ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ದಸರಾಗೆ ವೈಭವದ ಚಾಲನೆ

ನವರಾತ್ರಿ ಮಹೋತ್ಸವ ಉದ್ಘಾಟಿಸಿದ ಯಕ್ಷಗಾನ ಕಲಾವಿದ ಶಿವಕುಮಾರ್ ಬೇಗಾರ್
Last Updated 7 ಅಕ್ಟೋಬರ್ 2021, 12:48 IST
ಅಕ್ಷರ ಗಾತ್ರ

ಶಿವಮೊಗ್ಗ: ಪಾಲಿಕೆ ಆವರಣದಲ್ಲಿ ಅಲಂಕೃತಗೊಂಡ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗುರುವಾರ ಶಿವಮೊಗ್ಗ ದಸರಾಕ್ಕೆ ಚಾಲನೆ ನೀಡಲಾಯಿತು.

ಪಾಲಿಕೆ ಆವರಣದಿಂದ ಕೋಟೆ ಮಾರಿಕಾಂಬ ದೇವಸ್ಥಾನದವರೆಗೆ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು. ಮಂಗಳವಾದ್ಯಗಳು, ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು.

ದೇವಿಯ ಮೂರ್ತಿಯನ್ನು ಕೋಟೆ ರಸ್ತೆಯ ಚಂಡಿಕಾ ದುರ್ಗಾ ಪರಮೇಶ್ವರಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಿ, ವಿಶೇಷ ಅಲಂಕಾರದೊಂದಿಗೆ ಪೂಜಿ ಸಲ್ಲಿಸಲಾಯಿತು. ಮೇಯರ್ ಸುನಿತಾ ಅಣ್ಣಪ್ಪ ಸೇರಿದಂತೆ ಪಾಲಿಕೆಯ ಉಪ ಮೇಯರ್, ದಸರಾ ಸಮಿತಿಯ ಸದಸ್ಯರು, ಪಾಲಿಕೆ ಸದಸ್ಯರು, ಆಯುಕ್ತರು, ಅಧಿಕಾರಿಗಳು, ಸಿಬ್ಬಂದಿ ಭಾಗಿಯಾಗಿದ್ದರು.

ಚಂಡಿಕಾ ದುರ್ಗಾ ಪರಮೇಶ್ವರಿ ದೇವಾಲಯದ ಆವರಣದಲ್ಲಿ ಚಾಮುಂಡೇಶ್ವರಿ ದೇವಿ, ರವೀಂದ್ರನಗರದ ಪ್ರಸನ್ನ ಬಲಮುರಿ ಗಣಪತಿ ದೇವಾಲಯ, ಬೊಮ್ಮನಕಟ್ಟೆಯ ಅನ್ನಪೂರ್ಣೇಶ್ವರಿ ದೇವಾಲಯ, ಕೋಟೆ ಮಾರಿಕಾಂಬ ದೇವಾಲಯ, ಅಂಬಾಭವಾನಿ ಜೈನಮಂದಿರ, ಶುಭಮಂಗಳ ಶನೈಶ್ವರ ದೇವಾಲಯ ಸೇರಿದಂತೆ ನಗರದ ಹಲವೆಡೆ ಶಕ್ತಿ ದೇವತೆಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಒಂಬತ್ತು ದಿನಗಳು ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಪರಿಸರ ದಸರಾ, ಯುವ ದಸರಾ, ಮಹಿಳಾ ದಸರಾ, ಸಾಂಸ್ಕೃತಿಕ ದಸರಾ, ಮಕ್ಕಳ ದಸರಾ, ಯೋಗ ದಸರಾ, ರೈತ ದಸರಾ, ರಂಗ ದಸರಾ, ಆಹಾರ ದಸರಾ, ದಸರಾ ಚಲನಚಿತ್ರೋತ್ಸವ ಹೀಗೆ ಹಲವು ಕಾರ್ಯಕ್ರಮಗಳ ಮೂಲಕ ಶಿವಮೊಗ್ಗ ದಸರಾ ಮಹೋತ್ಸವ ಆಚರಿಸಲಾಗುತ್ತದೆ. ನಗರದ ಹಲವು ಮನೆಗಳಲ್ಲಿ ದಸರಾ ಬೊಂಬೆ ಪ್ರದರ್ಶನ ಏರ್ಪಡಿಸಲಾಗಿದೆ.

ದಸರಾ ಉದ್ಘಾಟಿಸಿದ ಕಲಾವಿದ ಬೇಗಾರ್:

ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶಿವಮೊಗ್ಗ ದಸರಾ ಮಹೋತ್ಸಕ್ಕೆ ಯಕ್ಷಗಾನ ಕಲಾವಿದ ಶಿವಕುಮಾರ್ ಬೇಗಾರ್ ಚಾಲನೆ ನೀಡಿದರು.

ಪ್ರಕೃತಿಯಲ್ಲಿ ದೇವಿಯನ್ನು ಕಾಣುವುದು ಭಾರತೀಯ ಸಂಸ್ಕೃತಿ. ಹಿರಿಯರು ಹಬ್ಬಗಳ ಮೂಲಕ ನಮ್ಮ ಸಂಸ್ಕೃತಿ ಮುಂದುವರಿಯಲು ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು.

‘ನಾನೊಬ್ಬ ಯಕ್ಷಗಾನ ಕಲಾವಿದ. ಹತ್ತು ಸಾವಿರಕ್ಕೂ ಹೆಚ್ಚು ಪ್ರಸಂಗಗಳಲ್ಲಿ ಸ್ತ್ರೀ ಪಾತ್ರ ಮಾಡಿದ್ದೇನೆ. ಅದರಲ್ಲೂ 1,500 ಪಾತ್ರಗಳು ದುರ್ಗೆಯ ಪಾತ್ರ ಲಭಿಸಿವೆ. ಯಕ್ಷಗಾನ ಕಲೆಗೆ ಜಾಗತಿಕ ಗೌರವ ಸಿಕ್ಕಿದೆ. ಯಕ್ಷಗಾನ ಕಲಾವಿದನಿಗೆ ದಸರಾ ಮಹೋತ್ಸವದ ಉದ್ಘಾಟನೆಯ ಭಾಗ್ಯ ಕೊಡುತ್ತಿರುವುದು ಕಲೆಗೆ ಶಿವಮೊಗ್ಗದ ಜನರು ನೀಡಿದ ಗೌರವ’ ಎಂದರು.

‘ನಮಗೆ ಕಷ್ಟ ಬಂದಾಗ ಅಮ್ಮಾ ಎಂದು ಕರೆಯುತ್ತೇವೆ. ತ್ರಿಮೂರ್ತಿಗಳಿಗೂ ಕಷ್ಟ ಬಂದಾಗ ಅವರೂ ಅಮ್ಮಾ ಎಂದು ಹೇಳಿದಾಗ ದೇವಿಯ ಸ್ವರೂಪ ಹೊರಹೊಮ್ಮುತ್ತದೆ. ದೇವಿ ದಿವ್ಯ ತೇಜಸ್ವಿನಿ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅಡಗಿದ್ದಾಳೆ. ದುಷ್ಟರ ಸಂಹಾರಕ್ಕಾಗಿ ತ್ರಿಮೂರ್ತಿಗಳಿಗೂ ಅಸಾಧ್ಯವಾದಾಗ ನವದಿನಗಳಲ್ಲಿ ನವರೂಪ ತಳೆದು ದುಷ್ಟರ ಸಂಹಾರ ಮಾಡುತ್ತಾಳೆ ಎಂದು ವಿಶ್ಲೇಷಿಸಿದರು.

ವಿಜಯದಶಮಿಯ ದಿನ ಮಹಿಷಾಸುರ ಮರ್ದಿನಿಯಾಗಿ ದುಷ್ಟರ ಸಂಹಾರ ಮಾಡುತ್ತಾಳೆ. ಎಲ್ಲರನ್ನೂ ರಕ್ಷಿಸುತ್ತಾಳೆ. ಹಾಗಾಗಿ ಈ ಸಂಸ್ಕೃತಿ ಮತ್ತು ಪೌರಾಣಿಕ ಇತಿಹಾಸದ ಕುರಿತು ಮಕ್ಕಳಿಗೂ ತಿಳಿಯಬೇಕು. ಮುಂದಿನ ಸಂತತಿಗೆ ಸಂಬಂಧಗಳ ಪರಿಚಯವಾಗಬೇಕಾದರೆ ಈ ರೀತಿಯ ಹಬ್ಬಗಳನ್ನು ಹಮ್ಮಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT