ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶುದ್ಧ ಜೀವನಕ್ಕೆ ಧರ್ಮ ಪ್ರಜ್ಞೆ ಮುಖ್ಯ: ರಂಭಾಪುರಿಶ್ರೀ

ಶರನ್ನವರಾತ್ರಿ ದಸರಾ ದರ್ಬಾರ್‌ ಧರ್ಮ ಸಮಾರಂಭದಲ್ಲಿ ರಂಭಾಪುರಿಶ್ರೀ
Last Updated 12 ಅಕ್ಟೋಬರ್ 2021, 3:31 IST
ಅಕ್ಷರ ಗಾತ್ರ

ಕಡೇನಂದಿಹಳ್ಳಿ (ಶಿರಾಳಕೊಪ್ಪ): ಪರಿಶುದ್ಧವಾದ ಮತ್ತು ಪವಿತ್ರವಾದ ಜೀವನ ರೂಪಗೊಳ್ಳಲು ಧರ್ಮ ಪ್ರಜ್ಞೆ ಅವಶ್ಯ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಮೀಪದ ಕಡೇನಂದಿಹಳ್ಳಿ ಕ್ಷೇತ್ರದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ದಸರಾ ದರ್ಬಾರ್‌ ಧರ್ಮ ಸಮಾರಂಭದ 5ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಧರ್ಮ ಅನ್ನುವುದು ಹಸಿದವನಿಗೆ ಅನ್ನ, ಬಾಯಾರಿದವನಿಗೆ ನೀರು, ಕುರುಡನಿಗೆ ಕಣ್ಣು, ಹಕ್ಕಿಗೆ ರೆಕ್ಕೆ ಇದ್ದಹಾಗೆ. ಉದಾತ್ತ ಜೀವನ ಮೌಲ್ಯಗಳನ್ನು ಸಂಪಾದಿಸಿಕೊಂಡು ನಡೆಯುವುದೇ ನಿಜವಾದ ಧರ್ಮ. ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ವೀರಶೈವ ಧರ್ಮ ಸಾಹಿತ್ಯಕ್ಕೆ 28 ಶಿವಾಗಮಗಳೇ ಮೂಲ ಬೇರುಗಳು. ವೀರಶೈವ ಧರ್ಮ ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಪ್ರಾಧಾನ್ಯ ಕೊಟ್ಟಿದೆ. ಉಚ್ಚ–ನೀಚ, ಬಡವ–ಬಲ್ಲಿದ ಮತ್ತು ಗಂಡು–ಹೆಣ್ಣು ಅನ್ನುವ ತಾರತಮ್ಯವಿಲ್ಲದೇ ಸರ್ವರ ಶ್ರೇಯೋಭಿವೃದ್ಧಿಗೆ ಮಾರ್ಗದರ್ಶನ ನೀಡಿದೆ. ಮನುಷ್ಯ ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಮುಖ್ಯ. ಮನದ ಅಂಗಳವನ್ನು ಶುಚಿಗೊಳಿಸುವುದು ಗುರುವಿನ ಆದ್ಯ ಕರ್ತವ್ಯ ಎಂದರು.

ಬಿಜೆಪಿಜಿಲ್ಲಾ ಘಟಕದ ಅಧ್ಯಕ್ಷ ಮೇಘರಾಜ ಮಾತನಾಡಿ, ‘ವೀರಶೈವ ಧರ್ಮಕ್ಕೊಂದು ಇತಿಹಾಸವಿದೆ. ಸೈದ್ಧಾಂತಿಕ ತತ್ವತ್ರಯಗಳಿವೆ. ಸುಖ, ಶಾಂತಿ ಮತ್ತು ಸಮೃದ್ಧ ಬದುಕಿಗೆ ಧರ್ಮಾಚಾರ್ಯರ ಕೊಡುಗೆ ಅಪಾರ. ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮಾರಂಭ ಜನಮನದ ಮೇಲೆ ಅರಿವು ನೀಡಿ ಆದರ್ಶ ವ್ಯಕ್ತಿತ್ವ ರೂಪಿಸುತ್ತದೆ’ ಎಂದರು.

ಕವಲೇದುರ್ಗ ಭುವನಗಿರಿಮಠದ ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ಲಕ್ಷ್ಮೇಶ್ವರದ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷೆ ಡಾ. ಜಯಶ್ರೀ ಮಲ್ಲಿಕಾರ್ಜುನ ಹೊಸಮನಿ ಅವರಿಗೆ ‘ಸಾಹಿತ್ಯ ಸಿರಿ’ ಪ್ರಶಸ್ತಿಯನ್ನು ರಂಭಾಪುರಿ ಸ್ವಾಮೀಜಿ ಪ್ರದಾನ ಮಾಡಿದರು.

ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ಚನ್ನಗಿರಿಯ ಕೇದಾರ ಶಿವಶಾಂತವೀರ ಶಿವಾಚಾರ್ಯರು, ನಿಡಗುಂದಿ ರುದ್ರಮುನಿ ಶಿವಾಚಾರ್ಯರು, ಕೋಣಂದೂರು ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು, ಕೆ.ಎಸ್. ವೀರಪ್ಪ ದೇವರು ಸೇರಿ ಹಲವು ಗಣ್ಯರಿಗೆ ರಂಭಾಪುರಿಶ್ರೀ ಗುರುರಕ್ಷೆ ನೀಡಿದರು.

ಬಂಕಾಪುರದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಕಡೇನಂದಿಹಳ್ಳಿ ಪುಣ್ಯಾಶ್ರಮದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಗಂಜೀಗಟ್ಟಿ ಕೃಷ್ಣಮೂರ್ತಿ‌ ಜಾನಪದ ಗೀತೆ ಪ್ರಸ್ತುತಪಡಿಸಿದರು.

ಹೊಸಳ್ಳಿಯ ಭರತ್ ಚೀಲೂರು ಭರತನಾಟ್ಯ ಪ್ರದರ್ಶಿಸಿದರು. ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ನಡೆಯಿತು. ಕಡೇನಂದಿಹಳ್ಳಿಯ ಶಿಕ್ಷಕಿ ಕರಿಬಸಮ್ಮ ಸ್ವಾಗತಿಸಿದರು.

ಗಾನಭೂಷಣ ವೀರೇಶ ಕಿತ್ತೂರ ಅವರಿಂದ ಸಂಗೀತ ಸೌರಭ ಕಾರ್ಯಕ್ರಮ ನಡೆಯಿತು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು. ಸಮಾರಂಭದ ಕೊನೆಗೆ ಆಕರ್ಷಕ ನಜರ್ (ಗೌರವ) ಸಮರ್ಪಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT