ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ | ರಸ್ತೆ ಬದಿಯಲ್ಲೇ ತರಕಾರಿ, ಹಣ್ಣಿನ ಮಾರಾಟ; ಟ್ರಾಫಿಕ್ ಕಿರಿಕಿರಿ

Published 9 ಮೇ 2024, 8:16 IST
Last Updated 9 ಮೇ 2024, 8:16 IST
ಅಕ್ಷರ ಗಾತ್ರ

ಸಾಗರ: ನಗರದ ಹೃದಯ ಭಾಗದಲ್ಲಿರುವ ಚಾಮರಾಜಪೇಟೆ ಬಡಾವಣೆಯಲ್ಲಿ ಗಾಂಧಿ ಮಂದಿರದ ಎದುರಿರುವ ರಸ್ತೆಯ ಬದಿಯಲ್ಲಿ ತರಕಾರಿ ಹಾಗೂ ಹಣ್ಣಿನ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದು ಸಂಚಾರ ದಟ್ಟಣೆ ಮತ್ತು ಕಿರಿಕಿರಿಗೆ ಕಾರಣವಾಗಿದೆ.

ಈ ರಸ್ತೆಯಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ದೂರು ಕೇಳಿಬರುತ್ತಿದೆ.

ಆರಂಭದಲ್ಲಿ ಸಾಗರ ನಗರಕ್ಕೆ ಹೊಂದಿಕೊಂಡಿರುವ, ಹತ್ತಿರದ ಗ್ರಾಮಗಳಲ್ಲಿ ತಾಜಾ ತರಕಾರಿ ಬೆಳೆಯುತ್ತಿದ್ದ ರೈತರು ಸ್ವತಃ ಇಲ್ಲಿಗೆ ಬಂದು ತರಕಾರಿ ಮಾರಲು ಅವಕಾಶ ಮಾಡಿಕೊಡಲಾಗಿತ್ತು. ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಮಾತ್ರ ಇದಕ್ಕೆ ಅವಕಾಶವಿತ್ತು.

‘ರೈತರು ಬೆಳೆದ ತರಕಾರಿಗಳಿಗೆ ಉತ್ತಮ ಬೆಲೆ ಸಿಗಲಿ’ ಎಂಬ ಸದುದ್ದೇಶದಿಂದ ಸ್ಥಳೀಯ ಆಡಳಿತ ಈ ಕ್ರಮ ಕೈಗೊಂಡಿತ್ತು. ತಾಜಾ ತರಕಾರಿಯು ರೈತರಿಂದ ನೇರವಾಗಿ ಗ್ರಾಹಕರಿಗೆ ದೊರಕುತ್ತದೆ ಎನ್ನುವ ಕಾರಣಕ್ಕೆ ಈ ವ್ಯವಸ್ಥೆಗೆ ಯಾರದ್ದೂ ತಕರಾರು ವ್ಯಕ್ತವಾಗಿರಲಿಲ್ಲ.

ಹಳ್ಳಿಗಳಿಂದ ಬರುತ್ತಿದ್ದ ರೈತರು ಉತ್ತಮ ವ್ಯಾಪಾರ ಮಾಡುತ್ತಿರುವುದನ್ನು ಗಮನಿಸಿದ ಕೆಲವು ತರಕಾರಿ ವ್ಯಾಪಾರಸ್ಥರು ತಾವೂ ರೈತರ ಸೋಗಿನಲ್ಲಿ ಈ ಸ್ಥಳಕ್ಕೆ ಬಂದು ವ್ಯಾಪಾರ ಆರಂಭಿಸಿದ್ದು, ಸಮಸ್ಯೆ ಸೃಷ್ಟಿಗೆ ಕಾರಣವಾಗಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ರೈತರಲ್ಲದವರು ಶಿವಮೊಗ್ಗದ ತರಕಾರಿ ಮಾರುಕಟ್ಟೆಯಿಂದ ಬೆಳಗಿನ ಜಾವ ಸಗಟು ರೂಪದಲ್ಲಿ ತರಕಾರಿ ಖರೀದಿಸಿ ಅದನ್ನು ಸಾಗರಕ್ಕೆ ತಂದು ರಸ್ತೆಯ ಬದಿಗೆ ರೈತರ ಪಕ್ಕದಲ್ಲೇ ಕುಳಿತು ತಾವೇ ಬೆಳೆದ ತರಕಾರಿ ಎನ್ನುವ ರೀತಿಯಲ್ಲಿ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ.

ಈ ಕಾರಣಕ್ಕೆ ಬೆರಳೆಣಿಕೆಯಷ್ಟಿದ್ದ ತರಕಾರಿ ಮಾರಾಟಗಾರರ ಸಂಖ್ಯೆ ಈಗ ತೀರಾ ಹೆಚ್ಚಾಗಿದ್ದು, ಅಂಚೆ ಕಚೇರಿ ವೃತ್ತದಿಂದ ನಗರಸಭೆ ಕಚೇರಿ ಸಮೀಪದವರೆಗೂ ಮಾರಾಟಗಾರರ ಸಾಲು ಮುಂದುವರಿದಿದೆ.

ತರಕಾರಿ ಮಾರಾಟಕ್ಕೆ ಉತ್ತಮ ಸ್ಪಂದನೆ ದೊರಕುತ್ತಿರುವುದನ್ನು ಗಮನಿಸಿದ ಹಣ್ಣಿನ ವ್ಯಾಪಾರಿಗಳು ಕೂಡ ಈಗ ಇದೇ ಸ್ಥಳದಲ್ಲಿ ವ್ಯಾಪಾರಕ್ಕೆ ಮುಂದಾಗಿದ್ದಾರೆ. ಹೀಗೆ ತರಕಾರಿ ಮತ್ತು ಹಣ್ಣುಗಳನ್ನು ಕೊಳ್ಳಲು ಬರುವ ಗ್ರಾಹಕರು ತಮ್ಮ ವಾಹನಗಳನ್ನು ಮಾರಾಟಗಾರರ ಮುಂದೆಯೇ ನಿಲ್ಲಿಸಿ ವ್ಯಾಪಾರ ಮಾಡುವುದು ಸಾಮಾನ್ಯವಾಗಿದೆ.

ಇದರ ಜೊತೆಗೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ನಾಲ್ಕು ರಸ್ತೆಗಳು ಸೇರುವ ಈ ವೃತ್ತದ ರಸ್ತೆಯಲ್ಲಿ ಪಾದಚಾರಿಗಳು ಓಡಾಡುವುದೇ ಕಷ್ಟ ಎನ್ನುವಂತಾಗಿದೆ. ಅಲ್ಲದೇ ಪದೇಪದೇ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರಿಗೂ ಕಿರಿಕಿರಿಯಾಗುತ್ತಿದೆ.

ಕೆಲವು ತಿಂಗಳ ಹಿಂದೆ ಸಾರ್ವಜನಿಕರ ದೂರು ಆಧರಿಸಿ ನಗರಸಭೆ ಹಾಗೂ ಪೊಲೀಸ್ ಅಧಿಕಾರಿಗಳು ಇಲ್ಲಿಂದ ರಸ್ತೆ ಬದಿ ವ್ಯಾಪಾರಸ್ಥರನ್ನು ತೆರವುಗೊಳಿಸಿದ್ದರು. ಆದರೆ, ಈಗ ಪುನಃ ಇದೇ ಸ್ಥಳದಲ್ಲಿ ವ್ಯಾಪಾರ ಆರಂಭಗೊಂಡಿರುವುದು ಸಾರ್ವಜನಿಕ ಉಪದ್ರವಕ್ಕೆ ಕಾರಣವಾಗಿದೆ.

ಗಣಪತಿ ಸಹಕಾರಿ ಬ್ಯಾಂಕ್‌ನ ವೃತ್ತಕ್ಕೆ ಹೊಂದಿಕೊಂಡಂತೆ ಇರುವ ನೆಹರೂ ಮೈದಾನದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಬೀದಿ ಬದಿ ತರಕಾರಿ ವ್ಯಾಪಾರಸ್ಥರಿಗಾಗಿಯೇ ಸ್ಥಳಾವಕಾಶ ಕಲ್ಪಿಸಲಾಗಿದೆ. ಆದರೆ, ಅಲ್ಲಿಗೆ ತೆರಳದ ವ್ಯಾಪಾರಸ್ಥರು ನಗರದ ಪ್ರಮುಖ ಬೀದಿಯ ರಸ್ತೆ ಬದಿಯಲ್ಲಿ ವ್ಯಾಪಾರಕ್ಕೆ ಮುಂದಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಚಾಮರಾಜಪೇಟೆ ಬಡಾವಣೆಯ ರಸ್ತೆ ಬದಿಯಲ್ಲಿ ರೈತರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈಗ ರೈತರಲ್ಲದವರೂ ಅಲ್ಲಿ ವ್ಯಾಪಾರಕ್ಕೆ ಮುಂದಾಗಿರುವುದು ಸಮಸ್ಯೆ ಸೃಷ್ಟಿಸಿದೆ. ನಗರಸಭೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಎಚ್.ಕೆ.ನಾಗಪ್ಪ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ನಗರಸಭೆ
ರಸ್ತೆ ಬದಿಯಲ್ಲಿ ತರಕಾರಿ ಹಣ್ಣಿನ ವ್ಯಾಪಾರಕ್ಕೆ ಅವಕಾಶ ನೀಡಿರುವುದು ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದಲೂ ಸೂಕ್ತವಲ್ಲ. ಯಾರಾದರೂ ವಾಹನ ಸವಾರರು ಅಡ್ಡಾದಿಡ್ಡಿ ವಾಹನ ಚಲಾಯಿಸಿದರೆ ಎಲ್ಲರಿಗೂ ತೊಂದರೆಯಾಗುವ ಸಾಧ್ಯತೆ ಇದೆ. ರೈತರಿಗೆ ರಸ್ತೆಬದಿ ಹೊರತುಪಡಿಸಿ ಸೂಕ್ತ ಸ್ಥಳದಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು.
ನವೀನ್ ಕುಮಾರ್ ಚಾಮರಾಜಪೇಟೆ ಬಡಾವಣೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT