ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೈಲ್ವೆ ಅಭಿವೃದ್ಧಿ, ಮೋದಿ ಮ್ಯಾಜಿಕ್: ಬಿ.ವೈ.ರಾಘವೇಂದ್ರ ಬಣ್ಣನೆ

ಶಿವಮೊಗ್ಗ, ಸಾಗರ, ತಾಳಗುಪ್ಪ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಚಾಲನೆ
Published 26 ಫೆಬ್ರುವರಿ 2024, 13:33 IST
Last Updated 26 ಫೆಬ್ರುವರಿ 2024, 13:33 IST
ಅಕ್ಷರ ಗಾತ್ರ

ಶಿವಮೊಗ್ಗ: ‘ರೈಲ್ವೆ ಸೇರಿ ದೇಶದ ಸಂಪರ್ಕ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಬಂದು 65 ವರ್ಷಗಳಲ್ಲಿ ಆಗದಷ್ಟು ಕೆಲಸ ಕೇವಲ 10 ವರ್ಷಗಳಲ್ಲಿ ಆಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸದ ಶೈಲಿ’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶಿವಮೊಗ್ಗ, ಸಾಗರ, ತಾಳಗುಪ್ಪ ಸೇರಿ ದೇಶದ 554 ರೈಲ್ವೆ ನಿಲ್ದಾಣಗಳನ್ನು ಅಮೃತ ಭಾರತ ಯೋಜನೆಯಡಿ ಪುನರ್‌ ನಿರ್ಮಾಣ ಕಾರ್ಯಕ್ಕೆ ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೆಹಲಿಯಲ್ಲಿ ವರ್ಚುವಲ್ ವ್ಯವಸ್ಥೆ ಮೂಲಕ ಚಾಲನೆ ನೀಡಿದರು. ಅದಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಸದರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುನ್ನ ದೇಶದಲ್ಲಿ ದಿನಕ್ಕೆ 4 ಕಿ.ಮೀ. ರೈಲು ಹಳಿ ಹಾಕಲಾಗುತ್ತಿತ್ತು. ಈಗ 13 ಕಿ.ಮೀ. ಹಾಕಲಾಗುತ್ತಿದೆ. ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಪ್ರಮಾಣ ಶೇ 100ರಷ್ಟು ಹೆಚ್ಚಳ ಕಂಡಿದೆ’ ಎಂದರು.

ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವ ಜೊತೆಗೆ 1500 ಮೇಲ್ಸೇತುವೆ, ಕೆಳಸೇತುವೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 3 ನಿಲ್ದಾಣಗಳು ₹ 180 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳುತ್ತಿವೆ. ಪ್ರತಿದಿನ ಶಿವಮೊಗ್ಗದಿಂದ ವಿವಿಧ ಸ್ಥಳಗಳಿಗೆ ಸುಮಾರು 15,000ದಿಂದ 20,000 ಜನ ರೈಲಿನಲ್ಲಿ ಓಡಾಟ ಮಾಡುತ್ತಿದ್ದಾರೆ. ಈ ಹಿಂದೆ ಕೇವಲ 5 ರೈಲುಗಳಿದ್ದವು. ಈಗ 30 ರೈಲುಗಳಾಗಿವೆ. 298 ಕಿ.ಮೀ. ಮೆಟ್ರೊ ಮಾರ್ಗ ವಿಸ್ತರಿಸಲಾಗಿದೆ. 9 ವರ್ಷಗಳಲ್ಲಿ 5 ನಗರಗಳ ಜೊತೆಗೆ 15 ನಗರಗಳನ್ನು ಹೆಚ್ಚಿಸಿ ಒಟ್ಟು 20 ನಗರಗಳಲ್ಲಿ 878 ಕಿ.ಮೀ. ಮೆಟ್ರೊ ಜಾಲ ವಿಸ್ತರಣೆಯಾಗಲಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕಕ್ಕೆ ಒಟ್ಟು ₹47.336 ಕೋಟಿ ರೈಲ್ವೆ ಯೋಜನೆಗಳು ಅನುಷ್ಠಾನವಾಗಿದ್ದು, ಬಜೆಟ್‌ನಲ್ಲಿ ₹ 7,527 ಕೋಟಿ ನೀಡಲಾಗಿದೆ. ಶಿವಮೊಗ್ಗ, ಶಿಕಾರಿಪುರ, ರಾಣೆಬೆನ್ನೂರು ಮಾರ್ಗವೂ ಅದರಲ್ಲಿ ಸೇರಿದೆ. ವಿಶ್ವದಲ್ಲೇ ಆಧುನಿಕ ರೈಲು ನಿಲ್ದಾಣಗಳು ದೇಶದಲ್ಲಿ ಆಗುತ್ತಿದ್ದು ಕ್ರಾಂತಿಯಾಗಿದೆ ಎಂದರು.

ಎರಡನೇ ಹಂತದಲ್ಲಿ ಭದ್ರಾವತಿ ರೈಲು ನಿಲ್ದಾಣವನ್ನೂ ಅಭಿವೃದ್ಧಿ ಪಟ್ಟಿಯಲ್ಲಿ ತೆಗೆದುಕೊಳ್ಳಲಾಗುವುದು. ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಹಿರಿಯರಿಗಾಗಿ ಎಕ್ಸಲೇಟರ್ ವ್ಯವಸ್ಥೆ ಕೂಡ ಸೇರಿದೆ. ವಿಕಸಿತ ಭಾರತದ ಸಂಕಲ್ಪ ಮೋದಿಯವರ ಗ್ಯಾರಂಟಿ ಆಗಿದೆ ಎಂದರು.

ಕಾರ್ಯಕ್ರಮದಲ್ಲಿ ರೈಲ್ವೆ ಅಧಿಕಾರಿಗಳಾದ ರಾಜ್‌ಕುಮಾರ್, ವಿನಾಯಕ್ ಆರ್.ನಾಯ್ಕ್, ವಸಂತಕುಮಾರ್, ರೈಲ್ವೆ ಸಮಿತಿಯ ನಾಗರಾಜ್ ಗೋರೆ, ಆರ್. ಮಹೇಶ್, ಮೋಹನ್‌ರಾಜ್ ಜಾಧವ್, ಸಿ.ಮೂರ್ತಿ, ಯಶೋದಾ ವೈಷ್ಣವ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್, ಶಂಕರಪ್ಪ, ಆರತಿ, ಅ.ಮಾ.ಪ್ರಕಾಶ್, ಮೋಹನ್‌ರೆಡ್ಡಿ ಮತ್ತಿತರರು ಇದ್ದರು.

ತಿರು‍ಪತಿ ಚೆನ್ನೈಗೆ ರೈಲು ಪುನರಾರಂಭಿಸಿ..

ಶಿವಮೊಗ್ಗದಿಂದ ತಿರುಪತಿ ಹಾಗೂ ಚೆನ್ನೈಗೆ ಮತ್ತೆ ರೈಲು ಸಂಚಾರ ಆರಂಭಿಸಲಾಗುವುದು ಎಂದು ಭರವಸೆ ಕೊಟ್ಟಿದ್ದಿರಿ. ಅದರಂತೆ ಪುನರಾರಂಭಿಸಿ ಎಂದು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು. ಶಿವಮೊಗ್ಗದಿಂದ ತಿರುಪತಿ ಚೆನ್ನೈಗೆ ವಿಮಾನ ಹಾರಾಟ ಆರಂಭವಾಗಿದೆ ಎಂಬ ಕಾರಣಕ್ಕೆ ರೈಲು ಸೇವೆ ಆರಂಭಿಸುವುದನ್ನು ನಿರ್ಲಕ್ಷಿಸಬೇಡಿ ಎಂದು ಕೋರಿದರು. ಶಿವಮೊಗ್ಗದಿಂದಲೂ ಒಂದು ವಂದೇ ಭಾರತ್ ಹೈಸ್ಪೀಡ್ ರೈಲು ಶೀಘ್ರ ಓಡಿಸುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. 3 ವರ್ಷದಲ್ಲಿ 400 ಕ್ಕೂ ಹೆಚ್ಚು ಒಂದೇ ಭಾರತ್ ರೈಲುಗಳು ದೇಶದಲ್ಲಿ ಓಡಲಿವೆ ಎಂದರು. ಶಾಲಾ ಮಕ್ಕಳ ಮೆರುಗು.. ಸಮಾರಂಭದಲ್ಲಿ ಆದಿಚುಂಚನಗಿರಿ ಶಾಲೆ ವಾಸವಿ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಫೋದಾರ್ ಇಂಟರ್‌ನ್ಯಾಶನಲ್ ಸ್ಕೂಲ್ ಸೇರಿದಂತೆ ಬೇರೆ ಬೇರೆ ಶಾಲೆಗಳ ನೂರಾರು ಮಕ್ಕಳು ಭಾಗವಹಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟ ಅವರಿಗೆ ಸಂಸದ ಬಿ.ವೈ.ರಾಘವೇಂದ್ರ ಬಹುಮಾನ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT