ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಾ, ಸಿಂಧು ಪೋಷಕರಿಗೆ ಅವಕಾಶ

Last Updated 26 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ತೆರಳಲಿರುವ 219 ಅಥ್ಲೀಟ್‌ಗಳು ಸೇರಿದಂತೆ 325 ಸದಸ್ಯರ ತಂಡಕ್ಕೆ ಕ್ರೀಡಾ ಸಚಿವಾಲಯ ಮಂಗಳವಾರ ಹಸಿರು ನಿಶಾನೆ ನೀಡಿದೆ. ಇದರಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ ಸಿಂಧು ಅವರ ಪೋಷಕರೂ ಇದ್ದಾರೆ.

54 ಕೋಚ್‌ಗಳು, 16 ವೈದ್ಯರು ಹಾಗೂ 19 ಇತರೆ ಅಧಿಕಾರಿಗಳಿಗೆ ಪ್ರಯಾಣ ಮಾಡಲು ಅವಕಾಶ ಸಿಕ್ಕಿದೆ. ಆದರೆ ಭಾರತ ಒಲಿಂಪಿಕ್ ಸಂಸ್ಥೆಯ ಇಬ್ಬರು ಸಿಬ್ಬಂದಿಯನ್ನು ಪಟ್ಟಿಯಿಂದ ಕೈಬಿಡಲಾಗಿದೆ.

ಸಿಂಧು ಅವರ ತಾಯಿ ವಿಜಯಾ ಹಾಗೂ ಸೈನಾ ತಂದೆ ಹರವೀರ್ ಸಿಂಗ್ ಅವರಿಗೆ 15 ಇತರೆ ಅಧಿಕಾರಿಗಳು ಅಥವಾ ಕ್ರೀಡಾಪಟುಗಳಲ್ಲದವರ ಪಟ್ಟಿಯಲ್ಲಿ ಪ್ರಯಾಣ ಮಾಡಲು ಅವಕಾಶ ಸಿಕ್ಕಿದೆ.

7 ವ್ಯವಸ್ಥಾಪಕರ ಪಟ್ಟಿಗೆ ಸಚಿವಾಲಯ ಹಸಿರು ನಿಶಾನೆ ತೋರಿದೆ. ಆದರೆ ಅವರು ಸರ್ಕಾರದ ಹಣದಲ್ಲಿ ಪ್ರಯಾಣ ಮಾಡುತ್ತಿಲ್ಲ. ಅವರು ಫೆಡರೇಷನ್‌ಗಳ ಖರ್ಚಿನಲ್ಲಿ ತೆರಳಬೇಕಾಗಿದೆ.

221 ಅಥ್ಲೀಟ್‌ಗಳ ಹೆಸರು ಪಟ್ಟಿಯಲ್ಲಿ ಇತ್ತು. ಆದರೆ ಅನಾರೋಗ್ಯಕ್ಕೆ ಒಳಗಾಗಿರುವ ಲಾಂಗ್‌ಜಂಪ್ ಸ್ಪರ್ಧಿ ಎಮ್‌.ಶ್ರೀಶಂಕರ್ ಹಾಗೂ ಅತ್ಯಾಚಾರ ಪ್ರಕರಣದಿಂದಾಗಿ ಅಮಾನತು ಶಿಕ್ಷೆಗೆ ಒಳಗಾಗಿರುವ ಟೇಬಲ್ ಟೆನಿಸ್ ಆಟಗಾರ ಸೌಮ್ಯಜಿತ್ ಘೋಷ್ ಹೆಸರನ್ನು ಕೈಬಿಡಲಾಗಿದೆ.

‘ಸಹಾಯಕ ಸಿಬ್ಬಂದಿ ಕಾಮನ್‌ವೆಲ್ತ್ ಕೂಟದಲ್ಲಿ ಪಾಲ್ಗೊಳ್ಳಲಿರುವ ಅಥ್ಲೀಟ್‌ಗಳ ಏಳಿಗೆ ಹಾಗೂ ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬೇಕು’ ಎಂದು ಸಚಿವಾಲಯ ಹೇಳಿದೆ.

ಕಾಮನ್‌ವೆಲ್ತ್ ಕೂಟದಲ್ಲಿ ಪಾಲ್ಗೊಳ್ಳುವ ಹಾಕಿ ತಂಡದಲ್ಲಿ ಒಟ್ಟು 36 ಸ್ಪರ್ಧಿಗಳು ಇದ್ದಾರೆ. ಅಥ್ಲೆಟಿಕ್ಸ್‌ನಲ್ಲಿ 31 ಹಾಗೂ ಶೂಟಿಂಗ್‌ನಲ್ಲಿ 27 ಸ್ಪರ್ಧಿಗಳು ಇದ್ದಾರೆ.

ರಾಜ್ಯದ ವಿಜಯಕುಮಾರಿಗೆ ಸ್ಥಾನ: ಕರ್ನಾಟಕದ ಅಥ್ಲೀಟ್ ವಿಜಯಕುಮಾರಿ ಅವರ ಹೆಸರನ್ನು ತಡವಾಗಿ ಪಟ್ಟಿಯಲ್ಲಿ ಸೇರಿಸಿದ್ದರೂ ಸಚಿವಾಲಯ ಒಪ್ಪಿಗೆ ಸೂಚಿಸಿದೆ.

ರೋನಕ್‌ಗೆ ಅವಕಾಶ: ಶೂಟಿಂಗ್ ಕೋಚ್ ರೋನಕ್ ಪಂಡಿತ್‌ ಅವರು ಕಾಮನ್‌ವೆಲ್ತ್ ಕೂಟದ ತಂಡದೊಂದಿಗೆ ಪ್ರಯಾಣ ಮಾಡಲಿದ್ದಾರೆ. ಕ್ರೀಡಾ ಸಚಿವಾಲಯ ಸೋಮವಾರ ಅಂತಿಮಗೊಳಿಸಿರುವ ಪಟ್ಟಿಯಲ್ಲಿ ಅವರಿಗೆ ಅವಕಾಶ ನೀಡಿದೆ.

ಶೂಟರ್‌ ಹೀನಾ ಸಿಧು ಅವರ ಪತಿ ಹಾಗೂ ಶೂಟಿಂಗ್‌ ತಂಡದ ಕೋಚ್ ಕೂಡ ಆಗಿರುವ ರೋನಕ್ ಅವರ ಹೆಸರನ್ನು ಕೈಬಿಟ್ಟಿದ್ದ ಸಚಿವಾಲಯದ ಕ್ರಮವನ್ನು ಭಾರತ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್‌ (ಎನ್‌ಆರ್‌ಎಐ) ಟೀಕಿಸಿತ್ತು. ಭಾರತ ಒಲಿಂಪಿಕ್‌ ಅಸೋಸಿಯೇಷನ್ ಕಳಿಸಿದ್ದ ಪಟ್ಟಿಯಲ್ಲಿ 21 ಅಧಿಕಾರಿಗಳ ಹೆಸರನ್ನು ಕ್ರೀಡಾ ಸಚಿವಾಲಯ ಇತ್ತೀಚೆಗೆ ಕೈಬಿಟ್ಟಿತ್ತು.

ಕಾಮನ್‌ವೆಲ್ತ್ ಕೂಟ ಏಪ್ರಿಲ್‌ 5ರಿಂದ ಗೋಲ್ಡ್‌ಕೋಸ್ಟ್‌ನಲ್ಲಿ ಆರಂಭವಾಗಲಿದೆ.

ಚಿನ್ನದ ಕಸನು: ಹೀನಾ
‘ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನ ಗೆಲ್ಲುವ ಕನಸಿದೆ. ನನ್ನ ಪ್ರಮುಖ ಗುರಿ ವಿಶ್ವ ಚಾಂಪಿಯನ್‌ಷಿಪ್‌. ಆದ್ದರಿಂದ ಇಲ್ಲಿ ಪದಕ ಗೆದ್ದರೆ ನನ್ನ ಹಾದಿ ಸುಗಮವಾಗಲಿದೆ’ ಎಂದು ಶೂಟರ್‌ ಹೀನಾ ಸಿಧು ಹೇಳಿದ್ದಾರೆ.

‘ಕಾಮನ್‌ವೆಲ್ತ್ ಹಾಗೂ ಏಷ್ಯನ್ ಕ್ರೀಡಾಕೂಟದಲ್ಲಿ ಉತ್ತಮ ಸಾಮರ್ಥ್ಯ ಒಡ್ಡಿದರೆ ಒಲಿಂಪಿಕ್ಸ್‌ ಮತ್ತು ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆಲ್ಲುವ ವಿಶ್ವಾಸ ಹೆಚ್ಚಲಿದೆ’ ಎಂದು ಪಿಸ್ತೂಲ್ ಶೂಟರ್‌ ಹೀನಾ ಹೇಳಿದ್ದಾರೆ. 52ನೇ ವಿಶ್ವಚಾಂಪಿಯನ್‌ಷಿಪ್‌ ಆಗಸ್ಟ್‌ 31ರಿಂದ ಸೆಪ್ಟೆಂಬರ್‌ 15ರವರೆಗೆ ಕೊರಿಯಾದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT