ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಹ್ಮಣ ಬೇದೂರು ಬೆಟ್ಟ ಅಗೆತ; ಭೂಕುಸಿತದ ಎಚ್ಚರಿಕೆ

ಸಾಗರ ತಾಲ್ಲೂಕು ಬ್ರಾಹ್ಮಣ ಬೇದೂರು ಅರಣ್ಯದಲ್ಲಿ ಕೆಂಪು ಕಲ್ಲು ಸಾಗಣೆ
Last Updated 13 ಫೆಬ್ರುವರಿ 2022, 20:30 IST
ಅಕ್ಷರ ಗಾತ್ರ

ಶಿವಮೊಗ್ಗ: ಸಾಗರ ತಾಲ್ಲೂಕಿನ ಬ್ರಾಹ್ಮಣ ಬೇದೂರು ಬೆಟ್ಟದ ಮೇಲ್ಭಾಗದಲ್ಲಿ ನಡೆಯುತ್ತಿರುವ ಕೆಂಪು ಕಲ್ಲು ಗಣಿಗಾರಿಕೆ ತಡೆಯದಿದ್ದರೆ 2022ರ ಮಳೆಗಾಲದಲ್ಲಿ ಭಾರಿ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ಪರಿಸರ ವಿಜ್ಞಾನಿಗಳ ತಂಡ ಎಚ್ಚರಿಸಿದೆ.

ರಾಜ್ಯ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ವಿಜ್ಞಾನಿಗಳಾದ ಡಾ.ಟಿ.ವಿ. ರಾಮಚಂದ್ರ, ಡಾ.ಕೇಶವ ಕೊರ್ಸೆ, ಡಾ.ಮಾರುತಿ ಅವರನ್ನು ಒಳಗೊಂಡ ತಂಡ ಬೆಟ್ಟಕ್ಕೆ ಈಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಬೇದೂರು ಗ್ರಾಮದ ದಟ್ಟ ಹಸಿರು ಬೆಟ್ಟದ ಮೇಲ್ಭಾಗದ ಸರ್ವೆ ನಂಬರ್ 77, 78, 74ರಲ್ಲಿ ಸುಮಾರು 17 ಎಕರೆ ಪ್ರದೇಶದಲ್ಲಿ 2 ವರ್ಷಗಳಿಂದ ಕೆಂಪು ಕಲ್ಲು ತೆಗೆಯಲಾಗುತ್ತಿದೆ. ಅರಣ್ಯ ಇಲಾಖೆಯಿಂದ ಯಾವುದೇ ಪರವಾನಗಿ ಇಲ್ಲದೆ ಎತ್ತರದ ಬೆಟ್ಟದಲ್ಲಿ ಗಣಿಗಾರಿಕೆ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಿಸಲಾಗಿದೆ. 2020ರ ಮಳೆಗಾಲದಲ್ಲಿ ಗಣಿಗಾರಿಕೆಯ ಕಂದಕಗಳಲ್ಲಿ ನೀರು ತುಂಬಿಕೊಂಡು ಜಲ ಒತ್ತಡ ನಿರ್ಮಾಣವಾಗಿ ಬೆಟ್ಟದ ಬುಡದಲ್ಲಿ ಭೂಕುಸಿತ ಸಂಭವಿಸಿತ್ತು. ನಾಲ್ಕು ಮನೆಗಳು ನೆಲಸಮವಾಗಿದ್ದವು. ಗ್ರಾಮಸ್ಥರು ತಾಲ್ಲೂಕು, ಜಿಲ್ಲಾಡಳಿತ, ಅರಣ್ಯ ಇಲಾಖೆ, ಗಣಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಗಣಿಗಾರಿಕೆ ನಿಂತಿಲ್ಲ.

ತಂಡ ನೀಡಿದ ಅಧ್ಯಯನ ವರದಿ ಅನ್ವಯ ಬೇದೂರು ಬೆಟ್ಟದ ಅರಣ್ಯ ಪ್ರದೇಶದಲ್ಲಿ ನಿರಂತರ ಗಣಿಗಾರಿಕೆ, ರಸ್ತೆ ನಿರ್ಮಾಣ, ಭಾರಿ ವಾಹನಗಳ ಸಂಚಾರದ ಕಾರಣ ಭೂಕುಸಿತವಾಗಿದೆ. ಇದೇ ಸ್ಥಿತಿ ನಾಲ್ಕೈದು ತಿಂಗಳು ಮುಂದುವರಿದರೆ 15 ರೈತ ಕುಟುಂಬಗಳ ಮನೆಗಳು ಕೊಚ್ಚಿಹೋಗುವ, ತೋಟ-ಗದ್ದೆಗಳು ನಾಶವಾಗುವ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಸಿದೆ. ವರದಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ವಿಪತ್ತು ಪ್ರಾಧಿಕಾರದ ಮುಖ್ಯಸ್ಥರು, ಗಣಿ ಇಲಾಖೆ ನಿರ್ದೇಶಕರು, ಅರಣ್ಯ ಇಲಾಖೆ, ಶಿವಮೊಗ್ಗ ಜಿಲ್ಲಾಧಿಕಾರಿಗೆ ನೀಡಲಾಗಿದೆ.

ಕಂದಾಯ ಕಾಯ್ದೆ, ಅರಣ್ಯ, ಜೀವ ವೈವಿಧ್ಯ, ಗಣಿ, ಪಂಚಾಯತ್‌ ರಾಜ್ ಕಾಯ್ದೆಗಳ ನೇರ ಉಲ್ಲಂಘನೆಯಾಗಿದೆ. ಜಿಲ್ಲಾಡಳಿತ ತಕ್ಷಣ ಗಣಿಗಾರಿಕೆ ನಿಷೇಧಿಸಬೇಕು. ಬೆಟ್ಟದಲ್ಲಿ ಗಣಿಗಾರಿಕೆ ಕಾರಣ ನಿರ್ಮಾಣವಾದ ರಸ್ತೆ ಸಂಚಾರ ನಿರ್ಬಂಧಿಸಬೇಕು. ಸ್ಥಳೀಯ ಗ್ರಾಮ ಪಂ. ಸಂಭವನೀಯ ಭೂಕುಸಿತದ ಬಗ್ಗೆ ರೈತರಲ್ಲಿ ಜಾಗೃತಿ ಮಾಡಿಸಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

***

ಗಣಿಗಾರಿಕೆಯನ್ನು ತಕ್ಷಣ ತಡೆಯಬೇಕು. ಹಾನಿಗೆ ಒಳಗಾದ ಕುಟುಂಬಗಳಿಗೆ ಪರಿಹಾರ ತಕ್ಷಣ ಬಿಡುಗಡೆ ಮಾಡಬೇಕು.

- ಅನಂತ ಹೆಗಡೆ ಅಶೀಸರ,ಮಾಜಿ ಅಧ್ಯಕ್ಷರು, ರಾಜ್ಯ ಜೀವ ವೈವಿಧ್ಯ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT