ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೆಡೆ ಜನಸಾಗರ, ಮತ್ತೊಂದೆಡೆ ಆಶ್ರಯಕ್ಕೆ ಪರದಾಟ

Last Updated 3 ಆಗಸ್ಟ್ 2013, 10:11 IST
ಅಕ್ಷರ ಗಾತ್ರ

ಭದ್ರಾವತಿ: ಒಂದೆಡೆ ಉಕ್ಕಿ ಹರಿಯುತ್ತಿರುವ ಭದ್ರೆಯ ಮನಮೋಹಕ ದೃಶ್ಯ ಸವಿಯಲು ಜನಸಾಗರ ಬರುತ್ತಿದ್ದರೆ, ಮತ್ತೊಂದೆಡೆ ಜಲಾವೃತ ಮನೆಯಿಂದ ರಕ್ಷಣೆ ಪಡೆಯಲು ಗಂಜಿ ಕೇಂದ್ರಕ್ಕೆ ಬಂದಿರುವ ಜನರಿಗೆ ಕಳ್ಳರ ಭಯ ಆವರಿಸಿದೆ.

ಹೌದು! ಗುರುವಾರ ಸಂಜೆ ಜಲಾಶಯದಿಂದ ಹೊರಬಿಡುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗುವ ಮಾಹಿತಿ ಸಿಕ್ಕ ಕೂಡಲೇ ತಹಶೀಲ್ದಾರ್ ಸಿದ್ದಮಲ್ಲಪ್ಪ ನೇತೃತ್ವದ ತಂಡ ಜರೂರಾಗಿ ನದಿಪಾತ್ರದ ಜನರಿಗೆ ಎಚ್ಚರಿಕೆ ನೀಡುವ ಕೆಲಸ ಆರಂಭಿಸಿತು.
ನೀರು ಹೆಚ್ಚಳದಿಂದ ತಕ್ಷಣದ ತೊಂದರೆ ಎದುರಾಗುವ ಕವಲಗುಂದಿ ಭಾಗದ 29 ಕುಟುಂಬಗಳನ್ನು ಲೋಯರ್‌ಹುತ್ತಾ ಗಂಜಿ ಕೇಂದ್ರಕ್ಕೆ ಕರೆತರುವ ಪ್ರಯತ್ನಕ್ಕೆ ಮುಂದಾದರು.

ಸದ್ಯಕ್ಕೆ 90 ಕುಟುಂಬಗಳು ಭದ್ರಾ ಪ್ರೌಢಶಾಲೆ, ಲೋಯರ್‌ಹುತ್ತಾ ಶಾಲೆ, ತರೀಕೆರೆ ತಮಿಳು ಶಾಲೆಯಲ್ಲಿ ಊಟ, ವಸತಿ ಸೌಲಭ್ಯ ಒದಗಿಸಲಾಗಿದೆ. ಅವಶ್ಯವಿರುವ ಸೌಕರ್ಯ ಒದಗಿಸಲು ತಾಲ್ಲೂಕು ಆಡಳಿತ ಮುಂದಾಗಿದೆ.

ಆದರೆ, ಇವರಿಗೆ ಸದ್ಯಕ್ಕೆ ಎದುರಾಗಿರುವ ಸಮಸ್ಯೆ ಗಂಜಿ ಕೇಂದ್ರದಲ್ಲೇ ಉಳಿದರೆ ಕಳ್ಳರು ಮನೆಗೆ ನುಗ್ಗಿ ವಸ್ತುಗಳನ್ನು ಕಳವು ಮಾಡುತ್ತಾರೆಂಬ ಭಯ. ಇದಕ್ಕಾಗಿ ಊಟ ಮುಗಿಸಿ ಪುನಃ ಮನೆಯ ಬಳಿ ತೆರಳಿ ಮಳೆ, ಗಾಳಿ, ನೀರಿನ ರಭಸ ಎನ್ನದೇ ಮನೆ ಕಾಯುವ ಸ್ಥಿತಿ ಮಾತ್ರ ತಪ್ಪಿಲ್ಲ.

ಮನೆ ಬಿಟ್ಟು ಬಂದರೆ ಕಳ್ಳರ ಕಾಟ ಹಾಗಾಗಿ ಊಟ ಮಾಡಿ ಕೆಲವರು ಅಲ್ಲಿಗೆ ತೆರಳುತ್ತಾರೆ ಎನ್ನುವ ಮಹೇಂದ್ರ, ಇದಕ್ಕೆ ದನಿಗೂಡಿಸುವ ಮುತ್ತಮ್ಮ ಏನಾದರೇನು ಸಾರ್, ನಮ್ಮ ಮನೆ, ವಸ್ತು ಉಳಿಸಿಕೊಳ್ಳಲು ಕಷ್ಟ ಮಾತ್ರ ತಪ್ಪಿಲ್ಲ ಎಂದು ನೊಂದು ನುಡಿಯುತ್ತಾರೆ.

ಮಳೆ ಹಾನಿ: ಪರಿಶೀಲನೆ
ಸಾಗರ :
ತಾಲ್ಲೂಕಿನ ಹಿರೇಬಿಲಗುಂಜಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಸಂತೆಯಲ್ಲಿ ಭೀಮನಕೋಣೆ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎಚ್.ಶಿವಪ್ಪ ಎಂಬುವವರ ಮನೆಯ ಮೇಲೆ ಬುಧವಾರ ಅರಳಿ ಮರ ಉರುಳಿ ಸುಮಾರು ರೂ 2 ಲಕ್ಷ  ನಷ್ಟ ಸಂಭವಿಸಿದೆ.

ಸ್ಥಳಕ್ಕೆ ತಹಶೀಲ್ದಾರ್ ಆರ್. ರಾಜಣ್ಣ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯ ರತ್ನಾಕರ ಹೊನಗೋಡು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಅಸ್ಪಾಕ್ ಅಹ್ಮದ್, ಕೆ.ಹೊಳೆಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT