ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರು ಮಕ್ಕಳ ಭವಿಷ್ಯ ಉಜ್ವಲಗೊಳಿಸಬೇಕು

ಶಾಸಕ ಬಿ.ನಾರಾಯಣರಾವ್ ಸಮಾವೇಶದಲ್ಲಿ ಸಲಹೆ
Last Updated 1 ಜುಲೈ 2018, 11:36 IST
ಅಕ್ಷರ ಗಾತ್ರ

ಬಸವಕಲ್ಯಾಣ: `ಶಿಕ್ಷಕರು ಜವಾಬ್ದಾರಿ ಅರಿತುಕೊಂಡು ಕೆಲಸ ನಿರ್ವಹಿಸಿ ಮಕ್ಕಳ ಭವಿಷ್ಯ ಉಜ್ವಲಗೊಳಿಸಬೇಕು' ಎಂದು ಶಾಸಕ ಬಿ.ನಾರಾಯಣರಾವ್ ಹೇಳಿದರು.

ಬಸವಕಲ್ಯಾಣದಲ್ಲಿ ಶನಿವಾರ ಶಿಕ್ಷಣ ಇಲಾಖೆ ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಆಯೋಜಿಸಿದ್ದ ಶಿಕ್ಷಕರ ಸಮಾವೇಶ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. `ಸರ್ಕಾರಿ ಶಾಲೆಗಳಲ್ಲಿ ಬಡವರ ಮಕ್ಕಳು ಇರುತ್ತಾರೆ. ಅವರನ್ನು ಕಡೆಗಣಿಸುವುದು ಸರಿಯಲ್ಲ. ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ್ದರಿಂದ ಯಾವುದೇ ಮಗು ಶಾಲೆಯಿಂದ ಹೊರಗೆ ಉಳಿಯದಂತೆ ಕಾಳಜಿ ವಹಿಸಬೇಕು. ಶಿಕ್ಷಕರು ನಿಯಮಿತವಾಗಿ ಶಾಲೆಯಲ್ಲಿ ಹಾಜರಿದ್ದು ಕರ್ತವ್ಯ ನಿರ್ವಹಿಸಬೇಕು. ನಾನು ರಾಜ್ಯ ಸಾಕ್ಷರತಾ ಮಿಷನ್ ಅಧ್ಯಕ್ಷನಾಗಿ ಕೆಲಸ ನಿರ್ವಹಿಸಿದ್ದರಿಂದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯಿದೆ. ಇತರೆ ಇಲಾಖೆಗಳಕ್ಕಿಂತ ಶಿಕ್ಷಣ ಇಲಾಖೆಯಲ್ಲಿ ಸುಧಾರಣೆ ತರುವುದು ನನ್ನ ಆದ್ಯತೆ' ಎಂದರು.

`ಗುರುಭವನದ ಕಾಮಗಾರಿಯನ್ನು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು. ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಗ್ರಾಮೀಣ ಭಾಗದ ಶಾಲೆಗಳಿಗೆ ಸಮಯಕ್ಕೆ ಹೊಗುವಂತಾಗಲು ಬಸ್ ವ್ಯವಸ್ಥೆ ಕಲ್ಪಿಸಲು ಸಂಬಂಧಿತ ಅಧಿಕಾರಿಗಳಿಗೆ ಕೇಳಿಕೊಂಡಿದ್ದೇನೆ. ಗ್ರಾಮೀಣ ಭಾಗದ ರಸ್ತೆ ಸುಧಾರಣೆ ಕಾರ್ಯ ಶೀಘ್ರ ನಡೆಯಲಿದೆ. ನಾಲ್ಕು ತಿಂಗಳಲ್ಲಿ ಇಲ್ಲಿನ ಅನುಭವ ಮಂಟಪದ ಅಡಿಗಲ್ಲು ಇಡುವುದಕ್ಕಾಗಿ ರಾಷ್ಟ್ರಪತಿಗಳನ್ನು ಆಹ್ವಾನಿಸಲಾಗುವುದು. ಆದ್ದರಿಂದ ಅದಕ್ಕಿಂತ ಮೊದಲು ಪಟ್ಟಣದಲ್ಲಿನ ರಸ್ತೆಗಳ ಡಾಂಬರೀಕರಣ ನಡೆಯಲಿದೆ' ಎಂದೂ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ನಾಗರಾಜ ಮಾತನಾಡಿ, `ಶಿಕ್ಷಕರು ಸರ್ಕಾರದ ಸೌಲಭ್ಯ ಪ್ರತಿ ಮಗುವಿಗೆ ಮುಟ್ಟಿಸಬೇಕು. ಕರ್ತವ್ಯ ಪಾಲನೆಯಲ್ಲಿ ಲೋಪ ಸಲ್ಲದು' ಎಂದು ಎಚ್ಚರಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನೀಲಕಂಠ ರಾಠೋಡ, ಶಿಕ್ಷಕರ ಸಂಘದ ಕಾರ್ಯದರ್ಶಿ ಚಿದಂಬರ ಶೇಖರ, ಶಿಕ್ಷಣ ಸಂಯೋಜಕ ರವಿ ಬಿರಾದಾರ ಮಾತನಾಡಿದರು.

ಶಿಕ್ಷಕರ ಸಂಘದ ಅಧ್ಯಕ್ಷ ದಿಲೀಪ ಸಾಗಾವೆ ನೇತೃತ್ವದಲ್ಲಿ ಶಾಸಕರಿಗೆ ಮನವಿಪತ್ರ ಸಲ್ಲಿಸಿ ಗುರುಭವನ ನಿರ್ಮಿಸಲು ಅನುದಾನ ಒದಗಿಸಬೇಕು. ಹೊಸದಾಗಿ ನೇಮಕಾತಿ ಆದವರಿಗೂ ಪಿಂಚಣಿ ದೊರಕುವಂತೆ ಮತ್ತು ಟಿಜಿಟಿ ಶಿಕ್ಷಕರ ಪಿಪಿ ಬಿಡುಗಡೆ ಆಗುವಂತೆ ಮತ್ತು ಕೃಪಾಂಕ ಆಧಾರಿತ ಶಿಕ್ಷಕರ ಹೆಚ್ಚುವರಿ ಬಿಲ್ ಪಾವತಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಯಶೋದಾ ರಾಠೋಡ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಪಿ.ಬಿರಾದಾರ, ನಗರಸಭೆ ಅಧ್ಯಕ್ಷ ಅಜರಅಲಿ ನವರಂಗ, ಸದಸ್ಯ ರವಿ ಗಾಯಕವಾಡ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯೋಗರಾಜ ಕಹಳೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅಂಬಣ್ಣ ಘಾಂಗ್ರೆ, ಅಶೋಕ ರಾಯಪಳ್ಳೆ, ಸಮನ್ವಯಾಧಿಕಾರಿ ಅಂಬಾದಾಸ ಜಮಾದಾರ, ಶಿಕ್ಷಣ ಸಂಯೋಜಕರಾದ ತುಕಾರಾಮ ರೊಡ್ಡೆ, ಪ್ರಕಾಶ ಘೊರವಾಡೆ, ಶ್ರೀನಿವಾಸ ಮೇತ್ರೆ, ಚಂದ್ರಕಾಂತ ಕಿವಡೆ, ಸಂಜೀವ ನಡುಕರ್, ಕಿಶನಬಾವಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT