ದೇಹವೆಂಬ ಅತ್ಯದ್ಭುತ ಯಂತ್ರ

7

ದೇಹವೆಂಬ ಅತ್ಯದ್ಭುತ ಯಂತ್ರ

Published:
Updated:

ನಾವು ನಮ್ಮ ದೇಹದ ಕಡೆಗೆ ಒಮ್ಮೆ ನೋಡಬೇಕು. ಅದೊಂದು ವಿಸ್ಮಯ, ಅತ್ಯದ್ಭುತವಾದ ರಚನೆ. ನೂರು ವರ್ಷ ನಿರಂತರವಾಗಿ ಬಾಳಬಲ್ಲ ನಿಸರ್ಗ ನಿರ್ಮಿತ ಯಂತ್ರ. ಒಂದು ಕ್ಷಣವೂ ವಿಶ್ರಮಿಸದೆ, ದುಡಿಯುವ ಹೃದಯ, ಎತ್ತರೆತ್ತರದ ಬೆಟ್ಟಗಳನ್ನು ಏರಬಲ್ಲ ಕಾಲುಗಳು, ಹತ್ತು ಬೆರಳುಗಳ ಕುಶಲ ಕೈಗಳು... ಒಂದೇ ಎರಡೇ.. ದೇಹ ಹೊಂದಿರುವ ಅಂಗಗಳ ಸಂಖ್ಯೆ ಅಪಾರ. ಇಂಥ ಸದೃಢ-, ಸಮರ್ಥ ಅಂಗಗಳನ್ನು ಜೋಡಿಸಿ ನಿರ್ಮಿಸಿದ ಈ ಯಂತ್ರವನ್ನು ದೇವರು ನಮಗೆ ಕಾಣಿಕೆಯಾಗಿ ನೀಡಿದ್ದಾನೆ. ಅದಕ್ಕಾಗಿ ನಾವು ಜೀವನಪೂರ್ತಿ ಅವನಿಗೆ ಕೃತಜ್ಞರಾಗಿರಬೇಕು.

ನಾಲಿಗೆ ನಮ್ಮ ದೇಹದ ಶಕ್ತಿಶಾಲಿ ಅಂಗ. ಅದನ್ನು ಬಳಸಿ ನಗಿಸಲೂ ಸಾಧ್ಯ, ಅಳಿಸಲೂ ಸಾಧ್ಯ. ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ. ಸುಖಕ್ಕೂ–ದುಃಖಕ್ಕೂ; ಪ್ರೀತಿಗೂ-ದ್ವೇಷಕ್ಕೂ ನಾಲಿಗೆಯೇ ಕಾರಣ. ಯಾವ ಮಾತು ನಮ್ಮನ್ನು ಕಾಪಾಡುತ್ತದೋ, ಇತರರಿಗೆ ಸಾಂತ್ವನ-ಸಮಾಧಾನ ನೀಡುತ್ತದೋ, ಅಂಥ ಮಾತೇ ಮಂತ್ರ. ನಮ್ಮ ಎಲ್ಲ ಮಾತುಗಳು ಮಂತ್ರಗಳಾಗಬೇಕು. ಮಾತು ಸತ್ಯವಾಗಿರಬೇಕು. ಅಷ್ಟೇ ಅಲ್ಲ, ಅದು ಮೃದುವಾಗಿರಬೇಕು ಹಾಗೂ ಮಧುರವಾಗಿರಬೇಕು. ನಮ್ಮಲ್ಲಿ ಭಾರಿ ಬೆಲೆಯ ಎಂಥ ವಾಹನವಿದ್ದರೂ; ಅದು ನಮ್ಮ ಕಾಲಿನ ಸ್ಥಾನವನ್ನು ತುಂಬಲಾರದು. ಕಾಲನ್ನು ನಡೆಯಲು ಬಳಸಬೇಕು, ಯಾರನ್ನೋ ಒದೆಯಲು ಅಲ್ಲ ಎಂಬುದನ್ನು ಅರಿತಿರಬೇಕು.

ಭಗವಂತ ಅಪ್ರತಿಮ ಕಲೆಗಾರ-ವಿಶ್ವ ಶಿಲ್ಪಿ. ನಾವೂ ಚಿತ್ರಗಳನ್ನು, ಶಿಲಾ ಮೂರ್ತಿಗಳನ್ನು ರಚಿಸುತ್ತೇವೆ. ಅವೂ ಮನಮೋಹಕವಾಗಿರುತ್ತವೆ. ಸುಂದರವಾಗಿರುತ್ತವೆ. ಆದರೆ ಅವುಗಳಗೆ ಜೀವ ಇರುವುದಿಲ್ಲ. ನಮ್ಮ ಕಲಾಕೃತಿಗಳಿಗೆ ಮುಖಗಳಿರುತ್ತವೆ, ಆದರೆ ಅವು ಮಾತನಾಡುವುದಿಲ್ಲ. ಕೈಗಳಿರುತ್ತವೆ ಅವು ಹಿಡಿಯುವುದಿಲ್ಲ. ಕಣ್ಣು-ಕಿವಿಗಳಿರುತ್ತವೆ. ಅವು ನೋಡುವುದಿಲ್ಲ-ಕೇಳುವುದಿಲ್ಲ. ಪ್ರಕೃತಿಯಲ್ಲಿನ ಹೂ-ಹಣ್ಣುಗಳಿಗೆ ರೂಪ-ರಸ-ಪರಿಮಳ ಎಲ್ಲವೂ ಇರುತ್ತವೆ. ನಮ್ಮ ಕಲಾಕೃತಿಗಳಿಗೆ ಹೂ-ಹಣ್ಣುಗಳ ರೂಪ ಮಾತ್ರ ಇರುತ್ತದೆ. ಅವುಗಳಿಗೆ ಹುಳಿ-ಸಿಹಿ ರಸ ತುಂಬುವ ಶಕ್ತಿ ನಮಗಿಲ್ಲ. ನಮ್ಮದೇನಿದ್ದರೂ ಕೃತಿಯಲ್ಲ, ಅದು ಕೇವಲ ಪ್ರತಿಕೃತಿ.
 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !