ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ಯಾರಂಟಿ ಎದುರು ಮೋದಿ ಅಬ್ಬರ ನಡೆಯೊಲ್ಲ: ಮಧು ಬಂಗಾರಪ್ಪ

Published 2 ಮಾರ್ಚ್ 2024, 16:14 IST
Last Updated 2 ಮಾರ್ಚ್ 2024, 16:14 IST
ಅಕ್ಷರ ಗಾತ್ರ

ಶಿವಮೊಗ್ಗ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ’ಗ್ಯಾರಂಟಿ‘ಗಳ ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರ ಅಬ್ಬರ ನಡೆಯುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಕೊಟ್ಟಿದ್ದ ಗ್ಯಾರಂಟಿಯ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಿದ್ದಾರೆ. ನುಡಿದಂತೆ ನಡೆದಿದ್ದಾರೆ. ಹೀಗಾಗಿ ನರೇಂದ್ರ ಮೋದಿ ಅವರ ಗ್ಯಾರಂಟಿಯನ್ನು ಜನರು ನಂಬುವುದಿಲ್ಲ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಬಂದು ಜೈ ಭಜರಂಗಬಲಿ ಎಂದು ಘೋಷಣೆ ಕೂಗಿದ್ದರು. ಆದರೂ ಆಂಜನೇಯ ಆಶೀರ್ವಾದ ಮಾಡಲಿಲ್ಲ. ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ಸಮಾರಂಭವನ್ನು ರಾಜಕೀಯಕ್ಕೆ ಬಳಸಿಕೊಂಡು ದೇವರನ್ನು ಬೀದಿಗೆ ತಂದರು. ಹೀಗಾಗಿ ರಾಜ್ಯದ ಜನರು ಬಿಜೆಪಿಯವರ ಧರ್ಮ ರಾಜಕಾರಣಕ್ಕೆ ಬೆಲೆ ಕೊಡುವುದಿಲ್ಲ. ಭಾವನೆಗಳ ಮೇಲಿನ ರಾಜಕೀಯವನ್ನು ಒಪ್ಪುವುದಿಲ್ಲ ಎಂದರು.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಇನ್ನೂ ಶೇ 20ರಷ್ಟು ಜನರಿಗೆ ಗ್ಯಾರಂಟಿ ಯೋಜನೆಗಳು ತಲುಪಿಲ್ಲ ಎಂದು ಹೇಳಿದ್ದಾರೆ. ವಿಜಯೇಂದ್ರ ಅವರ ತೋಟದ ಮನೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಕೂಡ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಹೀಗಾಗಿ ಬಿಜೆಪಿಯವರ ಆರೋಪಗಳೆಲ್ಲ ಅದು ಡೂಪ್ಲಿಕೇಟ್ ಎಂಬುದು ಜನರಿಗೆ ಗೊತ್ತಾಗಿದೆ  ಎಂದು ಲೇವಡಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ, ವಿಧಾನಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್, ಮುಖಂಡರಾದ ಎನ್.ರಮೇಶ, ಕಲಗೋಡು ರತ್ನಾಕರ, ಸಂತೆಕಡೂರು ವಿಜಯಕುಮಾರ್‌, ಇಕ್ಕೇರಿ ರಮೇಶ್, ಜಿ.ಡಿ.ಮಂಜುನಾಥ, ಎಂ.ಶ್ರೀಕಾಂತ, ಎಸ್.ರವಿಕುಮಾರ್, ಡಾ.ಶ್ರೀನಿವಾಸ ಕರಿಯಣ್ಣ, ಪಲ್ಲವಿ, ಶರತ್ ಮರಿಯಪ್ಪ, ಕಲೀಂ ಪಾಶಾ ಮತ್ತಿತರರು ಪಾಲ್ಗೊಂಡಿದ್ದರು.

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶನಿವಾರ ಶಿವಮೊಗ್ಗದ ನಿವಾಸದಲ್ಲಿ ಸಚಿವ ಮಧು ಬಂಗಾರಪ್ಪ ಅವರಿಗೆ ನಟ ಶಿವರಾಜಕುಮಾರ್ ಕೇಕ್ ತಿನ್ನಿಸಿದರು
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶನಿವಾರ ಶಿವಮೊಗ್ಗದ ನಿವಾಸದಲ್ಲಿ ಸಚಿವ ಮಧು ಬಂಗಾರಪ್ಪ ಅವರಿಗೆ ನಟ ಶಿವರಾಜಕುಮಾರ್ ಕೇಕ್ ತಿನ್ನಿಸಿದರು

Cut-off box - 14 ವರ್ಷಗಳ ವನವಾಸ ಅಂತ್ಯವಾಗಲಿದೆ.. ಎಸ್.ಬಂಗಾರಪ್ಪ ಅವರು 2010ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಕಾಂಗ್ರೆಸ್ ಇಲ್ಲಿ ಗೆದ್ದಿಲ್ಲ. ಈ ಬಾರಿ ಅದು ಅಂತ್ಯವಾಗಿ ಪಕ್ಷ ಗೆಲುವು ಸಾಧಿಸಲಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅದಕ್ಕೆ ನಾವು ಬದ್ಧ. ಚುನಾವಣೆಯಲ್ಲಿ ಇಲ್ಲಿನ ಪ್ರತಿ ಕಾರ್ಯಕರ್ತರು ಅಭ್ಯರ್ಥಿಯಾಗಿ ಕೆಲಸ ಮಾಡುತ್ತಾರೆ. ಪಕ್ಷದ ಸಂಘಟನೆ ಚೆನ್ನಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ಪ್ರಬಲ ಹೋರಾಟದ ಮೂಲಕ ಬಂಗಾರಪ್ಪ ಅವರಿಗಾದ ಸೋಲಿನ ಸೇಡು ತೀರಿಸಿಕೊಳ್ಳುತ್ತೇವೆ. ಬಂಗಾರಪ್ಪ ಅವರ ಅಭಿಮಾನಿಗಳು ಇದಕ್ಕೆ ಸಹಕರಿಸುತ್ತಾರೆ ಎಂದರು.

Cut-off box - ಗೀತಾ ಶಾಸಕಿ ಸಂಸದೆಯಾಗಲಿ; ಶಿವರಾಜಕುಮಾರ್ ಹೆಂಡತಿ ಗೀತಾ ಶಾಸಕಿ ಸಂಸದೆಯಾಗಿ ಆಯ್ಕೆಯಾಗಲಿ ಎಂಬ ಆಸೆ ಎಲ್ಲರಂತೆ ಒಬ್ಬ ಗಂಡನಾಗಿ ನನಗೂ ಇದೆ ಎಂದು ನಟ ಶಿವರಾಜ ಕುಮಾರ್ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದ ಅವರು ಗೀತಾ ಶಿವರಾಜಕುಮಾರ್ ಈಗಾಗಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಸಕಿ ಅಥವಾ ಸಂಸದೆಯಾಗಿ ಆಯ್ಕೆಯಾದರೆ ಮಹಿಳೆಯರಿಗೊಂದು ಸ್ಪೂರ್ತಿ ದೊರೆಯಲಿದೆ. ಇದಕ್ಕಾಗಿಯೇ ಅವರು ಜನಪ್ರತಿನಿಧಿ ಆಗಬೇಕು ಎಂಬ ಆಸೆ ಇದೆ ಎಂದರು. ಗೀತಾ ಶಿವರಾಜಕುಮಾರ್ ಅವರನ್ನು ಒಬ್ಬ ಸೆಲೆಬ್ರಿಟಿ ಆಗಿ ನೋಡುವ ಅಗತ್ಯ ಇಲ್ಲ ಸಮಾಜ ಸೇವೆಯಲ್ಲಿ ಎಲ್ಲರ ಜೊತೆಗೆ ಬೆರೆಯುತ್ತಿದ್ದಾರೆ ರಾಜಕೀಯ ಕುಟುಂಬದಿಂದ ಆಕೆ ಬಂದಿರುವುದರಿಂದ ಸಹಜವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಆಶಯ ಹೊಂದಿದ್ದಾರೆ ಎಂದರು. ’ಪಕ್ಷದ ಹೈಕಮಾಂಡ್ ಅವಕಾಶ ನೀಡಿದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಇಲ್ಲವಾದರೆ ಬೇಸರವಿಲ್ಲ ನಾವು ಯಾವುದಕ್ಕೂ ಸಿದ್ಧ ಇದ್ದೇವೆ ಚುನಾವಣೆಯಲ್ಲಿ ಸ್ಪರ್ಧಿಸಿದರೆ ನನ್ನ ಬೆಂಬಲ ಇರುತ್ತದೆ. ಪ್ರಚಾರಕ್ಕೂ ಬರುತ್ತೇನೆ. ಸಿನಿಮಾ ಚಿತ್ರೀಕರಣದ ದಿನಗಳ ನೋಡಿಕೊಂಡು ಪ್ರಚಾರ ನಡೆಸುತ್ತೇನೆ. ನಾನು ಸಿನಿಮಾರಂಗದಲ್ಲಿ ಇರುವುದರಿಂದ ಚುನಾವಣಾ ರಾಜಕೀಯಕ್ಕೆ ಬರುವ ಯಾವುದೇ ಉದ್ದೇಶ ಹೊಂದಿಲ್ಲ‘ ಎಂದು ಸ್ಪಷ್ಟಪಡಿಸಿದರು.

Cut-off box - ಸಚಿವ ಮಧು ಬಂಗಾರಪ್ಪ ಹುಟ್ಟುಹಬ್ಬ ಆಚರಣೆ.. ಸಚಿವ ಮಧು ಬಂಗಾರಪ್ಪ ಅವರ ಹುಟ್ಟುಹಬ್ಬ ಆಚರಣೆ ಹಿನ್ನೆಲೆಯಲ್ಲಿ ಶನಿವಾರ ಬೆಂಬಲಿಗರು ಅವರನ್ನು ಇಲ್ಲಿನ ಕಲ್ಲಹಳ್ಳಿಯ ನಿವಾಸಕ್ಕೆ ಮೆರವಣಿಗೆಯಲ್ಲಿ ಕರೆತಂದರು. ಬೃಹತ್ ಹಾರ ಹಾಕಿ ಸಂಭ್ರಮಿಸಿದರು. ಇದಕ್ಕೆ ನಟ ಶಿವರಾಜಕುಮಾರ್ ಹಾಗೂ ಗೀತಾ ದಂಪತಿ ಸಾಥ್ ನೀಡಿದರು. ಸಹೋದರಿ ಗೀತಾ ತಂದಿದ್ದ ಬೃಹತ್ ಕೇಕನ್ನು ಮಧು ಬಂಗಾರಪ್ಪ ಕತ್ತರಿಸಿ ಬೆಂಬಲಿಗರಿಗೆ ತಿನ್ನಿಸಿದರು. ಕಲ್ಲಹಳ್ಳಿಯ ನಿವಾಸದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಅಭಿಮಾನಿಗಳು ಮಧು ಅವರಿಗೆ ಹೂಗುಚ್ಛ ನೀಡಿ ಹುಟ್ಟುಹಬ್ಬದ ಶುಭಾಶಯ ಕೋರಿದರು. ಧರ್ಮ ಗುರುಗಳ ನೇತೃತ್ವದಲ್ಲಿ ಕ್ರೈಸ್ತ ಸಮಾಜದಿಂದಲೂ ಸಚಿವರಿಗೆ ಶುಭಾಶಯ ಕೋರಲಾಯಿತು. ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಬಂದವರಿಗೆ ಭರ್ಜರಿ ಬಾಟೂಟದ ವ್ಯವಸ್ಥೆ ಮಾಡಲಾಗಿತ್ತು. ಪಾಯಸ ಮೈಸೂರುಪಾಕ್‌ ಸಿಹಿಯೊಂದಿಗೆ ಸಸ್ಯಹಾರಿಗಳಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT