ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ನಿರಾಸಕ್ತಿ: ಮಂಜುನಾಥ ಗೌಡ

ರಸಗೊಬ್ಬರ ಪೊರೈಕೆಗೆ ಮಂಜುನಾಥ ಗೌಡ ಒತ್ತಾಯ
Last Updated 13 ಅಕ್ಟೋಬರ್ 2021, 5:54 IST
ಅಕ್ಷರ ಗಾತ್ರ

ಹೊಸನಗರ: ಹೊಸನಗರ, ತೀರ್ಥಹಳ್ಳಿ ತಾಲ್ಲೂಕಿನ ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ರೋಗ ವ್ಯಾಪಿಸಿದ್ದು, ಅಡಿಕೆ ತೋಟ ಸರ್ವನಾಶದ ಅಂಚಿನಲ್ಲಿದೆ. ರೈತರು ದಿಕ್ಕೆಟ್ಟು ಹೋಗಿದ್ದಾರೆ. ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಆರ್.ಎಂ. ಮಂಜುನಾಥ ಗೌಡ ಆಗ್ರಹಿಸಿದರು.

ತಾಲ್ಲೂಕಿನ ನಿಟ್ಟೂರು ಭಾಗದ ಎಲೆಚುಕ್ಕಿ ರೋಗ ಬಾಧಿತ ಅಡಿಕೆ ತೋಟಗಳಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಲೆನಾಡಿನ ತೋಟಗಳಲ್ಲಿ ಅತಿಯಾದ ಮಳೆಯಿಂದ ಶಿಲೀಂಧ್ರ ಉತ್ಪತ್ತಿಯಾಗುತ್ತವೆ. ಇಲ್ಲಿನ ಅಡಿಕೆ ತೋಟಗಳಲ್ಲಿ ರೋಗ ಅತಿಯಾಗಿ ಹರಡಿದೆ. ರೈತರು ಯಾವ ಔಷೋಧೋಪಚಾರ ನಡೆಸುವುದು ಎಂದು ತಿಳಿಯದೇ ಆತಂಕಗೊಂಡಿದ್ದಾರೆ. ದುಬಾರಿ ಬೆಲೆಯ ಔಷಧೋಪಚಾರ ಮಾಡುವಲ್ಲಿ ರೈತರಲ್ಲಿ ಹಣವಿಲ್ಲ. ಸರ್ಕಾರ ಕೂಡಲೇ ಪ್ಯಾಕೇಜ್ ಘೋಷಣೆ ಮಾಡಬೇಕು. ಸಬ್ಸಿಡಿ ನೀಡಿ ರೈತರ ಹಿತ ಕಾಯಬೇಕು ಎಂದು ಒತ್ತಾಯಿಸಿದರು.

ಕೃಷಿ ವಿಜ್ಞಾನಿಗಳ ಸಲಹೆಯಿಂದ ರೈತರು ಪೊಟ್ಯಾಶ್ ಬಳಕೆಗೆ ಮನ ಮಾಡಿದ್ದಾರೆ. ಆದರೆ ಜಿಲ್ಲೆಯಲ್ಲಿ ಪೊಟ್ಯಾಶ್ ಲಭ್ಯವಾಗುತ್ತಿಲ್ಲ. ಸರ್ಕಾರ ಅಗತ್ಯ ರಸಗೊಬ್ಬರ ಹಂಚಿಕೆ ಮಾಡುವಲ್ಲಿ ಎಡವಿದೆ. ಜಿಲ್ಲೆಯ ಉಸ್ತುವಾರಿ ಸಚಿವರು, ಗೃಹ ಸಚಿವರು ಎಲೆಚುಕ್ಕಿ ರೋಗದ ಬಗ್ಗೆ ನಿರಾಸಕ್ತಿ ಹೊಂದಿದ್ದಾರೆ. ರಸಗೊಬ್ಬರಕ್ಕಾಗಿ ಇಲ್ಲಿ ಹಾಹಾಕಾರ ಕಂಡು ಬಂದರೂ ಯಾವೊಬ್ಬ ಸಚಿವರೂ ಈ ಬಗ್ಗೆ ದನಿ ಎತ್ತುತ್ತಿಲ್ಲ. ಇದು ಅವರ ಬೇಜವಾಬ್ದಾರಿ ತೋರಿಸುತ್ತದೆ ಎಂದುದೂರಿದರು.

ಮಲೆನಾಡು ಭಾಗದಲ್ಲಿ ಅಡಿಕೆಗೆ ಹಳದಿ ರೋಗ, ಕೊಳೆ ರೋಗ, ಎಲೆಚುಕ್ಕಿ ರೋಗ, ಸಿಂಗಾರ ಒಣಗುವ ರೋಗ ಮತ್ತಿತ್ತರ ರೋಗಗಳು ಕಾಡುತ್ತಿವೆ. ಆದರೆ ಸರ್ಕಾರ ಅಡಿಕೆ ರೋಗಗಳ ನಿಯಂತ್ರಣಕ್ಕೆ ಇನ್ನೂ ಪರಿಣಾಮಕಾರಿ ಔಷಧ ಕಂಡುಹಿಡಿದಿಲ್ಲ. ಕೇವಲ ಹೇಳಿಕೆ ನೀಡಿ ಕೈತೊಳೆದುಕೊಳ್ಳುತ್ತಿದೆ. ಎಲೆಚುಕ್ಕಿ ರೋಗ ಪರಿಹಾರಕ್ಕೆ ಸಂಶೋಧನೆ ನಡೆಸಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ವಿಶ್ವನಾಥ ನಾಗೋಡಿ, ಚಂದಯ್ಯ ಜೈನ್, ಪ್ರಮುಖರಾದ ಗುರುಶಕ್ತಿ ವಿದ್ಯಾದರ್ ರಾವ್, ಹಾಲಗದ್ದೆ ಉಮೇಶ್, ಉದಯ ಪೂಜಾರಿ, ರವಿ ಚನ್ನಪ್ಪ, ಸತ್ಯನಾರಾಯಣ, ರವೀಶ್, ಆಟೊ ವಿಜಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT