ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ: ಸ್ಟಾಕ್ ಯಾರ್ಡ್‌ನಲ್ಲಿದ್ದ ಮರಳು ಮಾಯ

ಮಳಲೂರಿನ ಸಂಗ್ರಹಿಸಿದ್ದ ಮರಳು, ಆಡಳಿತದ ಕಣ್ಣಿಗೆ ಮಣ್ಣೆರಚಿದ ದಂಧೆಕೋರರು
Last Updated 5 ನವೆಂಬರ್ 2020, 3:55 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಸ್ಟಾಕ್ ಯಾರ್ಡ್‌ನಲ್ಲಿ ಮಳೆಗಾಲಕ್ಕೂ ಮುನ್ನ ಸಂಗ್ರಹಿಸಿಟ್ಟ ಮರಳು ಅಕ್ರಮವಾಗಿ ಸಾಗಣೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ತಾಲ್ಲೂಕಿನ ಮಾಲತಿ ನದಿ ಪಕ್ಕದ ಮಳಲೂರು ಗ್ರಾಮದ ಬ್ಲಾಕ್ -2 ಮರಳು ಕ್ವಾರಿಗೆ ಸೇರಿದ ಸ್ಟಾಕ್ ಯಾರ್ಡ್‌ನಲ್ಲಿ 200 ಲಾರಿ ಲೋಡ್‌ನಷ್ಟು ಮರಳು ಅಕ್ರಮ ಸಾಗಣೆಗೊಂಡ ಕುರಿತ ದೂರು ಈಗ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಕಚೇರಿ ಮೆಟ್ಟಿಲೇರಿದೆ.

ಸಾರ್ವಜನಿಕರಿಗೆ ಮರಳು ದೊರಕುವುದು ಕಷ್ಟವಿದ್ದ ಸಂದರ್ಭದಲ್ಲಿ ದಂಧೆಕೋರರು ಅಕ್ರಮವಾಗಿ ಮರಳು ಸಾಗಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಮಳೆಗಾಲ ಮುಗಿಯುವ ಮುನ್ನವೇ ನದಿ, ತೊರೆಗಳಲ್ಲಿ, ಹಳ್ಳ–ಕೊಳ್ಳಗಳಲ್ಲಿ ಸಂಗ್ರಹವಾದ ಮರಳನ್ನು ನದಿ ನೀರು ತಗ್ಗುತ್ತಿದ್ದಂತೆ ದಂಧೆಕೋರರು ಅಕ್ರಮ ಮರಳು ಸಾಗಾಟಕ್ಕೆ ಮುಂದಾಗಿದ್ದರು. ಸರ್ಕಾರದ ಲೆಕ್ಕಕ್ಕೆ ಸೇರಿದ ಸ್ಟಾಕ್ ಯಾರ್ಡ್‌ನಿಂದ ಸುಲಭವಾಗಿ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುವ ಮೂಲಕ ಆಡಳಿತಕ್ಕೆ ಸವಾಲೆಸೆದಿದ್ದಾರೆ. ಈ ಎಲ್ಲಾ ವಿದ್ಯಮಾನಗಳು ನಡೆಯುತ್ತಿದ್ದರೂ ಆಡಳಿತ ಮಾತ್ರ ಮೌನಕ್ಕೆ ಶರಣಾಗಿದೆ ಎಂದು ಸ್ಥಳೀಯರಾದ ಸಂತೋಷ್‌ ದೂರುತ್ತಾರೆ.

ಸ್ಟಾಕ್ ಯಾರ್ಡ್‌ನಿಂದ ಮರಳು ಸಾಗಣೆಗೆ ಪ್ರಮುಖ ಇಲಾಖೆಯ ಕೆಲ ಅಧಿಕಾರಿ ಸಿಬ್ಬಂದಿಯ ಬೆಂಬಲ ಕಾರಣವಾಗಿದೆ ಎಂಬ ಅನುಮಾನ ದಟ್ಟವಾಗಿದೆ. ಸರ್ಕಾರಕ್ಕೆ ಸೇರಿದ ಲಕ್ಷಾಂತರ ಬೆಲೆಯ ಮರಳು ಅಕ್ರಮವಾಗಿ ಸಾಗಣೆಯಾದ ಪ್ರಕರಣ ಸಾರ್ವಜನಿಕರನ್ನು ಬೆರಗುಗೊಳಿಸುವಂತೆ ಮಾಡಿದೆ.

ಪೊಲೀಸ್, ಅರಣ್ಯ, ಸಂಚಾರ ಪೊಲೀಸ್, ಕಂದಾಯ, ಆರ್‌ಡಿಪಿಆರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗಮನಕ್ಕೆ ಅಕ್ರಮ ಸಾಗಾಟ ನಡೆಯುತ್ತಿರುವುದು ಬಾರದೇ ಇರುವ ಸಂಗತಿ ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಅವಕಾಶ ಕಲ್ಪಿಸಿದೆ. ಸ್ಟಾಕ್ ಯಾರ್ಡ್‌ನಿಂದ 200 ಲಾರಿ ಲೋಡ್‌ನಷ್ಟು ಮರಳು ಅಕ್ರಮವಾಗಿ ಸಾಗಣೆಗೊಂಡಿರುವ ಕುರಿತು ಜಿಲ್ಲಾ ಮರಳು ಮೇಲುಸ್ತುವಾರಿ ನಿರ್ವಹಣಾ ಸಮಿತಿ ಅಧ್ಯಕ್ಷ, ಜಿಲ್ಲಾಧಿಕಾರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಬೇಕು ಎಂದು ಗ್ರಾಮದಅವಿನಾಶ ಆಗ್ರಹಿಸಿದರು.

ತುಂಗಾ ಹಾಗೂ ಮಾಲತಿ ನದಿ ತೀರ ತೀರ್ಥಹಳ್ಳಿ, ಕೊಪ್ಪ, ಶೃಂಗೇರಿಯ ಗಡಿಭಾಗದ ವ್ಯಾಪ್ತಿಯನ್ನು ಒಳಗೊಂಡಿದ್ದು, ಮಾಲತಿ ನದಿ ತೀರದ ಮಳಲೂರು ಗ್ರಾಮದಲ್ಲಿ ಅಕ್ರಮ ದಂಧೆ ಹೆಚ್ಚಾಗಿರುವ ಕುರಿತು ಸಾರ್ವಜನಿಕರ ಆಕ್ಷೇಪಣೆ, ದೂರು ಹೆಚ್ಚಿತ್ತು. ಮಳಲೂರು ಗ್ರಾಮ ಶಿವಮೊಗ್ಗ ಜಿಲ್ಲೆಗೆ ಸೇರಿದ್ದು, ಚಿಕ್ಕಮಗಳೂರು ಜಿಲ್ಲೆಯ ಗಡಿ ಭಾಗದಲ್ಲಿದೆ. ದಂಧೆಕೋರರು ಇಲ್ಲಿನ ಮರಳನ್ನು ಸುಲಭವಾಗಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಕೊಪ್ಪ, ಹರಿಹರಪುರ, ಕಮ್ಮರಡಿ ಮೂಲಕ ಸಾಗಿಸುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಗ್ರಾಮಸ್ಥರೊಬ್ಬರು ತಿಳಿಸಿದರು.

1914ರ ಪೂರ್ವದಲ್ಲಿ ಜಿಲ್ಲೆ ವ್ಯಾಪ್ತಿಯಲ್ಲಿ 58 ಮರಳು ಕ್ವಾರಿಗಳಿದ್ದು, ಕಸ್ತೂರಿರಂಗನ್ ವರದಿ ಕಾರಣ37ಕ್ಕೆ ಕುಸಿದಿದೆ. 24 ಕ್ವಾರಿಗಳಲ್ಲಿ ಮರಳು ವಿತರಣೆಗೆ ಅವಕಾಶ ನೀಡಲಾಗಿದೆ. 14 ಕ್ವಾರಿ ಆರಂಭವಾಗಿದೆ. ಬಹುತೇಕ ಕ್ವಾರಿಗಳ ಸ್ಟಾಕ್ ಯಾರ್ಡ್‌ನಲ್ಲಿ ಮಳೆಗಾಲಕ್ಕೂ ಮುನ್ನ ಮರಳು ಸಂಗ್ರಹವಾಗಿಲ್ಲ. ಮಳಲೂರು ಕ್ವಾರಿಯಲ್ಲಿ 400ಕ್ಕೂ ಹೆಚ್ಚಿನ ಲಾರಿ ಲೋಡ್ ಮರಳನ್ನು ಉದ್ದೇಶಪೂರ್ವಕವಾಗಿ ಸಂಗ್ರಹಿಸಲಾಗಿದೆ ಎಂಬುದು ಸ್ಥಳೀಯರ ಆರೋಪ.

ಪರವಾನಗಿ ಪಡೆದು ಮರಳು ಸಾಗಾಟಕ್ಕೆ ಅವಕಾಶ ನೀಡಲಾಗಿದೆ. ಮಳಲೂರು ಮರಳು ಕ್ವಾರಿಯ ಸ್ಟಾಕ್ ಯಾರ್ಡ್‌ನಲ್ಲಿ ಮರಳು ಸಾಗಣೆಯಾದ ದೂರಿನ ಕುರಿತು ತನಿಖೆ ನಡೆಸಿ, ಕ್ರಮ ತೆಗೆದುಕೊಳ್ಳಲಾಗುತ್ತದೆ.

–ಕೆ.ಬಿ. ಶಿವಕುಮಾರ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT