ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಕಲ್ಯಾಣಕ್ಕೆ ಬಿಜೆಪಿ ಕೊಡುಗೆ ಶೂನ್ಯ: ಪ್ರದೀಪ್ ಈಶ್ವರ್

ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಪರ ರೋಡ್ ಷೋ
Published 4 ಮೇ 2024, 15:47 IST
Last Updated 4 ಮೇ 2024, 15:47 IST
ಅಕ್ಷರ ಗಾತ್ರ

ಶಿವಮೊಗ್ಗ: ‘ರಾಜ್ಯದ ಬಡವರ ಕಲ್ಯಾಣಕ್ಕೆ ಬಿಜೆಪಿ ಕೊಡುಗೆ ಶೂನ್ಯ. ಆದ್ದರಿಂದ ಕ್ಷೇತ್ರದ ಹಿತ ಕಾಯಲು ಗೀತಕ್ಕಗೆ ಮತ ನೀಡಿ, ಆಶೀರ್ವದಿಸಿ’ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ಇಲ್ಲಿ ಶನಿವಾರ, ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಬಸ್ ನಿಲ್ದಾಣದಿಂದ, ಮೇದಾರಕೇರಿ, ಪೊಲೀಸ್ ಚೌಕಿ ಫ್ಲೈಓವರ್‌ನಿಂದ ಕಾಶಿಪುರ, ಆಲ್ಕೊಳ ವೃತ್ತ, ಗಾಡಿಕೊಪ್ಪ ಪುನಃ ಆಲ್ಕೊಳ ವೃತ್ತ, ಗೋಪಾಳ ರಸ್ತೆ ಮೂಲಕ ಗೋಪಾಳ ಬಸ್ ನಿಲ್ದಾಣದಿಂದ ಗೋಪಾಳ ಮುಖ್ಯರಸ್ತೆ, ಟಿಪ್ಪು ನಗರ ಮುಖ್ಯರಸ್ತೆ ಮೂಲಕ ಅಣ್ಣಾನಗರ ಮಿಳಗಟ್ಟ, ಇಂದಿರಾ ಕ್ಯಾಂಟೀನ್ ಮುಂಭಾಗದಿಂದ, ಕೆಎಸ್ಆರ್‌ಟಿಸಿ ಮುಂಭಾಗದಿಂದ, ಡಬಲ್ ರೋಡ್, ಎನ್.ಟಿ. ರಸ್ತೆ ಬಲಭಾಗದವರೆಗೆ ಹರಕೆರೆ, ಕುರುಬರ ಪಾಳ್ಯದಿಂದ ಸೀಗೇಹಳ್ಳಿ ವೃತ್ತದವರೆಗೆ ನಡೆದ ರೋಡ್ ಷೋನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಕರ್ನಾಟಕದ ಚರಿತ್ರೆಯ ಮೊದಲ ಪುಟ ಶಿವಮೊಗ್ಗ ಜಿಲ್ಲೆಯಿಂದ ಆರಂಭವಾಗುತ್ತದೆ. ಇಲ್ಲಿ ಜನ ಸಮಾನ್ಯರಿಗೆ ಸೇವೆ ಒದಗಿಸಲು ಗೀತಕ್ಕ ಉತ್ತಮ ನಾಯಕಿ. ಆದ್ದರಿಂದ ಈ ಬಾರಿ ಗೀತಕ್ಕಗೆ ಮತ ನೀಡಿ ಆಶೀರ್ವದಿಸಿ’ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್‌ ಮಾತನಾಡಿ, ‘ಸಮಾಜದಲ್ಲಿ ಬಡತನ, ಹಸಿವು, ಅಸಮಾನತೆಯ ಪಿಡುಗು ನಿವಾರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ದುಡಿಯುತ್ತಿದೆ. ಅದೇ ಉದ್ದೇಶಕ್ಕೆ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ’ ಎಂದರು.

‘ಕಾಂಗ್ರೆಸ್ ಸರ್ಕಾರದ ಮೂಲ ಉದ್ದೇಶ ಶೋಷಿತ ವರ್ಗದವರನ್ನು ಮುಖ್ಯ ವಾಹಿನಿಗೆ ಕರೆತರುವುದು. ಅದು ಖಂಡಿತ ನೆರವೇರಲಿದೆ. ಅದೇ ರೀತಿ, ಗ್ಯಾರಂಟಿಗಳು ಬಡವರ ಮನೆ ಬಾಗಿಲಿಗೆ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ತಲುಪುತ್ತಿವೆ. ಇದಕ್ಕೆ ನ್ಯಾಯ ಒದಗಿಸಲು ಎಲ್ಲರೂ ಕೈ ಜೋಡಿಸಬೇಕು. ಆದ್ದರಿಂದ, ಈ ಬಾರಿ ಮತ ನೀಡಿ ಆಶೀರ್ವದಿಸಿ’ ಎಂದರು.

ತರೀಕೆರೆ ಶಾಸಕ ಶ್ರೀನಿವಾಸ್ ಮಾತನಾಡಿ, ‘ಜಿಲ್ಲೆಯ ಅಭಿವೃದ್ಧಿಗೆ ಗೀತಾ ಶಿವರಾಜಕುಮಾರ್‌ ಅವರಿಗೆ ಮತ ನೀಡಿ ಆಶೀರ್ವದಿಸಿ ಎಂದು ಕೋರಿದರು.

ನಟ ಶಿವರಾಜಕುಮಾರ್‌, ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಸೂಡ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷ ರವಿಕುಮಾರ್, ಕಾಂಗ್ರೆಸ್ ಮುಖಂಡರಾದ ಎನ್.ರಮೇಶ್, ಮರಿಯಪ್ಪ, ಎಚ್.ಸಿ.ಯೋಗೀಶ್, ರೇಖಾ ರಂಗನಾಥ, ಎಚ್.ಪಿ.ಗಿರೀಶ್, ಶರತ್ ಮರಿಯಪ್ಪ, ಸೇರಿ ಕಾರ್ಯಕರ್ತರು ಇದ್ದರು.

ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರು ನೀಡಿದ ಕೊಡುಗೆ ಜನ ಮಾನಸದಲ್ಲಿ ಉಳಿದಿವೆ. ಅದೇ ರೀತಿ ಗೀತಕ್ಕ ಕೂಡ ಜನಪರ ಆಡಳಿತ ನಡೆಸಿ ಎಲ್ಲರೂ ಮೆಚ್ಚುವಂತಹ ನಾಯಕಿಯಾಗಿ ಹೊರಹೊಮ್ಮಲಿದ್ದಾರೆ. ಈ ಬಾರಿ ಒಂದು ಅವಕಾಶ ಕಲ್ಪಿಸಿಕೊಡಿ
ನಟ ದುನಿಯಾ ವಿಜಯ್
ಸೊರಬ ಕ್ಷೇತ್ರದ ಅಳಿಯ ನಾನು. ಹಿಂದಿನ ಚುನಾವಣೆಯಲ್ಲಿ ಸಚಿವ ಮಧುಬಂಗಾರಪ್ಪ ಅವರಿಗೆ ಮತ ನೀಡಿ ಆಶೀರ್ವದಿಸಿದ್ದೀರಿ. ಈ ಲೋಕಸಭಾ ಚುನಾವಣೆಯಲ್ಲಿ ಪತ್ನಿ ಗೀತಾಗೆ ಮತ ನೀಡಿ ಆಶೀರ್ವದಿಸಬೇಕು
ಶಿವರಾಜಕುಮಾರ ನಟ

ಮನೆ–ಮಗಳಿಗೆ ಆಶೀರ್ವದಿಸಿ:

ಗೀತಾ ಶಿವರಾಜಕುಮಾರ್ ‘ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಮತದಾನ ಪ್ರಕ್ರಿಯೆ ಇದೇ ಮೇ 7ರಂದು ನಡೆಯಲಿದೆ. ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನು ನಿಮ್ಮ ಮನೆ ಮಗಳಾಗಿ ಸ್ಪರ್ಧಿಸಿದ್ದೇನೆ’ ಎಂದು ಗೀತಾ ಶಿವರಾಜಕುಮಾರ್‌ ಹೇಳಿದರು. ‘ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲ ಜಾತಿ– ಧರ್ಮದವರ ಜೀವನ ಕ್ರಮ ಸುಧಾರಿಸಲು ಐದು ಜನಪರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಆದ್ದರಿಂದ ಸರ್ಕಾರದ ಈ ಋಣ ತೀರಿಸುವ ಹೊಣೆ ಎಲ್ಲರದ್ದಾಗಿದೆ. ವಿಪಕ್ಷಗಳು ಒಡ್ಡುವ ಹಣ– ಹೆಂಡದಂತಹ ಆಮಿಷಗಳಿಗೆ ಒಳಗಾಗದೆ ಪೊಳ್ಳು ಭರವಸೆಗಳಿಗೆ ಮರುಳಾಗದೆ ಕ್ಷೇತ್ರ ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾದರೆ ನನಗೆ ಮತ ನೀಡಿ ಆಶೀರ್ವದಿಸಿ’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT