ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್‌ಗೆ ಮೂಲ ಸೌಕರ್ಯ ಒದಗಿಸಲು ಸೂಚನೆ

Last Updated 1 ಮಾರ್ಚ್ 2019, 11:39 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಎಲ್ಲ ವಿದ್ಯಾರ್ಥಿನಿಲಯಗಳಲ್ಲಿ ಮೂಲ ಸೌಕರ್ಯಗಳ ವಿಸ್ತರಣೆಗೆ ಅವಶ್ಯವಾದ ಅನುದಾನದ ಕುರಿತು ಅಂದಾಜು ಪಟ್ಟಿ ಸಲ್ಲಿಸುವಂತೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜು ಅವರು ನಿಲಯಪಾಲಕರಿಗೆ ಸೂಚಿಸಿದರು.

ನಗರದ ವಿವೇಕಾನಂದನಗರ ಬಡಾವಣೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಶುಕ್ರವಾರ ವಿದ್ಯಾರ್ಥಿನಿಲಯಗಳ ವಾರ್ಡನ್‌ಗಳ ಜೊತೆ ಅವರು ಸಭೆ ನಡೆಸಿದರು. ‘ತಾಲ್ಲೂಕಿನ ಬಹುತೇಕ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಪರಿಶೀಲಿಸಿದ್ದೇನೆ. ಕೆಲವೆಡೆ ಉತ್ತಮ ವ್ಯವಸ್ಥೆ ಇದ್ದರೆ ಇನ್ನೂ ಕೆಲವಡೆ ಸ್ವಚ್ಛತೆ ಹಾಗೂ ಊಟೋಪಚಾರದ ಕುರಿತು ದೂರುಗಳಿವೆ. ವಿದ್ಯಾರ್ಥಿಗಳಿಗೆ ಅವಶ್ಯವಾದ ಸೌಕರ್ಯಗಳ ವಿಸ್ತರಣೆಗೆ ನಿಲಯಪಾಲಕರು ಆದ್ಯತೆ ನೀಡಬೇಕು’ ಎಂದು ಸೂಚಿಸಿದರು.

‘ಹಾಸ್ಟೆಲ್‌ಗೆ ಭೇಟಿ ನೀಡಿದ ಸಂದರ್ಭ ವಿದ್ಯಾರ್ಥಿಗಳಿಂದ ದೂರುಗಳು ಕೇಳಿಬರಬಾರದು. ಮೆನು ಪ್ರಕಾರ ಗುಣಮಟ್ಟದ ಆಹಾರ ನೀಡಬೇಕು’ ಎಂದು ತಿಳಿಸಿದರು.

ಕೆಲವು ವಾರ್ಡನ್‌ಗಳು ತಮ್ಮ ಹಾಸ್ಟೆಲ್‌ಗಳಲ್ಲಿನ ಕುಂದುಕೊರತೆಗಳ ಬಗ್ಗೆ ಮಾಹಿತಿ ನೀಡಿದರು. ಹಾಸಿಗೆ, ತಟ್ಟೆ, ಲೋಟ, ಶೌಚಾಲಯ ಸಮಸ್ಯೆ, ರಸ್ತೆ ಮಾರ್ಗ ಸೇರಿದಂತೆ ನಾನಾ ಅಗತ್ಯತೆಗಳ ಕುರಿತು ಅಧ್ಯಕ್ಷರ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ನಟರಾಜು ‘ಶೀಘ್ರ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ನೀಡಿ. ಇಲಾಖೆ ಅನುದಾನಗಳನ್ನು ಸಮಪರ್ಕವಾಗಿ ಬಳಸಿಕೊಳ್ಳಿ. ಹೆಚ್ಚುವರಿ ಹಣ ಅಗತ್ಯವಿದ್ದರೆ ವಿವಿಧ ಅನುದಾನಗಳಿಂದ ಕ್ರೋಢೀಕರಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದರು.

‘ಕಟ್ಟಡ ದುರಸ್ತಿ ಸೇರಿದಂತೆ ಹೆಚ್ಚಿನ ಅನುದಾನ ಬಯಸುವ ಕಾಮಗಾರಿಗಳಿದ್ದರೆ ಮಾಹಿತಿ ನೀಡಿ. ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಅವರೊಂದಿಗೆ ಮಾತುಕತೆ ನಡೆಸಿ ಅನುದಾನ ದೊರಕಿಸುತ್ತೇವೆ’ ಎಂದು ಭರವಸೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಕಚೇರಿ ವ್ಯವಸ್ಥಾಪಕ ಸತೀಶ್, ಸಹಾಯಕ ನಿರ್ದೇಶಕ ಚನ್ನಬಸಪ್ಪ, ನಿಲಯಪಾಲಕರಾದ ಶಿವಪುತ್ರ, ತಿಮ್ಮೇಗೌಡ, ಶೋಭಾರಾಣಿ, ಚಂದ್ರಕಲಾ, ಜರೀನ ಬೇಗಂ, ಮುನಿಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT