ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿಗೂ ಜನಪದಕ್ಕೂ ಅವಿನಾಭಾವ ಸಂಬಂಧ- ಧರ್ಮದರ್ಶಿ ರಾಮಪ್ಪ

ಜಿಲ್ಲಾಮಟ್ಟದ ಜಾನಪದ ಸಮ್ಮೇಳನ ಉದ್ಘಾಟನೆ
Last Updated 18 ಏಪ್ರಿಲ್ 2022, 6:41 IST
ಅಕ್ಷರ ಗಾತ್ರ

ಸಾಗರ: ‘ನಮ್ಮ ಬದುಕು ಹಾಗೂ ಜಾನಪದ ಸಾಹಿತ್ಯ ಮತ್ತು ಕಲೆಯ ನಡುವೆ ಅವಿನಾಭಾವ ಸಂಬಂಧವಿದೆ’ ಎಂದು ಸಿಗಂದೂರು ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ರಾಮಪ್ಪ ಹೇಳಿದರು.

ಸಮೀಪದ ಸಿರಿವಂತೆ ಗ್ರಾಮದಲ್ಲಿ ಕರ್ನಾಟಕ ಜಾನಪದ ಪರಿಷತ್, ಜಿಲ್ಲಾ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಸಿರಿವಂತೆ ಗ್ರಾಮ ಪಂಚಾಯಿತಿ, ಕನ್ನಡ ಸಾಹಿತ್ಯ ಪರಿಷತ್ ಮತ್ತು ತಾಳಗುಪ್ಪ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಯಿಂದ ಭಾನುವಾರ ಏರ್ಪಡಿಸಿದ್ದ ಶಿವಮೊಗ್ಗ ಜಿಲ್ಲಾಮಟ್ಟದ 2ನೇ ಜಾನಪದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಪ್ರತಿಯೊಬ್ಬರ ಬದುಕಿಗೂ ಶೋಭೆ ತರುವ ಕಲಾ ಪ್ರಕಾರವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಹುಮಾಧ್ಯಮಗಳ ಕಾರಣಕ್ಕೆ ಈ ಕಲೆ ನಶಿಸುತ್ತಿದೆ. ಅನಾದಿ ಕಾಲದ ಇತಿಹಾಸ ಹೇಳುವ ಈ ಕಲಾ ಪ್ರಕಾರದ ಬಗ್ಗೆ ಯುವ ತಲೆಮಾರಿನವರಲ್ಲಿ ಆಸಕ್ತಿ ಬೆಳೆಸಿದರೆ ಮಾತ್ರ ಅದು ಉಳಿಯಬಲ್ಲದು ಎಂದು ಅಭಿಪ್ರಾಯಪಟ್ಟರು.

ದಿಕ್ಸೂಚಿ ಭಾಷಣ ಮಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ‘ಜಾನಪದವು ನಮ್ಮ ಸಂಸ್ಕೃತಿಯ ತಾಯಿಬೇರು. ಜಾನಪದ ಎಂಬುದೇ ಒಂದು ಸಂಭ್ರಮ ಎಂಬುದನ್ನು ನಾವು ಮರೆಯಬಾರದು. ಸರ್ಕಾರದ ನೆರವಿಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಇಂತಹ ಸಮ್ಮೇಳನ ನಡೆಯುತ್ತಿರುವುದು ಜಾನಪದ ಪ್ರಕಾರದ ಪಾಲಿಗೆ ಆಶಾದಾಯಕ ಬೆಳವಣಿಗೆ’ ಎಂದರು.

‘ಜಾನಪದ ಕಲಾವಿದರು ನಮ್ಮ ಸಂಸ್ಕೃತಿಯ ರಾಯಭಾರಿಗಳಿದ್ದಂತೆ. ಈ ಕಲಾವಿದರನ್ನು ಭಿಕ್ಷುಕರಂತೆ ಕಾಣುವ ಪ್ರವೃತ್ತಿ ಕೊನೆಯಾಗಬೇಕು. ಜಾನಪದ ಕಲಾವಿದರಿಗೆ ಮನಸ್ಸುಗಳನ್ನು ಬೆಸೆಯುವ ಶಕ್ತಿ ಇದೆ’ ಎಂದು ಹೇಳಿದರು.

ಸಮ್ಮೇಳನದ ಅಧ್ಯಕ್ಷ ಡೊಳ್ಳು ಕುಣಿತದ ಕಲಾವಿದ ಶಿಕಾರಿಪುರದ ಡೊಂಬರ ಹುಚ್ಚಪ್ಪ, ‘ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸರ್ಕಾರದ ಜೊತೆಗೆ ಎಲ್ಲಾ ಸಂಘ ಸಂಸ್ಥೆಗಳ ಮೇಲೆ ಇದೆ. ಪ್ರತಿಯೊಬ್ಬರೂ ಈ ಕಲೆಗಳ ಬಗ್ಗೆ ಆಸಕ್ತಿ ತೋರಿದರೆ ಮಾತ್ರ ಕಲೆ ಬೆಳೆಯುತ್ತದೆ’ ಎಂದರು.

ಹೆಗಡೆಮನೆ ಯೋಗೀಶ್, ದೇವೇಂದ್ರ ಬೆಳೆಯೂರು, ಗಣಪತಿ ನಾಯ್ಕ್ ಸಿರಿವಂತೆ, ಕೆಸವಿನಮನೆ ಶ್ರೀನಿವಾಸ ರಾವ್, ನಾಗಮ್ಮ ಆನಂದಪುರ, ರಾಜು ಜನ್ನೆಹಕ್ಲು, ಲಕ್ಷ್ಮಣ ಕುಗ್ವೆ ಅವರಿಗೆ ಜಿಲ್ಲಾಮಟ್ಟದ ‘ಜಾನಪದ ಸಿರಿ’ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಜಾನಪದ ವಿದ್ವಾಂಸ ದೇವೇಂದ್ರ ಬೆಳೆಯೂರು, ‘ಶಿವಮೊಗ್ಗ ಜಿಲ್ಲೆಯಲ್ಲಿ ಇರುವಷ್ಟು ಜಾನಪದ ವೈವಿಧ್ಯ ರಾಜ್ಯದ ಇತರ ಭಾಗಗಳಲ್ಲಿ ಇಲ್ಲ. ಇಲ್ಲಿನ ಸಣ್ಣಾಟ, ದೊಡ್ಡಾಟ ಪ್ರಕಾರಕ್ಕೆ ಸಿಗಬೇಕಾದ ಮಾನ್ಯತೆ ದೊರಕಿಲ್ಲ. ಈ ಬಗ್ಗೆ ಹೆಚ್ಚು ನಿಗಾ
ವಹಿಸಬೇಕಿದೆ’ ಎಂದರು.

ಲೇಖಕ ವಿ.ಗಣೇಶ್ ಅವರ ‘ಜಾನಪದ ಕತೆಗಳು’ ಕೃತಿಯನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಬಿಡುಗಡೆ ಮಾಡಿದರು.

ಪ್ರಮುಖರಾದ ಮನೋಜ್ ಜನ್ನಹಕ್ಲು, ಗುಡ್ಡಪ್ಪ ಜೋಗಿ, ಸಾವಿತ್ರಿ ಚಂದ್ರಪ್ಪ, ಲೋಕೇಶ್ ಗಾಳಿಪುರ, ಲೋಕೇಶ್ ಎಸ್.ಎಲ್. ಇದ್ದರು.

ಸ್ನೇಹ ಸಾಗರ ಮಹಿಳಾ ಮಂಡಳಿ ಸದಸ್ಯರು ನಾಡಗೀತೆ ಹಾಡಿದರು. ಕಲಾಸಿಂಚನ ಶಿಕ್ಷಕರ ವೇದಿಕೆ ಸದಸ್ಯರು ರೈತ ಗೀತೆ ಹಾಡಿದರು. ಸತ್ಯನಾರಾಯಣ ಸಿರಿವಂತೆ ಸ್ವಾಗತಿಸಿದರು. ಡಾ.ಮೋಹನ್ ಚಂದ್ರಗುತ್ತಿ ಸನ್ಮಾನಿತರನ್ನು ಪರಿಚಯಿಸಿದರು. ಅನಿಲ್ ಗೌಡ ವಂದಿಸಿದರು. ಪರಮೇಶ್ವರ ಕರೂರು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT