ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಹಶೀಲ್ದಾರ್–ಗ್ರಾಮಸ್ಥರ ಮಧ್ಯೆ ಜಟಾಪಟಿ

ಕನಸಿನಕಟ್ಟೆಯಲ್ಲಿ ಸ್ಮಶಾನ ಜಾಗದಲ್ಲಿ ಅಂತ್ಯಸಂಸ್ಕಾರಕ್ಕೆ ಅಡ್ಡಿ
Published 10 ಜುಲೈ 2024, 16:14 IST
Last Updated 10 ಜುಲೈ 2024, 16:14 IST
ಅಕ್ಷರ ಗಾತ್ರ

ಹೊಳೆಹೊನ್ನೂರು: ಸಮೀಪದ ಕನಸಿನಕಟ್ಟೆ ಸ್ಮಶಾನ ಜಾಗದ ಪ್ರಕರಣ ನ್ಯಾಯಲದಲ್ಲಿದ್ದು, ಸದ್ಯಕ್ಕೆ ವಿವಾದಿತ ಜಾಗದಲ್ಲಿ ಶವಸಂಸ್ಕಾರ ನಡೆಸುವುದು ಬೇಡ ಎಂದು ಹೇಳಿ ಪ್ರತಿಭಟನಕಾರರ ಮನವೊಲಿಸಲು ಪ್ರಯತ್ನಿಸಿದ ತಹಸಿಲ್ದಾರ್‌ ನಾಗರಾಜ್‌ ಅವರನ್ನು ಕನಸಿಕಟ್ಟೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆಯಿತು. 

ಸಮೀಪದ ಕನಸಿಕಟ್ಟೆ ಗ್ರಾಮದ ಸ್ಮಶಾನ ಜಾಗದಲ್ಲಿ ಶವ ಸಂಸ್ಕಾರಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಬುಧವಾರ ಗ್ರಾಮಸ್ಥರು ವಿವಾದಿತ ಜಮೀನಿನಲ್ಲಿ ಶವ ಇಟ್ಟುಕೊಂಡು ಪ್ರತಿಭಟನೆ ನಡೆಸಿದರು. ಭದ್ರಾವತಿ ತಹಸಿಲ್ದಾರ್ ನಾಗರಾಜ್ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪ್ರತಿಭಟನಕಾರರ ಜತೆ ಮಾತನಾಡಿದರು.

‘ಅನಾದಿ ಕಾಲದಿಂದಲೂ ಗ್ರಾಮದವರು ಶವಸಂಸ್ಕಾರ ನಡೆಸುತ್ತಿದ ಜಾಗವು ಕಂದಾಯ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಕೈತಪ್ಪಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಗ್ರಾಮಕ್ಕೆ ಅಧಿಕಾರಿಗಳು ಅನ್ಯಾಯ ಮಾಡಿದ್ದಾರೆ. ನಾಲ್ಕೈದು ವರ್ಷಗಳಿಂದ ಶವ ಸಂಸ್ಕಾರಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಕಂದಾಯ ಇಲಾಖೆಯ ದಾಖಲೆಗಳಲ್ಲಿ ಖಾಲಿ ಜಾಗವೆಂದು ನಮೂದಾಗಿತ್ತು. ಇತೀಚಿನ ದಿನಗಳಿಂದ ಅದೇ ಜಾಗದಲ್ಲಿ ತೋಟವಿದೆ ಎಂದು ದಾಖಲೆ ಸೃಷ್ಟಿಸಿ ಶವಸಂಸ್ಕಾರಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಶವಸಂಸ್ಕಾರಕ್ಕೆ ಪ್ರತಿಬಾರಿಯೂ ಇದೆ ಸಮಸ್ಯೆಯಾಗುತ್ತದೆ. ಗ್ರಾಮದಲ್ಲಿ ಸ್ಮಶಾನ ಜಾಗ ಇಲ್ಲವೆಂದರೆ ಸಂಸ್ಕಾರ ನಡೆಸುವುದಾದರು ಎಲ್ಲಿ’ ಎಂದು ಕಂದಾಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಅದೇ ಜಾಗದಲ್ಲಿ ಶವ ಸಂಸ್ಕಾರ ಮಾಡುವುದಾಗಿ ಪಟ್ಟುಹಿಡಿದು ಕುಳಿತರು. ಆದರೆ ಶವಸಂಸ್ಕಾರಕ್ಕೆಂದು ತೆಗೆದಿದ್ದ ಗುಂಡಿಯಲ್ಲಿ ಕುಳಿತು ಜಾಗದ ಮಾಲೀಕ ನಾಗರಾಜಪ್ಪ ಪ್ರತಿಭಟನೆ ನಡೆಸಿದರು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಕಂದಾಯ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿಯನ್ನು ನಡೆಸಿದರು. ಗ್ರಾಮಸ್ಥರ ಒತ್ತಡಕ್ಕೆ ಮಣಿದ ತಹಶೀಲ್ದಾರ್, ನಾಗರಾಜಪ್ಪ ಜತೆ ಮಾತನಾಡಿ ಶವಸಂಸ್ಕಾರಕ್ಕೆ ಅನುವು ಮಾಡಿಕೊಡುವಂತೆ ಮನವೊಲಿಸಿದರು. ಈ ಜಾಗದಲ್ಲಿ ಇನ್ನೆಂದೂ ಶವಸಂಸ್ಕಾರ ಮಾಡುವಂತಿಲ್ಲ ಎಂಬ ಷರತ್ತು ವಿಧಿಸಿದ ನಾಗರಾಜಪ್ಪ ಪ್ರತಿಭಟನೆ ವಾಪಸ್ ಪಡೆದರು. 

ಉಪತಹಶೀಲ್ದಾರ್ ಮಂಜನಾಯ್ಕ, ಕಾಂಗ್ರೆಸ್ ಮುಖಂಡ ಮಂಜುನಾಥ್, ಕಂದಾಯ ನಿರೀಕ್ಷಕ ರವಿಕುಮಾರ್, ಗ್ರಾಮಲೆಕ್ಕಿಗ ಕಲ್ಯಾಣಿ, ವಿಜಯಕುಮಾರ್ ಲೋಕಯ್ಯ, ಚಂದ್ರಪ್ಪ, ನಂಜುಂಡ ನಾಯ್ಕ, ಅವಿನಾಶ್, ಮಂಜುನಾಥ್, ಮಂಜನಾಥ್, ರವಿಕುಮಾರ್, ರತ್ನಮ್ಮ, ಸಾಕಮ್ಮ, ಗೌರಮ್ಮ, ಭಾಗ್ಯಮ್ಮ ಇತರರಿದ್ದರು.

ಹೊಳೆಹೊನ್ನೂರು ಸಮೀಪ ಕನಸಿನಕಟ್ಟೆ ಗ್ರಾಮಕ್ಕೆ ಭದ್ರಾವತಿ ತಹಸಿಲ್ದಾರ್ ನಾಗರಾಜ್ ಸ್ಥಳಕ್ಕೆ ಬೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.
ಹೊಳೆಹೊನ್ನೂರು ಸಮೀಪ ಕನಸಿನಕಟ್ಟೆ ಗ್ರಾಮಕ್ಕೆ ಭದ್ರಾವತಿ ತಹಸಿಲ್ದಾರ್ ನಾಗರಾಜ್ ಸ್ಥಳಕ್ಕೆ ಬೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT