ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ| ರಜೆಯ ಮೋಜಿಗೆ ಮುದ್ದಿನಕೊಪ್ಪ ಟ್ರೀ ಪಾರ್ಕ್

ಮಕ್ಕಳಿಗೆ ಬಿದಿರು, ಔಷಧ ವನ, ಆಟಿಕೆ ಸಾಮಗ್ರಿಗಳ ಗಮ್ಮತ್ತು
Last Updated 13 ಮಾರ್ಚ್ 2023, 5:17 IST
ಅಕ್ಷರ ಗಾತ್ರ

ಶಿವಮೊಗ್ಗ: ಸಕ್ರೆಬೈಲ್‌, ಗಾಜನೂರು ಜಲಾಶಯ, ಮಂಡಗದ್ದೆ, ತ್ಯಾವರೆಕೊಪ್ಪದ ಜೊತೆಗೆ ಶಿವಮೊಗ್ಗ ಹೊರವಲಯದ ಸಾಗರ ರಸ್ತೆಯಲ್ಲಿರುವ ಮುದ್ದಿನಕೊಪ್ಪ ಟ್ರೀ ಪಾರ್ಕ್ ವಿಹಾರ ತಾಣವಾಗಿ ಪರಿಸರಾಸಕ್ತರನ್ನು ಸೆಳೆಯುತ್ತಿದೆ.

ಅರಣ್ಯ ಇಲಾಖೆಯ ಈ ಟ್ರೀ ‍ಪಾರ್ಕ್ ಒಟ್ಟು 35 ಎಕರೆ ವಿಸ್ತಾರ ಹೊಂದಿದೆ. ಗಿಡ–ಮರಗಳ ಸಾಂಗತ್ಯದ ನಡುವೆ ದಿನ ಕಳೆಯಲು, ಮಕ್ಕಳಿಗೆ ಪರಿಸರದ ಪಾಠ ಹೇಳಲು ಪುಟ್ಟ ವನರಾಶಿ ಇಲ್ಲಿ ಕಾಣ ಸಿಗುತ್ತದೆ. ವಾರಾಂತ್ಯ ಇಲ್ಲವೇ ಹಬ್ಬ ಹರಿದಿನಗಳ ರಜೆಯಲ್ಲಿ ಇಲ್ಲಿ ಜನದಟ್ಟಣೆ ಇರುತ್ತದೆ.

ಶನಿವಾರ ಹಾಗೂ ಭಾನುವಾರ ಬಹಳಷ್ಟು ಜನರು ಮಕ್ಕಳನ್ನು ಇಲ್ಲಿಗೆ ಕರೆತಂದು ಆಟವಾಡಿಸಿ ಕರೆದೊಯ್ಯುತ್ತಾರೆ. ಬೇಸಿಗೆ, ದಸರೆ ರಜೆಯ ದಿನಗಳಲ್ಲೂ ಈ ಟ್ರೀ ಪಾರ್ಕ್‌ನಲ್ಲಿ ಮಕ್ಕಳ ಕಲರವ ಕಾಣಸಿಗುತ್ತದೆ ಎಂದು ವಾಚರ್ ರಾಮಪ್ಪ ತಿಳಿಸಿದರು.

ಟ್ರೀ ಪಾರ್ಕ್‌ನಲ್ಲಿ ಬಿದಿರು ವನ ಪ್ರಮುಖ ಆಕರ್ಷಣೆ. ಇಲ್ಲಿ ತಮಿಳುನಾಡು ಸೇರಿ ದೇಶದ ವಿವಿಧೆಡೆಯಿಂದ ತರಲಾದ 16 ವಿವಿಧ ತಳಿಯ ಬಿದಿರು ಈ ವನದಲ್ಲಿ ಕಾಣ ಸಿಗುತ್ತದೆ. ಬುದ್ದಾಸ್ ಸ್ಮೈಲ್, ಹ್ಯಾಸ್ಪರ್, ವಲ್ನೈರ್ ಗ್ರೀನ್, ಯೆಲ್ಲೋ, ಬಲ್ಕೊವಾ, ಮಲ್ಟಿಪ್ಲೆಕ್ಸ್ ಯೆಲ್ಲೋ ಸೇರಿ ವೈವಿಧ್ಯಮಯ ಬಿದಿರು ಪಾರ್ಕ್‌ಗೆ ಬರುವವರನ್ನು ಸ್ವಾಗತಿಸುತ್ತಿವೆ. ಮಾವು, ಹೊನ್ನೆ, ತೇಗ, ನೇರಳೆ ಸೇರಿ ಹತ್ತಾರು ಕಾಡು ಜಾತಿ ಮರಗಳು, ಔಷಧೀಯ ವನ ಇಲ್ಲಿದೆ. ಮಕ್ಕಳಿಗೆ ಪರಿಸರ ಪಾಠ ಹೇಳಲು ಇದು ಹೇಳಿ ಮಾಡಿಸಿದ ತಾಣ.

ಮಕ್ಕಳನ್ನು ಆಕರ್ಷಿಸಲು ಕಾಡು ಪ್ರಾಣಿಗಳ ಪ್ರತಿಕೃತಿಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಟೈರ್, ರೋಪ್, ಬಿದಿರಿನ ಜಾಲರಿ ಬಳಸಿ ಸಿದ್ಧಪಡಿಸಿದ ಮಿಲಿಟರಿ ಗೇಮ್ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಜಾರು ಬಂಡಿ, ಉಯ್ಯಾಲೆ ಕೂಡ ಮಕ್ಕಳ ಮನ ಸೆಳೆಯುತ್ತವೆ.

ಟ್ರೀ ಪಾರ್ಕ್‌ಗೆ ಉಚಿತ ಪ್ರವೇಶವಿದೆ. ಶಾಲಾ ಮಕ್ಕಳಿಗೂ ಕಾನು, ಕಾಡು ಪ್ರಾಣಿಗಳ ಕುರಿತು ನಿಸರ್ಗದ ಪಾಠ ಹೇಳಲು ಇದು ವೇದಿಕೆ ಒದಗಿಸಲಿದೆ. ಬೇಸಿಗೆಯ ಬಿಸಿಲ ಬೇಗೆ ಕಳೆಯಲು ಸಿಕ್ಕಾಪಟ್ಟೆ ಗಾಳಿ ಬೀಸುವ ಈ ಟ್ರೀ ಪಾರ್ಕ್ ನೆರವಾಗಲಿದೆ.

ಜೋಗ್‌ಫಾಲ್ಸ್‌ಗೆ ಹೋಗುವವರು ಇಲ್ಲಿ ವಿಶ್ರಾಂತಿ ಪಡೆದು ಹೋಗಬಹುದು. ಜೊತೆಗೆ ತ್ಯಾವರೆಕೊಪ್ಪ ಹುಲಿ–ಸಿಂಹ ಧಾಮಕ್ಕೆ ಭೇಟಿ ಕೂಡುವವರು ಅದಕ್ಕೆ ಕೂಗಳತೆ ದೂರದಲ್ಲಿರುವ ಮುದ್ದಿನಕೊಪ್ಪ ಟ್ರೀ ಪಾರ್ಕ್‌ಗೂ ಬರಬಹುದಾಗಿದೆ. ಇಲ್ಲಿನ ತಣ್ಣನೆಯ ಆಹ್ಲಾದಕರ ವಾತಾವರಣ ಎಲ್ಲರನ್ನೂ ಸೆಳೆಯುತ್ತದೆ ಎಂದು ವಾಚರ್ ರಾಮಪ್ಪ ವಿವರಿಸಿದರು.

ಅಂದ ಹಾಗೆ ಮಕ್ಕಳ ಹೊರತಾಗಿ ದೊಡ್ಡವರು ಇಲ್ಲಿಗೆ ಬಂದರೆ ಅವರು ಆಧಾರ್ ಕಾರ್ಡ್ ತರುವುದು ಕಡ್ಡಾಯ.

ಇನ್ನಷ್ಟು ಸವಲತ್ತು ಬೇಕಿದೆ..

ಶಂಕರ ಅರಣ್ಯ ವಲಯದ ವ್ಯಾಪ್ತಿಯ ಮುದ್ದಿನಕೊಪ್ಪ ಟ್ರೀ ಪಾರ್ಕ್‌ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಿದೆ. ಅಲ್ಲಿಯೇ ಕಾಫಿ–ಟೀ, ಲಘು ಉಪಾಹಾರದ ವ್ಯವಸ್ಥೆ ಮಾಡಿದಲ್ಲಿ ಮಕ್ಕಳೊಂದಿಗೆ ದಿನ ಕಳೆಯಲು ನೆರವಾಗಲಿದೆ. ಆರಣ್ಯ ಇಲಾಖೆ ಆ ನಿಟ್ಟಿನಲ್ಲಿ ಗಮನಹರಿಸಲಿ ಎಂದು ಶಿವಮೊಗ್ಗದ ಶಿಕ್ಷಕ ಪ್ರಶಾಂತ್‌ ರಾಜ್ ತಿಳಿಸಿದರು.

ಟ್ರೀ ಪಾರ್ಕ್‌ನಲ್ಲಿರುವ ಮಕ್ಕಳ ಆಟಿಕೆಗಳು ಮುರಿದು ಹೋಗಿವೆ. ಅವುಗಳನ್ನು ದುರಸ್ತಿಪಡಿಸಲಿ ಎಂದು ಪ್ರಶಾಂತ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT