ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ರೈತನ ಸ್ವಂತ ಸೂರಿನ ಕನಸು ಭಗ್ನ

ಹೊಸಮನೆ ಕಟ್ಟಡದ ಮಧ್ಯದಲ್ಲೇ ಹಾದು ಹೋಗಲಿದೆ ಹೆದ್ದಾರಿ !
Last Updated 6 ಡಿಸೆಂಬರ್ 2022, 6:06 IST
ಅಕ್ಷರ ಗಾತ್ರ

ಹೊಸನಗರ: ‘ಕೂಲಿನಾಲಿ ಮಾಡಿ ಬಂದ ಹಣದಲ್ಲಿ ಮನೆ ಕಟ್ಟಲು ಅಡಿಪಾಯ ಹಾಕಿದೆ. ಗೋಡೆ ಕಟ್ಟಿದೆ. ಆದರೀಗ ನನ್ನ ಮನೆಕಟ್ಟುವ ಕನಸನ್ನು ಹೆದ್ದಾರಿ ಕಲ್ಲು ಭಗ್ನಗೊಳಿಸಿದೆ. ಮನೆ ಮೇಲೇ ಹೆದ್ದಾರಿ ಹಾದು ಹೋಗುತ್ತಂತೆ. ಮನೆ ಮಧ್ಯಕ್ಕೆ ಸರ್ವೆಕಲ್ಲು ಬಂದು ಬಿದ್ದಿದ್ದು, ನನಗೆ ನನ್ನ ಮನೆ ಉಳಿಸಿಕೊಡಿ’

ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಕ್ಕೋಡಿ ಗ್ರಾಮದ ರೈತ ಪುಟ್ಟನಾಯ್ಕರ ನೋವಿನ ನುಡಿಗಳಿವು.

ರಾಣೆಬೆನ್ನೂರು– ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ಸಮೀಕ್ಷೆ ಕಾರ್ಯ ಪ್ರಗತಿಯಲಿದ್ದು, ಪುಟ್ಟನಾಯ್ಕರ ಮನೆಗೆ ಆಪತ್ತು ಎದುರಾಗಿದೆ. ಇವರು ಕಟ್ಟಿರುವ ಅರ್ಧ ಮನೆ ಮೇಲೆ ರಸ್ತೆ ಹಾದು ಹೋಗಲಿದೆ. ಇದರಿಂದ ಅವರು ಆತಂಕಕ್ಕೆ ಒಳಗಾಗಿದ್ದಾರೆ.

ಪುಟ್ಟನಾಯ್ಕ ಅವರಿಗೆ 15 ಗುಂಟೆ ಜಾಗವಿದೆ. ಅದರಲ್ಲಿ ಮೊದಲಿದ್ದ ಹಳೆಯ ಮನೆ ಬೀಳುವ ಸ್ಥಿತಿಯಲ್ಲಿದ್ದಿದ್ದರಿಂದ ₹ 7 ಲಕ್ಷದಿಂದ ₹ 8 ಲಕ್ಷ ಖರ್ಚು ಮಾಡಿ ಹೊಸ ಮನೆ ಕಟ್ಟುತ್ತಿದ್ದರು. ಈ ಸಂದರ್ಭದಲ್ಲಿ ಹೆದ್ದಾರಿ ಬೈಪಾಸ್ ಸಮೀಕ್ಷೆಯಲ್ಲಿ ಇವರ ಮನೆ ಇರುವ ಜಾಗದಲ್ಲೇ ರಸ್ತೆ ಹಾದು ಹೋಗಲಿರುವುದರಿಂದ ದಿಕ್ಕು ತೋಚದಾಗಿದ್ದಾರೆ.

ಮಾರ್ಗ ಬದಲಾವಣೆ ತಂದ ಆತಂಕ: ರಾಣೆಬೆನ್ನೂರು- ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯನ್ನು ಹೊಸನಗರ- ಜಯನಗರ-ಬೆಕ್ಕೋಡಿ–ಸಂಪೇಕಟ್ಟೆ ಮಾರ್ಗವಾಗಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ಇದಕ್ಕಾಗಿ ಸರ್ವೆ ನಡೆದು ಕಲ್ಲು ಹಾಕಲಾಗಿತ್ತು. ಆಗ ಪುಟ್ಟನಾಯ್ಕರ ಮನೆಯಿಂದ ಸರ್ವೆ ಕಲ್ಲು 200 ಅಡಿ ದೂರದಲ್ಲಿತ್ತು. ನಂತರ ಬೈಪಾಸ್ ಮಾರ್ಗ ಬದಲಾಗಿ ಕಲ್ಲು ಹಾಕಿದ್ದು, ಮನೆಯ ಮಧ್ಯಭಾಗಕ್ಕೆ ಬಂದಿದೆ. ಬೆಕ್ಕೋಡಿ- ಕೊಡಸೆ- ಆರಬೈಲು, ಮೂಡಾಗ್ರೆ, ಕೋಣೆಬೈಲು-ಹೊಸೂರು-ಅಡಗೋಡಿ ಮೂಲಕ ಬೈಪಾಸ್ ಹಾದು ಹೋಗಲಿದೆ. ಆಗ ಮನೆ ಕಟ್ಟಿಕೊಳ್ಳಿ ಎಂದಿದ್ದ ಅಧಿಕಾರಿಗಳು ಈಗ ಕೆಲಸ ನಿಲ್ಲಿಸಲು ಹೇಳುತ್ತಿದ್ದಾರೆ ಎಂದು ರೈತ ಪುಟ್ಟನಾಯ್ಕ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ಒಂದೇ ಮನೆಗೆ ಹಾನಿ: ಹೆದ್ದಾರಿಗೆ ಒಂದಷ್ಟು ರೈತರ ಜಮೀನು ಬಲಿಯಾಗಲಿವೆ. ಆದರೆ, ಮನೆಗಳಿಗೆ ಸಂಬಂಧಿಸಿದಂತೆ ಪುಟ್ಟನಾಯ್ಕ ಅವರ ಹೊಸ ಮನೆ ಮಾತ್ರ ಬಲಿಯಾಗಲಿದೆ.

ದಾಖಲೆ ಇಲ್ಲ: ‘ಅಧಿಕಾರಿಗಳು ಮನೆ ಜಾಗದ ದಾಖಲೆ ಕೇಳುತ್ತಿದ್ದಾರೆ. ಅಪ್ಪನ ಕಾಲದಿಂದಲೂ ಇಲ್ಲೇ ಇದ್ದೇವೆ. 1997ರಲ್ಲಿಯೇ ಅರ್ಜಿ ಸಲ್ಲಿಸಿದ್ದರೂ ಈವರೆಗೂ ಭೂಮಿ ಹಕ್ಕುಪತ್ರ ಸಿಕ್ಕಿಲ್ಲ. ದಾಖಲೆ ಕೊಡಿ ಅಂದರೆ ಎಲ್ಲಿಂದ ಕೊಡೋದು. ದಾಖಲೆ ಇಲ್ಲ ಅಂದ್ರೆ ಪರಿಹಾರ ಇಲ್ಲ. ಮೈತುಂಬಾ ಸಾಲ ಮಾಡಿಕೊಂಡು ಮನೆ ಕಟ್ಟುತ್ತಿದ್ದೇನೆ. ಮನೆ ನೆಲಸಮವಾದರೆ ನಮ್ಮ ಬದುಕೇ ಕುಸಿಯುತ್ತದೆ’ ಎಂದು ಅವರು ನೊಂದು ನುಡಿದರು.

ಮನೆ ಉಳಿಸಿಕೊಡಿ: ‘ನಮಗೆ ಈ ಮನೆ ಬಿಟ್ಟರೆ ಬೇರೆ ಆಸರೆ ಇಲ್ಲ. ಅಕ್ಕಪಕ್ಕ ಬೇಕಾದಷ್ಟು ಜಾಗವಿದೆ. ದಯಮಾಡಿ ಮನೆ ಉಳಿಸಿಕೊಡಿ. ನಮಗೆ ದೊಡ್ಡವರ ಸಂಪರ್ಕವೂ ಇಲ್ಲ. ಮೊದಲಲು ಸರ್ವೆ ನಡೆಸಿದಾಗ ಹೆದ್ದಾರಿ ಇಲ್ಲೇ ಹಾದುಹೋಗಲಿದೆ ಎಂದು ತಿಳಿಸಿದ್ದರೆ ಮನೆ ಕಟ್ಟುತ್ತಿರಲಿಲ್ಲ. ಈಗ ಮನೇನೂ ಹೋಗುತ್ತೆ, ಸಾಲನೂ ಕಟ್ಟಬೇಕು ಏನು ಮಾಡೋದು’ ಎಂದು ಪುಟ್ಟನಾಯ್ಕ ಅವರ ಪತ್ನಿ ಪಾರ್ವತಮ್ಮ, ಪುತ್ರ ವೆಂಕಟೇಶ ದುಗುಡ ತೋಡಿಕೊಂಡರು.

ಕೋಟ್‌...

ಹೆದ್ದಾರಿಗಾಗಿ ಒಂದು ಮನೆ ಮಾತ್ರ ಹಾನಿಯಾಗುತ್ತಿದ್ದು, ಸರ್ಕಾರ ಮನಸ್ಸು ಮಾಡಿದರೆ ಮನೆ ಉಳಿಸೋದು ಕಷ್ಟವಲ್ಲ. ಪುಟ್ಟನಾಯ್ಕ ಕುಟುಂಬ ಖಿನ್ನತೆಗೆ ಒಳಗಾಗಿದ್ದು, ರಕ್ಷಣೆ ನೀಡಬೇಕು. ಕೊಡಸೆ ಚಂದ್ರಪ್ಪ, ಅರಮನೆಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ

ಪುಟ್ಟನಾಯ್ಕರ ಮನೆಗೆ ಸಂಕಷ್ಟ ಒದಗಿರುವ ವಿಚಾರ ಗಮನಕ್ಕೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಅಲ್ಲಿಯ ನಿವಾಸಿಗಳ ಬಗ್ಗೆ ಕಾಳಜಿ ಇದ್ದು, ಅನ್ಯಾಯವಾಗದಂತೆ ನೋಡಿಕೊಳ್ಳಲಾಗವುದು.

ಪೀರ್ ಪಾಷಾ, ವಿಶೇಷ ಅಧಿಕಾರಿ, ಹೆದ್ದಾರಿ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT