ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಾವತಿ ಮುಳುಗಡೆ ಸಂತ್ರಸ್ತರ ಬದುಕು ಕತ್ತಲಿಗೆ

ಭೂ ಹಕ್ಕು ಡಿನೋಟಿಫಿಕೇಷನ್‌ ಪ್ರಸ್ತಾವನೆ ತಿರಸ್ಕರಿಸಿದ ಕೇಂದ್ರ ಸರ್ಕಾರ
Published 30 ಮೇ 2023, 15:56 IST
Last Updated 30 ಮೇ 2023, 15:56 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಶರಾವತಿ ಜಲವಿದ್ಯುತ್‌ ಯೋಜನೆಯಡಿ ಭೂಮಿ ಕಳೆದುಕೊಂಡ ಮುಳುಗಡೆ ಸಂತ್ರಸ್ತರಿಗೆ ಭೂಮಿ ಒದಗಿಸುವ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ. ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಸಲ್ಲಿಸಿದ್ದ ಅತ್ಯಂತ ಮಹತ್ವಪೂರ್ಣ ಡಿನೋಟಿಫಿಕೇಷನ್‌ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

1958ರಿಂದ 1969ರಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತ ಕುಟುಂಬಕ್ಕೆ ಭೂಮಿ ಹಕ್ಕು ನೀಡಲು 9,129 ಎಕರೆ ಮೈಸವಿ ಮೀಸಲು ಅರಣ್ಯ ಪ್ರದೇಶವನ್ನು ಡಿನೋಟಿಫಿಕೇಷನ್‌ ಮಾಡಲು ಅವಕಾಶ ನೀಡುವಂತೆ ಕೋರಿ ಮಾರ್ಚ್‌ 23ರಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು.

ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಮಾನ ವೈಪರಿತ್ಯ ಸಚಿವಾಲಯದ ಅರಣ್ಯ ಸಂರಕ್ಷಣೆ ವಿಭಾಗ ಸುಪ್ರಿಂಕೋರ್ಟ್‌ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿ ಬಾಕಿ ತೀರ್ಪು ಪ್ರಕಟಗೊಳ್ಳುವವರೆಗೆ ಅಧಿಸೂಚಿತ ಅರಣ್ಯ, ಅಭಯಾರಣ್ಯ, ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿ ಡಿನೋಟಿಫಿಕೇಷನ್‌ ಸಾಧ್ಯವಿಲ್ಲ ಎಂದು ಉಲ್ಲೇಖಿಸಿ ಏಪ್ರಿಲ್‌ 28ರಂದು ಪ್ರಸ್ತಾವ ತಿರಸ್ಕರಿಸಿ ಆದೇಶಿಸಿದೆ.

ಸಂತ್ರಸ್ತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಉದ್ದೇಶಿಸಿ 2017ರ ಅಕ್ಟೋಬರ್‌ 14ರಂದು ರಾಜ್ಯ ಸರ್ಕಾರ 56 ಅಧಿಸೂಚನೆಗಳ ಮೂಲಕ ಡಿನೋಟಿಫಿಕೇಷನ್‌ ಜಾರಿಗೊಳಿಸಿತ್ತು. ಶಿವಮೊಗ್ಗ, ಹೊಸನಗರ, ತೀರ್ಥಹಳ್ಳಿ ತಾಲ್ಲೂಕು ವ್ಯಾಪ್ತಿಯ 9,934 ಎಕರೆ 2 ಗುಂಟೆ ಪ್ರದೇಶ ಮಂಜೂರಾಗಿತ್ತು. ಡಿನೋಟಿಫಿಕೇಷನ್‌ ಆದೇಶದಲ್ಲಿ ಅರಣ್ಯ ಸಂರಕ್ಷಣೆ ಕಾಯ್ದೆ ಉಲ್ಲಂಘಿಸಲಾಗಿದೆ ಎಂದು ಆಕ್ಷೇಪಿಸಿ ಜನ ಸಂಗ್ರಾಮ ಪರಿಷತ್‌ ಮುಖಂಡ ಹೊಸನಗರ ಗಿರೀಶ್‌ ಆಚಾರ್‌ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು.

1978ರ ಅರಣ್ಯ ಸಂರಕ್ಷಣೆ ಕಾಯ್ದೆ ಅನ್ವಯ ಕೇಂದ್ರ ಸರ್ಕಾರದ ಪುರ್ವಾನುಮತಿ ಪಡೆದಿಲ್ಲ ಎಂದು ಡಿನೋಟಿಫಿಕೇಷನ್‌ ಆದೇಶವನ್ನು ರದ್ದು ಪಡಿಸಬೇಕು ಎಂದು 2021 ಮಾರ್ಚ್‌ 4ರಂದು ಹೈಕೋರ್ಟ್‌ ತೀರ್ಪು ನೀಡಿತ್ತು. ಹೈಕೋರ್ಟ್‌ ಆದೇಶದನ್ವಯ 2023ರ ಫೆಬ್ರುರವರಿ 16ರಂದು ರಾಜ್ಯ ಸರ್ಕಾರ ಡಿನೋಟಿಫಿಕೇಷನ್‌ ಆದೇಶವನ್ನು ರದ್ದುಪಡಿಸಿದೆ. ಇದನ್ನು ಪ್ರಶ್ನಿಸಿ ಸಿಂಗಂದೂರು ಧರ್ಮದರ್ಶಿ ಎಸ್‌. ರಾಮಪ್ಪ ನೇತೃತ್ವದಲ್ಲಿ 305 ಸಂತ್ರಸ್ತರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು.

ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ತೀವ್ರ ಚರ್ಚೆ, ವಿವಾದಕ್ಕೆ ಕಾರಣವಾಗಿದ್ದ ಶರಾವತಿ ಮುಳುಗಡೆ ಸಂತ್ರಸ್ತರ ಬದುಕು ಮತ್ತೊಮ್ಮೆ ಕತ್ತಲಿಗೆ ತೆರಳಿದೆ. 3 ತಿಂಗಳಲ್ಲಿ ಹಕ್ಕುಪತ್ರ ಒದಗಿಸುವ ಭರವಸೆ ನೀಡಿದ್ದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾನ ಹುಸಿಗೊಂಡಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT