ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮಂತ ಕಾರ್ಯಕ್ಕೆ ಸಾಕ್ಷಿಯಾದ ತಹಶೀಲ್ದಾರ್ ಕಚೇರಿ

ಬಿ.ಎನ್. ಗಿರೀಶ್ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ
Last Updated 12 ಮೇ 2019, 13:30 IST
ಅಕ್ಷರ ಗಾತ್ರ

ಶಿವಮೊಗ್ಗ: ಸಾಮಾನ್ಯವಾಗಿ ಮನೆ, ದೇವಸ್ಥಾನಇಲ್ಲವೇ ಮಂಟಪಗಳಲ್ಲಿ ಸೀಮಂತ ಕಾರ್ಯ ನಡೆಯುವುದು ವಾಡಿಕೆ. ಆದರೆ ಸರ್ಕಾರಿ ಕಚೇರಿಯಲ್ಲಿ ಸೀಮಂತ ಕಾರ್ಯ ನಡೆದ ಅಪರೂಪದ ಘಟನೆಗೆ ಶಿವಮೊಗ್ಗ ತಹಶೀಲ್ದಾರ್ ಕಚೇರಿ ಶನಿವಾರ ಸಾಕ್ಷಿಯಾಯಿತು.

ಹೌದು,ಕಳೆದ ವಾರವಷ್ಟೇ ಮಾರುವೇಷದಲ್ಲಿ ಹೋಗಿ ಅಕ್ರಮ ಕಲ್ಲುಗಣಿಗಾರಿಕೆ ನಡೆಸುವವರಿಗೆ ನಡುಕ ಹುಟ್ಟಿಸಿದ್ದ ಶಿವಮೊಗ್ಗ ತಹಶೀಲ್ದಾರ್ ಬಿ.ಎನ್. ಗಿರೀಶ್ ಇದೀಗ ತಮ್ಮ ಕಚೇರಿ ಸಿಬ್ಬಂದಿಯೊಬ್ಬರಿಗೆ ಸೀಮಂತ ಕಾರ್ಯ ಏರ್ಪಡಿಸುವ ಮೂಲಕ ಮಾನವೀಯ ಗುಣ ಪ್ರದರ್ಶಿಸಿದ್ದಾರೆ.

ಮೂರು ತಿಂಗಳ ಹಿಂದೆಯಷ್ಟೇ ಶಿವಮೊಗ್ಗ ತಹಶೀಲ್ದಾರ್‌ ಆಗಿ ನೇಮಕಗೊಂಡ ಗಿರೀಶ್ ಇದೀಗ ತಮ್ಮ ವಿನೂತನ ಪ್ರಯೋಗಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕೇವಲ ಅಲ್ವಾವಧಿಯಲ್ಲಿಯೇ ತಮ್ಮ ಸಿಬ್ಬಂದಿ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ತಹಶೀಲ್ದಾರ್ ಕಚೇರಿಯಲ್ಲಿ ಇದೀಗ ಮನೆಯ ವಾತಾವರಣ ನಿರ್ಮಾಣವಾಗಿದ್ದು, ಸಿಬ್ಬಂದಿ ಕೂಡ ಖುಷಿಯಿಂದ ಕೆಲಸ ನಿರ್ವಹಿಸಲು ಉತ್ಸುಕರಾಗಿದ್ದಾರೆ.

ಏನಿದು ಘಟನೆ:

ತಹಶೀಲ್ದಾರ್ ಕಚೇರಿಯ ಭೂಮಿ ವಿಭಾಗದ ಗ್ರಾಮ ಲೆಕ್ಕಾಧಿಕಾರಿ ಶ್ವೇತಾ ಅವರು ಗರ್ಭಿಣಿಯಾಗಿದ್ದು, ನಿಯಮದಂತೆ ಆರು ತಿಂಗಳು ರಜೆ ಪಡೆದಿದ್ದರು. ಶುಕ್ರವಾರ ಅವರ ರಜೆಯ ಪೂರ್ವದ ಕೊನೆಯ ದಿನವಾಗಿತ್ತು. ಈ ಬಗ್ಗೆ ಮಾಹಿತಿ ಹೊಂದಿದ್ದ ತಹಶೀಲ್ದಾರ್ ಶ್ವೇತಾ ಹಾಗೂ ಸಿಬ್ಬಂದಿಯ ಗಮನಕ್ಕೆ ಬಾರದಂತೆ ಕೊನೆಯ ದಿನ ಸೀಮಂತ ಕಾರ್ಯಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು.

ಎಲ್ಲರಿಗೂ ಅಚ್ಚರಿ:

ಅಂದು ಸಂಜೆ ಕಚೇರಿಯ ಎಲ್ಲಾ ಸಿಬ್ಬಂದಿ ಕೆಲಸ ಮುಗಿಸಿಕೊಂಡು ಇನ್ನೇನು ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ತಹಶೀಲ್ದಾರ್ ಗಿರೀಶ್ ಮೀಟಿಂಗ್‌ ಹಾಲ್‌ನಲ್ಲಿ ಸಭೆ ಸೇರುವಂತೆ ಸೂಚಿಸಿದರು. ಇದೇನಪ್ಪ ಮನೆಗೆ ಹೋಗುವ ಸಮಯದಲ್ಲಿ ಮೀಟಿಂಗ್‌ ತೆಗೆದುಕೊಂಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಲೇ ಹಾಲ್‌ನತ್ತ ಹೆಜ್ಜೆಯಿಟ್ಟ ಸಿಬ್ಬಂದಿಗೆ ಅಚ್ಚರಿ ಕಾದಿತ್ತು. ಕಚೇರಿಯಲ್ಲಿ ಹೂವು, ಹಣ್ಣು, ತಾಂಬೂಲ, ಸೀರೆ, ಅರಿಶಿನ, ಕುಂಕುಮ ಮತ್ತಿತರೇ ವಸ್ತುಗಳನ್ನು ನೋಡಿ ಆಶ್ಚರ್ಯ ಚಕಿತರಾದರು. ಕೊನೆಗೆ ಶ್ವೇತಾ ಅವರ ಸೀಮಂತ ಕಾರ್ಯಕ್ಕೆ ತಹಶೀಲ್ದಾರ್ ಏರ್ಪಡಿಸಿರುವ ಕಾರ್ಯ ಎಂದು ತಿಳಿದು ಖುಷಿಪಟ್ಟರು. ಇದನ್ನು ನಿರೀಕ್ಷಿಸದ ಶ್ವೇತಾ ಕೂಡ ಒಂದು ಕ್ಷಣ ಮೌನಕ್ಕೆ ಶರಣಾದರು.

ಸಂಪ್ರದಾಯದಂತೆ ಸೀಮಂತ:

ನಂತರ ಶ್ವೇತಾ ಅವರನ್ನು ಕುರ್ಚಿಯಲ್ಲಿ ಕೂರಿಸಿ ಅಲ್ಲಿದ್ದ ಮಹಿಳಾ ಸಿಬ್ಬಂದಿ ಆರತಿ ಎತ್ತಿ ಸಂಪ್ರದಾಯದಂತೆ ಮಡಿಲು ತುಂಬಿ ಹಾರೈಸಿದರು. ತಹಶೀಲ್ದಾರ್‌ ಸೇರಿ ಇತರೆ ಸಿಬ್ಬಂದಿ ಕೂಡ ಹಾರೈಸಿದರು. ತಮ್ಮ ಕಚೇರಿ ಸಿಬ್ಬಂದಿ ಒಂದೆ ಮನೆಯ ಕುಟುಂಬದ ಸದಸ್ಯರಂತೆ ತಮ್ಮನ್ನು ನಡೆಸಿಕೊಂಡ ರೀತಿಯನ್ನು ನೋಡಿದ ಶ್ವೇತಾ ಅವರ ಕಣ್ಣಾಲಿಗಳು ಆನಂದಬಾಷ್ಪದಿಂದ ತೇವಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT