ಭದ್ರಾವತಿ: ಅರಣ್ಯ ವಿಭಾಗದ ಮಾವಿನಕೆರೆ ವಲಯದಲ್ಲಿ ಬೀಟ್ ಫಾರೆಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಲಿತ ನೌಕರನ ವಿರುದ್ಧ ಸುಳ್ಳು ವರದಿ ನೀಡಿ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಬಿ.ಎಚ್.ರಸ್ತೆಯಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಮಾವಿನಕೆರೆ ವಲಯದಲ್ಲಿ ದಲಿತ ನೌಕರ ರಾಮು ದೊಡ್ಮನೆ ಅವರು 8 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಲಯ ಅಧಿಕಾರಿ ಜಗದೀಶ್ ಅವರು ತಾಲ್ಲೂಕಿನ ಗುಡಮಘಟ್ಟ ಗ್ರಾಮದ ಸರ್ವೆ ನಂ.43ರಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ರೈತರು ಅಕ್ರಮವಾಗಿ ಸಾಗುವಳಿ ಮಾಡಿದ್ದು, ಖುದ್ದಾಗಿ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ರಾಮು ಅವರಿಗೆ ಆದೇಶಿಸಿದ್ದರು. ರಾಮು ಅವರು ಸ್ಥಳಕ್ಕೆ ತೆರಳಿ ಸರ್ವೆ ನಡೆಸಿ, ಪ್ರಾಮಾಣಿಕವಾಗಿ ವರದಿ ಸಲ್ಲಿಸಿದ್ದರು. ಆದರೆ, ಜಗದೀಶ್ ಅವರು ರಾಮು ಅವರ ವಿರುದ್ಧ ಅರಣ್ಯ ಸುಳ್ಳು ವರದಿ ನೀಡಿರುವುದಾಗಿ ಹೇಳಿ, ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಇದು ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಜಗದೀಶ್ ಅವರು ತಮ್ಮ ಅಕ್ರಮಗಳನ್ನು ಮುಚ್ಚಿ ಹಾಕುವ ಉದ್ದೇಶದಿಂದ ಈ ರೀತಿ ಮಾಡಿದ್ದು, ಅಮಾನತು ಆದೇಶ ಪತ್ರ ಬಂದ ನಂತರ ಅನಾರೋಗ್ಯದ ನೆಪ ಹೇಳಿಕೊಂಡು ಜಗದೀಶ್ ಅವರು ರಜೆ ಹಾಕಿ ತೆರಳಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿದರು.
ರಾಮು ಅವರ ಅಮಾನತು ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಬೇಕು. ತಕ್ಷಣ ಅವರನ್ನು ಕರ್ತವ್ಯಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಜಗದೀಶ್ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸತ್ಯ ಮತ್ತು ಜಿಲ್ಲಾ ಸಂಚಾಲಕ ಚಿನ್ನಯ್ಯ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಮುಖಂಡರಾದ ಸಿ. ಜಯಪ್ಪ ಹೆಬ್ಬಲಗೆರೆ, ಈಶ್ವರಪ್ಪ, ಮಣಿ ಜಿಂಕ್‌ಲೈನ್, ಪರಮೇಶ್ವರಪ್ಪ, ಎನ್. ಗೋವಿಂದ, ಸುಬ್ರಮಣಿ (ಕಬಡ್ಡಿ), ಈಶ್ವರಪ್ಪ (ನಗರಸಭೆ), ಸಂದೀಪ್, ಸುರೇಶ್ (ಕೂಡ್ಲಿಗೆರೆ), ಎನ್. ಪ್ರಸನ್ನಕುಮಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.