ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು ಪೂರೈಸಲು ಆಡಳಿತ ವಿಫಲ

Last Updated 16 ಏಪ್ರಿಲ್ 2017, 7:54 IST
ಅಕ್ಷರ ಗಾತ್ರ

ತೀರ್ಥಹಳ್ಳಿ:  ‘ಸರ್ಕಾರ ಬರ ಪ್ರದೇಶ ವೆಂದು ತಾಲ್ಲೂಕನ್ನು   ಘೋಷಣೆ ಮಾಡಿ ಮೂರು ತಿಂಗಳು ಕಳೆದರೂ  ನೀರು ಪೂರೈಕೆ ಕಾಮಗಾರಿಗೆ ಹಣ ಬಿಡುಗಡೆಯಾಗಿಲ್ಲ’ ಎಂದು  ದೂರಿ ಬಿಜೆಪಿ ಸದಸ್ಯರು ಧರಣಿ ನಡೆಸಿದರು.ತೀರ್ಥಹಳ್ಳಿ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಬರ ಪರಿಹಾರಕ್ಕೆ ಕೈಗೊಂಡ ಕ್ರಮಗಳ ಕುರಿತ ಮಾಹಿತಿಗೆ ಬಿಜೆಪಿ ಸದಸ್ಯರು ಪಟ್ಟ ಹಿಡಿದರು.

ಕಾರ್ಯ ನಿರ್ವಹಣಾಧಿಕಾರಿ ಮಾಹಿತಿ ನೀಡಲು ತಡವರಿಸಿದರು. ಸಿಟ್ಟಾದ ಸದಸ್ಯರು ಸಭಾಂಗಣದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಯಶೋದಾ ಮಂಜುನಾಥ್‌, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ಸದಸ್ಯರಾದ ಬೇಗುವಳ್ಳಿ ಕವಿರಾಜ್‌, ಚಂದವಳ್ಳಿ ಸೋಮಶೇಖರ್‌, ಟಿ.ಮಂಜುನಾಥ್‌, ಪ್ರಶಾಂತ್‌ ಕುಕ್ಕೆ, ಲಕ್ಷ್ಮಿ ಉಮೇಶ್‌, ಗೀತಾ ಶೆಟ್ಟಿ   ಧರಣಿಯಲ್ಲಿ ಪಾಲ್ಗೊಂಡರು.

ಧರಣಿ ಹಿಂದಕ್ಕೆ ಪಡೆಯುವಂತೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನವಮಣಿ ಅವರ ಮನವಿಗೆ ಸ್ಪಂದನೆ ದೊರೆಯಲಿಲ್ಲ. ಅಧ್ಯಕ್ಷರು ತಕ್ಷಣ ಸಭೆ ಮುಂದೂಡಲಾಗಿದೆ  ಎಂದು ಘೋಷಿಸಿದರು.  ಕಾಂಗ್ರೆಸ್‌ನ ಸದಸ್ಯರಾದ ಕೆಳಕೆರೆ ದಿವಾಕರ್‌, ಶ್ರುತಿ ವೆಂಕಟೇಶ್‌ ಧರಣಿ ಮುಂದುವರೆಸಿ ಎಂದು ಸಭೆಯಿಂದ ಹೊರ ನಡೆದರು.ಭೋಜನದ ನಂತರ ಸಭೆ ನಡದಾಗಲೂ ಧರಣಿ ಮುಂದುವರಿಯಿತು.

‘ಕುಡಿಯುವ ನೀರಿನ ಸಮಸ್ಯೆ ಕುರಿತು  ಮಾಹಿತಿ ಇಲ್ಲದೇ ಸಭೆ ನಡೆಸುವುದರಲ್ಲಿ ಅರ್ಥವಿಲ್ಲ. ತಾಲ್ಲೂಕಿನ ಅನೇಕ ಕಡೆಗಳಲ್ಲಿ ಶಾಸಕ ಕಿಮ್ಮನೆ ರತ್ನಾಕರ ಅವರ ಹೆಸರಿನಲ್ಲಿ ಕೊಳವೆಬಾವಿ ಕೊರೆಸಲಾಗಿದೆ’ ಎಂದು ಸದಸ್ಯರು ದೂರಿದರು.‘ಈ ಕಾಮಗಾರಿ ಹಮ್ಮಿಕೊಳ್ಳಲು ಹಣ ಎಲ್ಲಿಂದ ಬಂತು ಎಂಬ ಬಗ್ಗೆ ಸಭೆಗೆ ಮಾಹಿತಿ ಕೊಡಬೇಕು. ಖುದ್ಧು ಜಿಲ್ಲಾಧಿಕಾರಿ ಸಭೆಗೆ ಬಂದು ಮಾಹಿತಿ ನೀಡಲಿ’ ಎಂದು  ಪಟ್ಟು ಹಿಡಿದರು.

ಉಪವಿಭಾಗಾಧಿಕಾರಿ ಸಭೆಗೆ ಬರುವ ಮಾಹಿತಿ ಸಿಕ್ಕ ನಂತರ   ಸದಸ್ಯರು ಧರಣಿ ಹಿಂದಕ್ಕೆ ಪಡೆದರು. ನಂತರ ಅಧ್ಯಕ್ಷರು ಸಭೆಯನ್ನು ಮುಂದೂಡಿದರು.ಸಭೆ ಕಾವೇರುತ್ತಿದ್ದಂತೆ  ಶಾಸಕ ಕಿಮ್ಮನೆ ರತ್ನಾಕರ ಬಂದರು.‘ಬರದ ಕಾರಣ ಕುಡಿಯುವ ನೀರಿನ ಸಮಸ್ಯೆ ಇದೆ. ಕೆರೆ, ಕಟ್ಟೆಗಳು ಬತ್ತಿಹೋಗಿದ್ದು, ಕೃಷಿಗೆ ತೊಡಕಾಗುತ್ತಿದೆ. ಮೊದಲ ಹಂತದಲ್ಲಿ ₹5 ಕೋಟಿ ಅನುದಾನ ಬಿಡುಗಡೆ ಮಾಡಬೇಕು’ ಎಂದು ಸದಸ್ಯರಾದ ಸಾಲೇಕೊಪ್ಪ ರಾಮಚಂದ್ರ, ಬೇಗುವಳ್ಳಿ ಕವಿರಾಜ್‌, ಚಂದವಳ್ಳಿ ಸೋಮಶೇಖರ್‌ ಆಗ್ರಹಿಸಿದರು.

ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೆ ಪ್ರಯತ್ನಿಸು ತ್ತೇನೆ’ ಎಂದು ಕಿಮ್ಮನೆ ಭರವಸೆ ನೀಡಿದರು.‘ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ಮಂಜೂರು ಮಾಡಿಸಿ’ ಎಂದು ಸದಸ್ಯರು ಮನವಿ ಮಾಡಿದರು.ಕುಡಿಯುವ ನೀರು, ಬರ ಪರಿಹಾರ, ಆರ್‌ಟಿಸಿ ದಾಖಲೆಯಲ್ಲಿನ ಬೆಳೆ ಕಾಲಂ ದೋಷ, ಕೆರೆಗಳ ಅಭಿವೃದ್ಧಿ ತೀವ್ರ ಚರ್ಚೆ ನಂತರ ಶಾಸಕರು ನಿರ್ಗಮಿಸಿದರು.

ಬಿಜೆಪಿ ಸದಸ್ಯರು, ‘ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆ ನಿರ್ಣಯಗಳು ಗಮನದಲ್ಲಿ ಇಲ್ಲ ಎಂದು  ಶಾಸಕರು  ತಿಳಿಸಿದ್ದಾರೆ. ನಿರ್ಣಯ ಶಾಸಕರ ಗಮನದಲ್ಲಿಯೇ ಇಲ್ಲದಿದ್ದ ಮೇಲೆ ಸರ್ಕಾರದ ಗಮನ ಸೆಳೆಯಲು ಹೇಗೆ ಸಾಧ್ಯ? ಅನುದಾನ ಬಿಡುಗಡೆಯಾಗುವುದು ಹೇಗೆ’ ಎಂದು  ಆಕ್ಷೇಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT