ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರದ ಡಿಸಿ, ಎಸ್‌ಪಿ; ವಿಶೇಷ ಸಭೆ ರದ್ದು

ಜಿಲ್ಲೆಯ ಮರಳಿನ ಸಮಸ್ಯೆ ಬಗೆಹರಿಸಲು ಕರೆದಿದ್ದ ಜಿಲ್ಲಾ ಪಂಚಾಯತಿ ಸಭೆ
Last Updated 28 ಜನವರಿ 2019, 14:35 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯ ಮರಳಿನ ಸಮಸ್ಯೆ ಕುರಿತು ಚರ್ಚಿಸಲು ಸೋಮವಾರ ಕರೆಯಲಾಗಿದ್ದ ವಿಶೇಷ ಸಭೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗೈರುಹಾಜರಿಯ ಕಾರಣಕ್ಕೆ ಮುಂದೂಡಲ್ಪಟ್ಟಿತು.

ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಣೆ ತಡೆದು, ಜನರಿಗೆ ಸಮರ್ಪಕ ವಿತರಣೆಗೆ ಕ್ರಮಕೈಗೊಳ್ಳುವಲ್ಲಿಜಿಲ್ಲಾಡಳಿತ, ಜಿಲ್ಲಾ ಪೊಲೀಸರು ವಿಫಲರಾಗಿದ್ದಾರೆ. ಅಕ್ರಮದಲ್ಲಿ ಹಲವು ಪೊಲೀಸರ ಹೆಸರುಗಳೂ ಕೇಳಿಬರುತ್ತಿವೆ. ಇಂತಹ ಗಂಭೀರ ವಿಷಯ ಕುರಿತು ಚರ್ಚಿಸಲು, ಪರಿಹಾರ ಕಂಡುಕೊಳ್ಳಲು ಕರೆದ ಸಭೆಗೆ ಪ್ರಮುಖ ಅಧಿಕಾರಿಗಳೇ ಗೈರು ಹಾಜರಾದರೆ ಹೇಗೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ಪ್ರಶ್ನಿಸಿದರು.

ಶಾಸಕ ಕುಮಾರ್ ಬಂಗಾರಪ್ಪ ಮಾತನಾಡಿ, ನಮಗೂ ಸಾಕಷ್ಟು ಕೆಲಸ ಇತ್ತು. ಅವುಗಳನ್ನು ಮುಂದೂಡಿ ಸಭೆಗೆ ಬಂದೆವು. ಬರ, ಮರಳಿನ ಸಮಸ್ಯೆಗಳು ಸೊರಬ ತಾಲ್ಲೂಕನ್ನು ಕಾಡುತ್ತಿವೆ. ವಿಶೇಷ ಸಭೆ ಕರೆದ ಮೇಲೆ ಪ್ರಮುಖರು ಹಾಜರಿದ್ದು ಬಗೆಹರಿಸಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಡಳಿತವೇ ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಸ್ವತಃ ಜಿಲ್ಲಾಧಿಕಾರಿ, ಎಸ್‌ಪಿ ಹಾಜರಿದ್ದು ಅದಕ್ಕೆ ಸ್ಪಷ್ಟನೆ ನೀಡಬೇಕಿತ್ತು. ಸಮಸ್ಯೆ ಬಗೆಹರಿಸಲು ಚರ್ಚಿಸಬೇಕಿತ್ತು. ಮತ್ತೆ ಮೂರು ತಿಂಗಳು ಕಳೆದರೆ ಮತ್ತೆ ಮಳೆಗಾಲ ಬರುತ್ತದೆ. ಈಗ ಸಮಸ್ಯೆ ಬಗೆಹರಿಸದಿದ್ದರೆ ಮುಂದೆ ಸಾಧ್ಯವಿಲ್ಲ ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ. ಕಾಂತೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಿಂದ ಸಾವಿರಾರು ಲೋಡು ಮರಳು ಹೊರಗೆ ಹೋಗುತ್ತಿದೆ. ಇಲ್ಲಿನ ಜನರಿಗೇ ಮರಳು ಸಿಗುತ್ತಿಲ್ಲ. ಈ ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಸಭೆ ಕರೆತಲಾಗಿತ್ತು. ಈಗ ಮತ್ತೆ ಮುಂದೂಡುವ ಸ್ಥಿತಿ ಬಂದಿದೆ ಎಂದು ಸದಸ್ಯ ಯೋಗೇಶ್ ದೂರಿದರು.

ಸಾಗರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ವಿಶೇಷ ಸಭೆ ದಿಢೀರ್ ಎಂದು ಕರೆದಿಲ್ಲ. ಹಿಂದೆ ನಡೆದ ಸಾಮಾನ್ಯ ಸಭೆಯಲ್ಲೇ ಮರಳಿನ ಸಮಸ್ಯೆ ಕುರಿತು ಸಾಕಷ್ಟು ಚರ್ಚೆಯಾಗಿತ್ತು. 15 ದಿನಗಳ ಹಿಂದೆಯೇ ಸಭೆ ಇರುವ ಕುರಿತು ನೋಟಿಸ್‌ ನೀಡಲಾಗಿದೆ. ಆಗಲೇ ಹೇಳಿದ್ದರೆ ಬದಲಿ ದಿನ ನಿಗದಿ ಮಾಡಬಹುದಿತ್ತು. ಇದು ಜಿಲ್ಲಾ ಸರ್ಕಾರ. ಮುಖ್ಯಸ್ಥರು ಇರದೇ ಸಭೆ ನಡೆಸಲು ಸಾಧ್ಯವಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮರಳು ಸಮಸ್ಯೆ ಬಿಗಡಾಯಿಸಿದೆ. ಅಕ್ರಮ ಮರಳು ದಂಧೆ ತಡೆಯಬೇಕಾದ ಪೊಲೀಸರ ವಿರುದ್ಧವೇ ಪ್ರಕರಣ ದಾಖಲಾಗಿವೆ. ಕಾಯುವವರೇ ಕೊಳ್ಳೆ ಹೊಡೆದರೆ ಹೇಗೆ ಎಂದು ಸದಸ್ಯ ವೀರಭದ್ರಪ್ಪ ಪೂಜಾರ್ ಪ್ರಶ್ನಿಸಿದರು.

ನಾವೇನು ಕೆಲಸವಿಲ್ಲದೇ ಸಭೆಗೆ ಬಂದಿದ್ದೇವೆಯೇ? ಮೊದಲೇ ವಿಷಯ ಗೊತ್ತಿದ್ದವರು ಸಭೆ ಮುಂದೂಡಬಹುದಿತ್ತು. ಸುಮ್ಮನೆ ಎಲ್ಲರ ಸಮಯ ವ್ಯರ್ಥ. ಕಾಲಾಹರಣ ಮಾಡದೇ ಸಭೆ ಮುಂದೂಡುವಂತೆ ಬಹುತೇಕ ಸದಸ್ಯರು ಒತ್ತಾಯಿಸಿದರು.

ಸದಸ್ಯರ ಪ್ರಶ್ನೆಗಳಿಗೆ ಮಧ್ಯೆ ತಡೆ ಹಾಕುತ್ತಿದ್ದ ಸಿಇಒ ವಿರುದ್ಧ ಸಾಗರ ಶಾಸಕ ಹಾಲಪ್ಪ ಹರತಾಳು ಚಾಟಿ ಬೀಸಿದರು.ಕೊನೆಗೆ ಸಭೆ ಮುಂದೂಡಿರುವುದಾಗಿ ಅಧ್ಯಕ್ಷೆ ಜ್ಯೋತಿ ಕುಮಾರ್ ಪ್ರಕಟಿಸಿದರು.

ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಹೆಚ್ಚುವರಿ ಎಸ್‌ಪಿ ಮುತ್ತುರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT