ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆ ವೇಳೆ ವೆಬ್ ಕ್ಯಾಸ್ಟಿಂಗ್‌ ಸಂಪರ್ಕ ಕಡಿತ: 33 ಶಾಲೆಗಳಿಗೆ ನೋಟಿಸ್

ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆ; ತಪ್ಪಿದ ವೆಬ್‌ಕ್ಯಾಸ್ಟ್‌ ಸಂಪರ್ಕ
Published 3 ಏಪ್ರಿಲ್ 2024, 5:44 IST
Last Updated 3 ಏಪ್ರಿಲ್ 2024, 5:44 IST
ಅಕ್ಷರ ಗಾತ್ರ

ವೆಂಕಟೇಶ ಜಿ.ಎಚ್

ಶಿವಮೊಗ್ಗ: ಜಿಲ್ಲೆಯಲ್ಲಿ ಮಂಗಳವಾರ ನಡೆದ ಎಸ್ಸೆಸ್ಸೆಲ್ಸಿ ಗಣಿತ ವಿಷಯದ ಪರೀಕ್ಷೆಯ ವೇಳೆ ಜಿಲ್ಲಾ ನಿಯಂತ್ರಣ ಕೊಠಡಿಯೊಂದಿಗೆ ವೆಬ್ ಕ್ಯಾಸ್ಟಿಂಗ್‌ ಮೂಲಕ 33 ಪರೀಕ್ಷಾ ಕೇಂದ್ರಗಳ ಸಂಪರ್ಕ ಸಾಧ್ಯವಾಗಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ.

ನಿಯಂತ್ರಣ ಕೊಠಡಿಯಿಂದ ಸಂಪರ್ಕ ಕಳೆದುಕೊಂಡಿದ್ದಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಸದರಿ ಶಾಲೆಗಳಿಂದ ಕಾರಣ ಕೇಳಿದೆ.

‘ನಮ್ಮಲ್ಲಿ ಕರೆಂಟ್ ಇರಲಿಲ್ಲ. ಇಂಟರ್‌ನೆಟ್ ಬಿಲ್ ಪಾವತಿಸಿರಲಿಲ್ಲ. ವೆಬ್‌ ಕ್ಯಾಸ್ಟಿಂಗ್‌ಗೆ ಸಂಪರ್ಕ ಕಲ್ಪಿಸಲು ತಾಂತ್ರಿಕ ತೊಂದರೆ ಎದುರಾಗಿತ್ತು. ಸಿ.ಸಿ. ಟಿವಿ ಕ್ಯಾಮೆರಾ ಕೆಲಸ ಮಾಡುತ್ತಿರಲಿಲ್ಲ, ಪಾಸ್‌ವರ್ಡ್ ತಪ್ಪಾಗಿತ್ತು. ಲಾಗಿನ್ ಆಗಲು ಸಾಧ್ಯವಾಗಲಿಲ್ಲ, ಸಿ.ಸಿ. ಟಿವಿಗೆ ವೆಬ್‌ ಕ್ಯಾಸ್ಟಿಂಗ್ ವ್ಯವಸ್ಥೆ ಲಭ್ಯವಿರಲಿಲ್ಲ, ಪರೀಕ್ಷಾ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ ಇರಲಿಲ್ಲ, ಡಿಸ್‌ಪ್ಲೇ ಲಭ್ಯವಿರಲಿಲ್ಲ, ಸಿ.ಸಿ. ಟಿವಿ ಕ್ಯಾಮೆರಾಗೆ ಡಿವಿಆರ್ ಇರಲಿಲ್ಲ. ನಾಲ್ಕು ಕೊಠಡಿಗಳಲ್ಲಿ ಮಾತ್ರ ಸಿ.ಸಿ ಟಿವಿ ಕ್ಯಾಮೆರಾ ಇದ್ದು, ಉಳಿದ ಕೊಠಡಿಗಳಲ್ಲಿ ಇರಲಿಲ್ಲ’ ಎಂಬ ಕಾರಣಗಳನ್ನು ಸದರಿ ಶಾಲೆಯವರು ಕೊಟ್ಟಿದ್ದಾರೆ. 

ಏನಿದು ವೆಬ್‌ಕ್ಯಾಸ್ಟಿಂಗ್ ವ್ಯವಸ್ಥೆ:

ನಕಲು ತಡೆಯುವ ಜೊತೆಗೆ ಮುಕ್ತ ಮತ್ತು ಪಾರದರ್ಶಕ ಪರೀಕ್ಷೆ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಗಿ ಕ್ರಮ ಕೈಗೊಂಡಿದ್ದು, ಈ ಬಾರಿ ವೆಬ್‌ಕ್ಯಾಸ್ಟಿಂಗ್‌ ವ್ಯವಸ್ಥೆ ಅಳವಡಿಸಿದೆ.

ಪರೀಕ್ಷೆ ವೇಳೆ ಕೊಠಡಿಯೊಳಗೆ ನಡೆಯುವ ವಿದ್ಯಮಾನಗಳನ್ನು ವೆಬ್‌ಕಾಸ್ಟಿಂಗ್ ಮೂಲಕ ನೇರವಾಗಿ ಶಿವಮೊಗ್ಗದ ಡಿಡಿಪಿಐ ಕಚೇರಿಯಲ್ಲಿ ಸ್ಥಾಪಿಸಿರುವ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ಕುಳಿತು ವೀಕ್ಷಿಸಬಹುದಾಗಿದೆ.

ಆದರೆ, ಅನೇಕ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ ಎಂದೇ ಪರಿಗಣಿಸಲಾಗುವ ಗಣಿತ ವಿಷಯದ ಪರೀಕ್ಷೆಯ ದಿನವೇ ‘ತಾಂತ್ರಿಕ ತೊಂದರೆ’ ಎಂಬ ನೆಪವೊಡ್ಡಿ ಇಷ್ಟೊಂದು ಶಾಲೆಗಳು ವೆಬ್‌ಕ್ಯಾಸ್ಟಿಂಗ್‌ ಸಂ‍ಪರ್ಕದಿಂದ ಹೊರಗೆ ಉಳಿದಿರುವುದು ಅನುಮಾನ ಹೆಚ್ಚಿಸಿದೆ ಎಂದು ಶಿಕ್ಷಕರೊಬ್ಬರು ಹೇಳುತ್ತಾರೆ.

ಇವೆಲ್ಲ ಕಾರಣವೇ ಅಲ್ಲ:

ಪರೀಕ್ಷೆ ವೇಳೆ ವೆಬ್‌ಕ್ಯಾಸ್ಟಿಂಗ್ ಸಂಪರ್ಕಕ್ಕೆ ಅಡಚಣೆ ಆಗದಂತೆ ಯಾವುದೇ ಕಾರಣಕ್ಕೂ ವಿದ್ಯುತ್ ಕಡಿತ ಮಾಡುವುದಿಲ್ಲ. ಅದಕ್ಕೆ ಮೆಸ್ಕಾಂ ಸಾರ್ವಜನಿಕ ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿದೆ. ಸಂಪರ್ಕ ವ್ಯವಸ್ಥೆಗೆ ಧಕ್ಕೆ ಆಗದಂತೆ ಬಿಎಸ್‌ಎನ್‌ಎಲ್ ಸೇರಿದಂತೆ ಆಯಾ ದೂರ ಸಂಪರ್ಕ ಸಂಸ್ಥೆಗಳು ನಿಗಾ ವಹಿಸಿವೆ. ಹೀಗಿದ್ದರೂ ‘ಸಂಪರ್ಕ ಕಡಿತ’ದ ನೆಪ ಒಪ್ಪಲು ಸಾಧ್ಯವಿಲ್ಲ. ಗಣಿತ ಪರೀಕ್ಷೆಯ ಫಲಿತಾಂಶ ಆಯಾ ಶಾಲೆಯ ಭವಿಷ್ಯ ನಿರ್ಧರಿಸುತ್ತದೆ. ಹೀಗಾಗಿ ಈ ಪರೀಕ್ಷಾ ಕೇಂದ್ರಗಳು ವೆಬ್‌ಕ್ಯಾಸ್ಟಿಂಗ್‌ ವ್ಯವಸ್ಥೆಯೊಂದಿಗೆ ಸಂಪರ್ಕ ಕಳೆದುಕೊಂಡವೇ ಎಂಬುದೂ ಸೇರಿದಂತೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ಹೇಳುತ್ತಾರೆ.

ಪರೀಕ್ಷೆಯ ವೇಳೆ ವೆಬ್‌ಕ್ಯಾಸ್ಟಿಂಗ್‌ನಿಂದ ಸಂಪರ್ಕ ಕಳೆದುಕೊಂಡಿದ್ದ ಪರೀಕ್ಷಾ ಕೇಂದ್ರಗಳಲ್ಲಿ 19 ಸರ್ಕಾರಿ ಶಾಲೆಗಳು, 14 ಅನುದಾನಿತ ಹಾಗೂ ಸರ್ಕಾರಿ ಪ್ರೌಢಶಾಲೆಗಳು ಸೇರಿವೆ. ಶಿವಮೊಗ್ಗ ನಗರದ 5, ಸೊರಬ ತಾಲ್ಲೂಕಿನ 5, ಭದ್ರಾವತಿಯ 6, ಸಾಗರದ 6, ತೀರ್ಥಹಳ್ಳಿಯ 5, ಶಿಕಾರಿಪುರ ತಾಲ್ಲೂಕಿನ 6 ಪರೀಕ್ಷಾ ಕೇಂದ್ರಗಳು ವೆಬ್‌ಕ್ಯಾಸ್ಟಿಂಗ್‌ ಸಂಪರ್ಕಕ್ಕೆ ಲಭ್ಯವಾಗಿಲ್ಲ.

Highlights - null

Quote - ವೆಬ್‌ಕ್ಯಾಸ್ಟಿಂಗ್ ಸಂಪರ್ಕಕ್ಕೆ ಲಭ್ಯವಾಗದೇ ಮಂಗಳವಾರ ಪರೀಕ್ಷೆ ನಡೆದಿರುವ ಶಾಲೆಗಳಿಗೆ ಕಾರಣ ಕೇಳಿ ನೋಟಿಸ್ ಕೊಡಲಾಗಿದೆ. ಉಳಿದ ವಿಷಯಗಳ ಪರೀಕ್ಷೆ ದಿನ ಇದು ಪುನರಾವರ್ತನೆ ಆದರೆ ಗಂಭೀರ ಕ್ರಮದ ಎಚ್ಚರಿಕೆಯನ್ನು ಆಯಾ ಬಿಇಒಗಳ ಮೂಲಕ ಕೊಡಿಸಿದ್ದೇನೆ ಸಿ.ಆರ್.ಪರಮೇಶ್ವರಪ್ಪ ಡಿಡಿಪಿಐ ಶಿವಮೊಗ್ಗ

Cut-off box - ನೋಡಲ್ ಅಧಿಕಾರಿಗಳ ನೇಮಕ ಸಿ.ಸಿ. ಟಿವಿ ಕ್ಯಾಮೆರಾದಲ್ಲಿನ ಐ.ಪಿ. ಸಂಖ್ಯೆ ವೆಬ್‌ಕ್ಯಾಸ್ಟಿಂಗ್‌ ವ್ಯವಸ್ಥೆಗೆ ಕನೆಕ್ಟ್‌ ಆಗದ ಕಾರಣ ಸಂಪರ್ಕ ಸಾಧ್ಯವಾಗಿಲ್ಲ ಎಂದು ಬಹುತೇಕ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಹೇಳಿದ್ದಾರೆ. ಆಯಾ ಶಾಲೆಗಳ ಸಿ.ಸಿ ಟಿವಿ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಲು ತಲಾ 6 ಶಾಲೆಗಳಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದೇನೆ ಎಂದು ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT