ಶಿವಮೊಗ್ಗ: ಕಳೆದ ಸಾಲಿನಲ್ಲಿ ಡಿಪ್ಲೊಮಾ ಮತ್ತು ಪದವಿ ಪೂರೈಸಿ, ಉದ್ಯೋಗದ ಹುಡುಕಾಟದಲ್ಲಿರುವ ಯುವ ಜನತೆಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ನೀಡುವ ಸರ್ಕಾರದ 5ನೇ ಗ್ಯಾರಂಟಿ ‘ಯುವನಿಧಿ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಶುಕ್ರವಾರ ಚಾಲನೆ ನೀಡಲಿದ್ದಾರೆ.
ನಗರದ ಫ್ರೀಡಂ ಪಾರ್ಕ್ ಆವರಣದಲ್ಲಿ ಬೃಹತ್ ವೇದಿಕೆ ಸಜ್ಜುಗೊಂಡಿದೆ. ನಿರುದ್ಯೋಗಿಗಳ ಖಾತೆಗೆ ಹಣ ವರ್ಗಾಯಿಸುವ ಮೂಲಕ ಮುಖ್ಯಮಂತ್ರಿಯವರು ಯೋಜನೆಗೆ ಚಾಲನೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಪ್ರಮುಖ ಸಚಿವರು ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮಕ್ಕೆ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಹಾವೇರಿ, ಗದಗ ಮತ್ತು ಉಡುಪಿ ಮತ್ತಿತರ ಜಿಲ್ಲೆಗಳಿಂದ 1 ಲಕ್ಷಕ್ಕೂ ಅಧಿಕ ಸಂಖ್ಯೆಯ ಯುವಜನರು ಹಾಗೂ ಕಾರ್ಯಕರ್ತರನ್ನು ಕರೆತರಲು ಸಂಘಟಕರು ಮುಂದಾಗಿದ್ದಾರೆ. ಹೊರ ಜಿಲ್ಲೆಗಳಿಂದ ಬರುವವರಿಗಾಗಿ 1,000 ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರಿಗೂ ಊಟೋಪಹಾರ ಇದೆ.