ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ ಸ್ವತಂತ್ರ ಧರ್ಮ: ತಿಪ್ಪಣ್ಣ ಪ್ರತಿಪಾದನೆ

Last Updated 22 ಅಕ್ಟೋಬರ್ 2012, 4:50 IST
ಅಕ್ಷರ ಗಾತ್ರ

ಶಿವಮೊಗ್ಗ: ಹಿಂದೂ ಧರ್ಮ, ಇಂದಿಗೂ ಚರ್ತುವರ್ಣಗಳಲ್ಲಿ ವಿಶ್ವಾಸ ಇಟ್ಟುಕೊಂಡಿರುವುದರಿಂದ ಅದರ ವಿರುದ್ಧ ಹುಟ್ಟಿದ ವೀರಶೈವ ಧರ್ಮ ಸರ್ವ ಸ್ವತಂತ್ರವಾಗಿ ಬೆಳೆದಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎನ್. ತಿಪ್ಪಣ್ಣ ಪ್ರತಿಪಾದಿಸಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವೀರಶೈವ ಧರ್ಮದಲ್ಲಿ ಒಬ್ಬ ದಲಿತ ವೀರಶೈವನಾಗಲು ಸಾಧ್ಯವಿದೆ. ಹಿಂದೂ ಧರ್ಮದಲ್ಲಿ ಇದು ಸಾಧ್ಯವಿಲ್ಲ. ಇದು ಎರಡು ಧರ್ಮಗಳ ನಡುವಿನ ವ್ಯತ್ಯಾಸ ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ವೀರಶೈವರು ಹಿಂದೂಗಳೇ ಅಲ್ಲ ಎಂದರು.

ಹಿಂದೂ ಧರ್ಮಕ್ಕೂ, ವೀರಶೈವ ಧರ್ಮಕ್ಕೂ 18 ವ್ಯತ್ಯಾಸಗಳಿವೆ. ಅವುಗಳನ್ನು ಸಾಕ್ಷ್ಯ ಸಮೇತ ನಿರೂಪಿಸಬಹುದು ಎಂದ ಅವರು, ಹಿಂದೂ ಎಂಬುವುದು ಜೀವನ ವಿಧಾನವಾಗಿದೆ ಎಂದು ಅಭಿಪ್ರಾಯಪಟ್ಟರು.

ವೀರಶೈವರು ಹಾಗೂ ಲಿಂಗಾಯಿತರು ಬೇರೆ ಬೇರೆ ಎಂದು ಕೆಲವರು ಹೇಳುತ್ತಿದ್ದಾರೆ. ಇದು ತಪ್ಪು. ಎರಡೂ ಒಂದೇ. ಈ ಬಗ್ಗೆ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದರು.

ವೀರಶೈವ ಸಮಾಜದಲ್ಲಿರುವ ಉಪಪಂಗಡಗಳನ್ನು ಒಂದುಗೂಡಿಸುವ ಕೆಲಸ ಮಾಡಬೇಕಾಗಿದೆ. ಸರ್ಕಾರದ ಸವಲತ್ತುಗಳನ್ನು ಪಡೆಯುವ ಉದ್ದೇಶದಿಂದ ಉಪ ಪಂಗಡಗಳನ್ನು ಸಂಘಟಿಸುತ್ತಿದ್ದೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಸರ್ಕಾರದ ಸವಲತ್ತುಗಳನ್ನು ಪಡೆಯುವುದಕ್ಕೆ ಅಡ್ಡಿಪಡಿಸುವುದಿಲ್ಲ ಎಂದ ಅವರು, ವೀರಶೈವರು ಒಗ್ಗಟ್ಟಾದರೆ ಬೇರೆಯವರು ಭಯಪಡುವ ಅವಶ್ಯಕತೆ ಇಲ್ಲ ಎಂದು ಇದೇ ಸಂದರ್ಭದಲ್ಲಿ ತಿಪ್ಪಣ್ಣ ಹೇಳಿದರು.

ಯಡಿಯೂರಪ್ಪ ಅಸಮಾಧಾನ: `ಮೊದಲು ನಿಮ್ಮ ಒಳಗಿನ ಗೊಂದಲಗಳನ್ನು ಪರಿಹರಿಸಿಕೊಳ್ಳಿ; ತದನಂತರ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ಮಾಡೋಣ~ ಎಂದು ಘಟಕ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರೋಕ್ಷವಾಗಿ ತಿಪ್ಪಣ್ಣ ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು.

`ಯಾರಾದರೂ ನಿಮ್ಮ ದೇಶ ಯಾವುದು ಎಂದು ಕೇಳಿದರೇ ಹಿಂದೂಗಳ ದೇಶ ಎಂದು ಹೇಳುತ್ತೇವೆ. ನಾವೆಲ್ಲರೂ ಭಾರತೀಯರು ಎನ್ನುತ್ತೇವೆ. ತುಳಿತಕ್ಕೆ ಒಳಗಾದ ಯಾವುದೇ ಜನಾಂಗದ ವ್ಯಕ್ತಿಯನ್ನು ಮೇಲೆತ್ತಲು ಸಹಕರಿಸಬೇಕಿದೆ~ ಎಂದರು.

`ನನ್ನ ಅಧಿಕಾರ ಅವಧಿಯಲ್ಲಿ ಯಾವುದೇ ಜಾತಿ ನೋಡಲಿಲ್ಲ; ಎಲ್ಲರಿಗೂ ನ್ಯಾಯ ಒದಗಿಸುವ ಮಾದರಿ ರಾಜ್ಯದ ಕನಸು ಕಂಡಿದ್ದೆ~ ಎಂದರು.

ನಿಮ್ಮ ಬೆಂಬಲ ಬೇಕು
ರಾಜ್ಯದಲ್ಲಿ ಮೂರು ಮುಖ್ಯಮಂತ್ರಿಗಳನ್ನು ಬದಲಾಯಿಸಿದ ಶಕ್ತಿ ಯಡಿಯೂರಪ್ಪ ಅವರಿಗಿದೆ. ರಾಜಕೀಯ ಷಡ್ಯಂತ್ರದಿಂದ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು. ಈಗ ಅವರಿಗೊಂದು ಹಠ ಇದೆ. ಅವರ ದೇಶ ಕಟ್ಟುವ ಕೆಲಸಕ್ಕೆ ನಿಮ್ಮ ಬೆಂಬಲ ಬೇಕು ಎಂದು ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಹಾಗೆಯೇ, ಉದ್ಯಮಿ ಎಸ್. ರುದ್ರೇಗೌಡ ಅವರು ಕೈಗಾರಿಕೋದ್ಯಮಿಯಾಗಿ ಹಾಗೂ ಲೋಕಸೇವಾ ಆಯೋಗದ ಸದಸ್ಯರಾಗಿ ಮಾಡಿದ ಕೆಲಸಗಳನ್ನು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಇಬ್ಬರು ವಿಶೇಷವಾಗಿ ಪ್ರಶಂಸಿಸಿದರು.

ಸುದೀರ್ಘ ಕಾರ್ಯಕ್ರಮ: ಆಕ್ಷೇಪ
ಕಾರ್ಯಕ್ರಮ ಸುದೀರ್ಘವಾಗಿ ನಡೆದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, `ಸಮಾಜ ಬಾಂಧವರು ದಾಕ್ಷಿಣ್ಯದಿಂದ ಹೊರ ಬರಬೇಕು. ಎಲ್ಲರಿಗೂ ಒಂದೇ ದಿವಸ ಸನ್ಮಾನ ಮಾಡಬೇಕೆಂಬುದು ಶಿಸ್ತಲ್ಲ~. ಅದಕ್ಕೂ ಮೊದಲು ಮಾತನಾಡಿದ ಯಡಿಯೂರಪ್ಪ ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, `ಸಮಾಜದ ಹಿರಿಯೊಬ್ಬರಿಗೆ ಸನ್ಮಾನ ಮಾಡಿದರೆ, ಎಲ್ಲರಿಗೂ ಮಾಡಿದಂತೆ. ಅದನ್ನು ಸಮಾಜ ಬಾಂಧವರು ತಿಳಿದುಕೊಳ್ಳಬೇಕು~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT