದಸ್ಯೆ ಗೀತಾ ಹೇಳುತ್ತಾರೆ.

***

ವಿದ್ಯಾರ್ಥಿಗಳಿಗೆ ಶೂ ವಿತರಣೆ ಕಾರ್ಯ ಆರಂಭ

ಎಚ್.ಎಸ್. ರಘು

ಶಿಕಾರಿಪುರ: ತಾಲ್ಲೂಕಿನ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪುಸ್ತಕಗಳ ವಿತರಣೆಯಾಗಿದ್ದು, ಶೂ ವಿತರಣೆ ಕಾರ್ಯ ಈಗ ಆರಂಭವಾಗಿದೆ.

ಸರ್ಕಾರಿ, ಅನುದಾನಿತ, ಅನುದಾನ ರಹಿತ ಸೇರಿ ಒಟ್ಟು 357 ಶಾಲೆಗಳು ಇಲ್ಲಿವೆ. ಸದ್ಯ ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ನೀಡಲಾಗಿದೆ. ಸಮವಸ್ತ್ರಗಳನ್ನು 256 ಸರ್ಕಾರಿ ಶಾಲೆಗಳಿಗೆ ತಲುಪಿಸಲಾಗಿದೆ. ಆದರೆ, ಸರ್ಕಾರದ ವಿಳಂಬ ನೀತಿಯಿಂದ ಬಹುತೇಕ ಶಾಲೆಗಳ ವಿದ್ಯಾರ್ಥಿಗಳಿಗೆ ಶೂ ವಿತರಣೆಯಾಗಿಲ್ಲ.

ಶೂ ಖರೀದಿಸಲು ಸರ್ಕಾರ ಈಚೆಗೆ ಅನುದಾನ ಬಿಡುಗಡೆ ಮಾಡಿದ್ದು, ಈ ಅನುದಾನವನ್ನು ಶಾಲೆಗಳ ಖಾತೆಗೆ ಶಿಕ್ಷಣ ಇಲಾಖೆ ವರ್ಗಾವಣೆ ಮಾಡಿದೆ. ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೂ ವಿತರಣೆ ಕಾರ್ಯ ನಡೆಯುತ್ತಿದ್ದು, ಮಿಕ್ಕ ಶಾಲೆಗಳಲ್ಲಿ ವಿತರಣೆ ಶುರುವಾಗಬೇಕಿದೆ ಎಂದು ಶಿಕಾರಿಪುರ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ಶಶಿಧರ್ ಹೇಳುತ್ತಾರೆ.

***

ಆಡಳಿತ ನಡೆಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಆಗುತ್ತಿದೆ. ಶಿಕ್ಷಣ ಇಲಾಖೆಯನ್ನು ಅಧ್ವಾನಕ್ಕೆ ಕೊಂಡೊಯ್ದು ಮಕ್ಕಳ ನಿಶ್ಕಲ್ಮಶ ಹೃದಯದಲ್ಲಿ ವಿಷ ಬೀಜ ಬಿತ್ತುವ ಕೆಲಸ ನಡೆದಿದೆ.

-ಕಿಮ್ಮನೆ ರತ್ನಾಕರ, ಮಾಜಿ ಶಿಕ್ಷಣ ಸಚಿವ

***

ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ, ಮೊಟ್ಟೆ, ಬಾಳೇಹಣ್ಣು, ಚಿಕ್ಕಿ ವಿತರಣೆಯಾಗುತ್ತಿದೆ. ಶೂ ಹಣ ಮುಖ್ಯಶಿಕ್ಷಕರ ಖಾತೆಗೆ ವರ್ಗಾವಣೆಯಾಗಿದೆ. 8ನೇ ತರಗತಿ ಕನ್ನಡ ಮಾದ್ಯಮದ ಕನ್ನಡ ಪುಸ್ತಕ ಹಂಚಿಕೆ ಬಾಕಿ ಇದೆ.

ಬಿ.ಎಚ್.‌ ನಿರಂಜನ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT