ಬುಧವಾರ, ಜೂನ್ 29, 2022
25 °C
ಹೊಸನಗರ ತಾಲ್ಲೂಕಿನ ವಿಜಾಪುರ ಗ್ರಾಮ: ಕೃಷಿ ಜತೆ ಕುರಿ ಸಾಕಾಣಿಕೆಗೂ ಸೈ

ಕಂಪನಿ ಕೆಲಸ ಬಿಟ್ಟು ಯಶ ಕಂಡ ತೌಸಿಫ್

ರವಿ ನಾಗರಕೊಡಿಗೆ Updated:

ಅಕ್ಷರ ಗಾತ್ರ : | |

Prajavani

ಹೊಸನಗರ: ಕಂಪನಿಯ ಲಕ್ಷಾಂತರ ರೂಪಾಯಿ ಸಂಬಳವನ್ನು ಬಿಟ್ಟು ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಯಶಸ್ಸು ಸಾಧಿಸಿದ್ದಾರೆ ಹೊಸನಗರ ತಾಲ್ಲೂಕಿನ ವಿಜಾಪುರ ಗ್ರಾಮದ ತೌಸಿಫ್.

ತಮ್ಮ ಮನೆ ಮತ್ತು ಮಾವನ ಮನೆಯಿಂದ ಲಭ್ಯವಾದ ಭೂಮಿಯಲ್ಲಿ ಕೃಷಿಯಲ್ಲಿ ತೊಡಗಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ತಮ್ಮ ಮಾವನವರ ಮೂರು ಎಕರೆ ಭೂಮಿಯಲ್ಲಿ ಮಾವ ಮತ್ತು ಮೈದುನನ ಜತೆಗೂಡಿ ಅಡಿಕೆ, ತೆಂಗು ಬೆಳೆಸಿದ್ದಾರೆ. ತಮ್ಮ ಮನೆಯಿಂದ ಬಂದ ಜಮೀನಿನಲ್ಲೂ ಅಡಿಕೆ ತೋಟ ಮಾಡಿದ್ದಾರೆ.

ಉದ್ಯೋಗ ಅರಸಿ ಗಲ್ಫ್ ರಾಷ್ಟ್ರಕ್ಕೆ ಹೋಗಿದ್ದ ತೌಸಿಫ್‌ ಮೊದಲಿಗೆ ವಿಜಾಪುರದ ಮಾವನ ಮನೆಯಲ್ಲಿ ಮೈದುನನ ಜತೆಗೂಡಿ ಅಡಿಕೆ, ಬಾಳೆ ಬೆಳೆಯಲು ಆರಂಭಿಸಿದರು. ಇದ್ದ ಮೂರು–ನಾಲ್ಕು ಎಕರೆ ಜಾಗದಲ್ಲಿ ಅಡಿಕೆ ಸಸಿ ಕೂರಿಸಿ ಅವುಗಳ ಆರೈಕೆ ಮಾಡುತ್ತಾ ಬಂದರು. ಉತ್ತಮ ಆರೈಕೆಯಿಂದ ಬೆಳೆದ ಗಿಡಗಳು ಕೆಲವೇ ವರ್ಷಕ್ಕೆ ಫಸಲು ನೀಡತೊಡಗಿದವು. ಕೃಷಿಗೆ ಹೂಡಿದ ಬಂಡವಾಳ ವ್ಯರ್ಥವಾಗದೆ ವರ್ಷ ವರ್ಷವೂ ಉತ್ತಮ ಬೆಳೆ ಬಂದಿದ್ದರಿಂದ ಕೃಷಿ ಕೆಲಸದಲ್ಲಿನ ಅವರ ಆಸಕ್ತಿ ಇಮ್ಮಡಿಗೊಂಡಿತು. ಖಾಲಿ ಇದ್ದ ಜಾಗದಲ್ಲಿ ತೆಂಗು ಹಾಕಿದರು. ಜತೆಗೆ ಬಾಳೆ, ಮೆಕ್ಕೆಜೋಳ ಬೆಳೆದರು. ಅದರಲ್ಲೂ ಉತ್ತಮ ಫಸಲು ಬಂದಿತು. ಮತ್ತೆ ಹುಲ್ಲಿನ ಬೆಳೆಗಳಾದ ಸೂಡನ್ ಗ್ರಾಸ್, ಮೈಫಿರಿಯನ್ ಗ್ರಾಸ್, ಸುಬಾಬುಲ್ಲ್ ಬೆಳೆದು ಅದರಲ್ಲೂ ಯಶ ಸಾಧಿಸಿದರು.

ಅಲ್ಲದೇ ತಮ್ಮ ಸ್ವಂತ ಮನೆಗೆ ಸೇರಿದ ಸಿಂಗಾಪುರ ಜಮೀನಿನಲ್ಲೂ ಅಡಿಕೆ, ತೆಂಗು ಬೆಳೆದು ಅಲ್ಲೂ ಯಶ ಕಂಡಿದ್ದಾರೆ. ಹಾಳು ಬಿದ್ದ ಜಮೀನಿನಲ್ಲಿ ಇಂದು 1200ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಸೂಕ್ತ ವಿಧಾನವನ್ನು ಅನುಸರಿಸಿ ಕೃಷಿ ಮಾಡಿದರೆ ಯೋಗ್ಯ ಫಸಲು ತೆಗೆಯಬಹುದು ಎಂಬುದನ್ನು ಮನಗಂಡ ತೌಸಿಫ್ ಕೃಷಿಯನ್ನೇ ನಿತ್ಯದ ಕಾಯಕ ಮಾಡಿಕೊಂಡು ಕೈ ತುಂಬಾ ಆದಾಯ ಗಳಿಸುತ್ತಿದ್ದಾರೆ. ₹ 1 ಲಕ್ಷ  ಸಂಬಳವಿದ್ದ ಕೆಲಸ ಕೊಡದ ನೆಮ್ಮದಿ ಕೃಷಿ ಕೆಲಸ ಕೊಟ್ಟಿದೆ ಎನ್ನುತ್ತಾರೆ ತೌಸಿಫ್‌.

‘ನನಗೆ ಮೊದಲಿನಿಂದಲೂ ಕೃಷಿ ಬಗ್ಗೆ ಆಸಕ್ತಿ ಇತ್ತು. ವಿದ್ಯಾಬ್ಯಾಸ ಮುಗಿಸಿ ಕೆಲಸ ಅರಸಿ ದೂರದ ಗಲ್ಫ್ ರಾಷ್ಟ್ರಕ್ಕೆ ಹೋದೆ. ಅಲ್ಲಿ ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಕ್ಕಿತು. ತಿಂಗಳಿಗೆ ₹ 1 ಲಕ್ಷ ಸಂಬಳ ಬರುತ್ತಿತ್ತು. ಆದರೆ, ನನಗೇಕೋ ಬೇಸರ ಕಾಡುತ್ತಿತ್ತು. ಹುಟ್ಟಿದ ಊರು, ಮನೆ ಬಿಟ್ಟು ದೂರದಲ್ಲಿ ದೇಶದಲ್ಲೇಕೆ ಬಾಳಬೇಕು. ನನ್ನ ಊರಿಗೆ ನನ್ನ ಕೊಡುಗೆ ಏನು ಎಂಬ ಪ್ರಶ್ನೆಗಳು ಬರಲಾರಂಭಿಸಿದವು. ಕೃಷಿ ನನ್ನನ್ನು ಕೈ ಬೀಸಿ ಕರೆಯಿತು. ಗಟ್ಟಿ ಮನಸ್ಸು ಮಾಡಿ ಊರಿಗೆ ಬಂದೆ. ಬಂದವನೇ ಕೃಷಿಯಲ್ಲಿ ತೊಡಗಿಕೊಂಡೆ. ಇಂದು ನೆಮ್ಮದಿ ಕಂಡಿದ್ದೇನೆ. ನನ್ನ ಎಲ್ಲ ಕೆಲಸಗಳಿಗೆ ಮಾವ ಮತ್ತು ಮೈದುನ ಅವರ ಸಂಪೂರ್ಣ ಬೆಂಬಲ ಇದೆ’ ಎಂದು ನೆನೆಯುತ್ತಾರೆ ಅವರು.

ಕುರಿ ಸಾಕಾಣಿಕೆಯಲ್ಲೂ ಯಶಸ್ಸು
ತೌಸಿಫ್ ಅವರು ಕೃಷಿ ಜತೆಗೆ ಕುರಿ ಸಾಕಾಣಿಕೆಯಲ್ಲೂ ತೊಡಗಿದ್ದಾರೆ. ನಾಲ್ಕೈದು ಕುರಿಗಳ ಸಾಕಾಣಿಕೆಯಿಂದ ಆರಂಭವಾದ ವೃತ್ತಿಯಲ್ಲಿ ಇಂದು 250 ಕುರಿಗಳನ್ನು ಕಾಣಬಹುದಾಗಿದೆ. ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಸ್ಥಳೀಯ ತಳಿಗಳಲ್ಲದೇ ಹೊರ ರಾಜ್ಯದ ತಳಿಗಳನ್ನೂ ತಂದು ಸಾಕುತ್ತಿದ್ದಾರೆ.

‘ಮಲೆನಾಡಿನಲ್ಲಿ ಕುರಿ ಗೊಬ್ಬರಕ್ಕೆ ಬೇಡಿಕೆ ಇದೆ. ಬಯಲುಸೀಮೆಯಿಂದ ಭಾರಿ ಪ್ರಮಾಣದಲ್ಲಿ ಗೊಬ್ಬರ ಬರುತ್ತಿದೆ. ಅಲ್ಲಿನ ಗೊಬ್ಬರ ಕಳಪೆ ಎಂಬ ದೂರುಗಳಿವೆ. ನಮ್ಮ ಕುರಿಗಳು ಇಲ್ಲಿನ ಸೊಪ್ಪು ಸದೆ ತಿಂದು ಉತ್ಕೃಷ್ಟ ದರ್ಜೆಯ ಗೊಬ್ಬರ ನೀಡುವುದರಿಂದ ನಮ್ಮ ಗೊಬ್ಬರಕ್ಕೆ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ’ ಎನ್ನುತ್ತಾರೆ ತೌಸಿಫ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು