ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ: ಆಕರ್ಷಿಸುತ್ತಿದೆ ತಿರುಗುವ ಗಾಲಿಯ ಪುಟ್ಟ ರಥ

ಸ್ಥಳೀಯ ಲಭ್ಯ ಸಾಮಗ್ರಿ ಬಳಸಿಕೊಂಡು ಸುಬ್ರಹ್ಮಣ್ಯ ಹೆಬ್ಬಾರ್ ವಿಶೇಷ ಪ್ರಯೋಗ
Last Updated 4 ನವೆಂಬರ್ 2022, 8:15 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ವರ್ಷಕ್ಕೊಮ್ಮೆ ಊರಿನ ಜಾತ್ರೆಯಲ್ಲಿ ಕಾಣಸಿಗುವ ಬೃಹತ್‌ ಗಾತ್ರದ ರಥಗಳು ಈಗ ತಾಲ್ಲೂಕಿನ ಆಗುಂಬೆಯಲ್ಲಿ ಪುಟ್ಟ ಗಾತ್ರದಲ್ಲಿ ಲಭ್ಯ ಇವೆ. ಮಕ್ಕಳ ಆಟಿಕೆಯ ಜೊತೆಗೆ ದೇವರ ಗುಡಿಗಳಲ್ಲೂ ಬಳಕೆಯಾಗುವ ಪುಟ್ಟ ರಥಗಳು ವಿದೇಶಿಗರ ಗಮನ ಸೆಳೆಯುತ್ತಿವೆ.

ವಿದ್ಯಾಭ್ಯಾಸದ ಸಮಯದಲ್ಲಿ ಕಲಾ ಶಿಕ್ಷಕರು ಕಲಿಸಿಕೊಡುತ್ತಿದ್ದ ಪುಟ್ಟ ಕಲಾಕೃತಿಗಳ ತಯಾರಿಕೆ ಜೀವನ ರೂಪಿಸುತ್ತದೆ ಎಂಬ ಕಲ್ಪನೆಯೇ ಇಲ್ಲದ ಆಗುಂಬೆಯ ಸುಬ್ರಹ್ಮಣ್ಯ ಹೆಬ್ಬಾರ್, ತಮ್ಮ ಬದುಕಿಗಾಗಿ 30 ವರ್ಷಗಳ ಹಿಂದೆಯೇ ಅಂಗಡಿಯೊಂದನ್ನು ತೆರೆದಿದ್ದರು. ಆಗುಂಬೆಯ ಮಳೆ, ಸೂರ್ಯಾಸ್ತಮಾನ ವೀಕ್ಷಣೆಗೆ ಬರುತ್ತಿದ್ದ ಪ್ರವಾಸಿಗರನ್ನು ಸೆಳೆಯಲು ಸುತ್ತಮುತ್ತಲು ಸಿಗುವ ಬಿದಿರು, ಬೆತ್ತಗಳಿಂದ ಬುಟ್ಟಿ, ಎತ್ತಿನಗಾಡಿ, ಜೋಕಾಲಿ ಮುಂತಾದವುಗಳ ತಯಾರಿಕೆಯನ್ನು ಆರಂಭಿಸಿದರು.

ಅವರು ತಯಾರಿಸಿದ ಆಕರ್ಷಣೀಯ ವಸ್ತುಗಳಿಗೆ ಅಲ್ಪ ಸಮಯದಲ್ಲೇ ಬೇಡಿಕೆ ಹಚ್ಚಾಯಿತು. ಇನ್ನೇನು ಅದೃಷ್ಟದ ದಾರಿ ತಿರುಗುತ್ತಿದೆ ಎನ್ನುತ್ತಿರುವಾಗಲೇ ಸ್ಥಳೀಯರಿಂದ ವಿರೋಧ ವ್ಯಕ್ತವಾಯಿತು. ಅಲ್ಲದೇ ಅರಣ್ಯ ಕಾಯ್ದೆಗಳು ಈ ಉದ್ಯಮಕ್ಕೆ ಸಂಕಷ್ಟ ತಂದೊಡ್ಡಿತು. ಜತೆಗೆ ಬಿದಿರಿಗೆ ಕಟ್ಟೆ ಬಂದ ನಂತರ ನೈಸರ್ಗಿಕವಾಗಿ ಲಭಿಸುತ್ತಿದ್ದ ಬಿದಿರು ಪ್ರಮಾಣ ಕಡಿಮೆಯಾಗಿ ವಸ್ತುಗಳ ತಯಾರಿಕೆ ಅನಿವಾರ್ಯವಾಗಿ ಸ್ಥಗಿತಗೊಳಿಸಬೇಕಾಯಿತು.

ಎದೆಗುಂದದ ಸುಬ್ರಹ್ಮಣ್ಯ ಸ್ಥಳೀಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಲೇವುಡ್‌, ಫೈಬರ್‌, ಮರಗಳನ್ನು ಬಳಕೆ ಮಾಡಿಕೊಂಡು 10 ವರ್ಷಗಳ ಹಿಂದೆ ರಥ ತಯಾರಿಸಲು ಆರಂಭಿಸಿದರು. ಪರ್ಯಾಯ ಗುಡಿ ಕೈಗಾರಿಕೆಯಾಗಿ ರೂಪುಗೊಂಡ ಪುಟ್ಟ ರಥಗಳಿಗೆ ಈಗ ವಿದೇಶಗಳಿಂದಲೂ ಬೇಡಿಕೆ ಹೆಚ್ಚಿದೆ. ಅಮೆರಿಕ, ಆಸ್ಟ್ರೇಲಿಯ, ದೆಹಲಿ, ಉಡುಪಿ,ಕೇರಳದ ತಿರುವನಂತಪುರಂ, ಧರ್ಮಸ್ಥಳ, ಸಾಲಿಗ್ರಾಮದ ಡಿವೈನ್‌ ಪಾರ್ಕ್‌, ಬೈಲಹೊಂಗಲ ಸೇರಿ ಪ್ರವಾಸಿ ಮತ್ತು ದೇವಸ್ಥಾನದ ಆವರಣಗಳಲ್ಲಿ ಗ್ಲಾಸ್‌ ಹೌಸ್‌ ಮೂಲಕ ವಿಶೇಷ ಪ್ರದರ್ಶನಕ್ಕೆ ಈ ರಥಗಳನ್ನು ಬಳಸಿಕೊಳ್ಳಲಾಗುತ್ತಿದೆ.

ತಿಂಗಳಿಗೆ ಸುಬ್ರಹ್ಮಣ್ಯ ಅವರು 4 ರಥಗಳನ್ನು ಸಲೀಸಾಗಿ ಮಾಡಬಲ್ಲರು. ಈಚೆಗೆ ಪತ್ನಿ ಸುಜಾತಾ ಎಸ್‌. ಹೆಬ್ಬಾರ್‌, ಪುತ್ರ ಅನಂತಕುಮಾರ್‌ ಹೆಬ್ಬಾರ್‌ ಕೂಡ ಅವರೊಂದಿಗೆ ಕೈಜೋಡಿಸಿದ್ದರಿಂದ ತಿಂಗಳಿಗೆ 10ರಿಂದ 15 ರಥಗಳನ್ನು ಪೂರೈಕೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

***

ಬೇಡಿಕೆಯಷ್ಟು ಪೂರೈಕೆಯ ಕೊರತೆ

‘ಮೂರು ಬಗೆಯ ರಥಗಳು ತಯಾರಾಗುತ್ತಿದ್ದು, ಒಂದುಕಾಲು ಅಡಿ, 2–3 ಅಡಿಯ ರಥ ಮತ್ತು ವಿದ್ಯುತ್‌ ಅಲಂಕೃತ ರಥ ತಯಾರಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ತಿರುಗುವ ಗಾಲಿಯ ರಥಕ್ಕೆ ಬೇಡಿಕೆ ಹೆಚ್ಚಿದ್ದರೂ ಪೂರೈಕೆಯ ಕೊರತೆ ಉಂಟಾಗುತ್ತಿದೆ. ಗುಡಿಕೈಗಾರಿಕೆ ವಿಸ್ತರಿಸಿದರೆ ಸ್ಥಳೀಯರಿಗೆ ಒಂದಿಷ್ಟು ಉದ್ಯೋಗ ಕಲ್ಪಿಸಬಹುದು’ ಎನ್ನುತ್ತಾರೆ ಕಲಾವಿದ ಸುಬ್ರಮ್ಮಣ್ಯ ಹೆಬ್ಬಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT