ಚರ್ಮ, ಲೈಂಗಿಕ ರೋಗಗಳ ಬಗ್ಗೆ ತಪ್ಪು ಕಲ್ಪನೆ

7
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದಲ್ಲಿ ಶುಶ್ರೂಷಕಿಯರಿಗೆ ತರಬೇತಿ

ಚರ್ಮ, ಲೈಂಗಿಕ ರೋಗಗಳ ಬಗ್ಗೆ ತಪ್ಪು ಕಲ್ಪನೆ

Published:
Updated:
Deccan Herald

ರಾಮನಗರ : ಚರ್ಮ ಮತ್ತು ಲೈಂಗಿಕ ರೋಗಗಳು ವಾಸಿಯಾಗುವುದಿಲ್ಲ ಎಂಬ ತಪ್ಪು ಅಭಿಪ್ರಾಯ ಹೆಚ್ಚಿನ ಜನರಲ್ಲಿದೆ ಎಂದು ಜಿಲ್ಲಾಸ್ಪತ್ರೆಯ ಚರ್ಮ ರೋಗ ತಜ್ಞ ಡಾ.ಬಿ.ಸಿ. ಅನಿಲ್‌ಕುಮಾರ್ ಹೇಳಿದರು.

ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದಲ್ಲಿ ‘ಶುಶ್ರೂಷಕಿಯರಿಗೆ ಲೈಂಗಿಕ ರೋಗ, ಚರ್ಮ ರೋಗ ಕುರಿತು ನಡೆದ ತರಬೇತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶೂಶ್ರಷಕಿಯರು ಪ್ರಮುಖ ಪಾತ್ರ ವಹಿಸಬೇಕು. ಏಕೆಂದರೆ ರೋಗಿಗಳು ಶುಶ್ರೂಷಕಿಯರ ಬಳಿ ತಮಗಿರುವ ರೋಗದ ಬಗ್ಗೆ ಹೇಳಿಕೊಳ್ಳುತ್ತಾರೆ, ಆದರೆ ವೈದ್ಯರ ಹತ್ತಿರ ಮುಚ್ಚಿಡುತ್ತಾರೆ ಎಂದರು.

ಸಮಾಜದಲ್ಲಿ ಲೈಂಗಿಕ ರೋಗಿಗಳನ್ನು ಕೀಳಾಗಿ ಕಾಣಬಾರದು. ಲೈಂಗಿಕ ರೋಗ ಪೀಡಿತರು ಚಿಕಿತ್ಸೆಗೆ ಬಂದಾಗ ಅವರಿಗೆ ಇನ್ನಷ್ಟು ಅಪಾಯಕಾರಿ ಲೈಂಗಿಕ ಚಟುವಟಿಕೆಗಳಲ್ಲಿ ನಿರತರಾಗದಂತೆ ಎಚ್ಚರಿಕೆ, ಅರಿವು ಮೂಡಿಸಬೇಕು ಎಂದು ಅವರು ಹೇಳಿದರು.‌

ಲೈಂಗಿಕ ಸೋಂಕುಗಳ ನಿಯಂತ್ರಣದಲ್ಲಿ ತೊಂದರೆಯನ್ನು ಆರಂಭದ ಹಂತದಲ್ಲೇ ಗುರುತಿಸುವುದು ಬಹಳ ಮುಖ್ಯ. ಇಂಥ ರೋಗದ ಲಕ್ಷಣಗಳು, ರೋಗ ಲಕ್ಷಣಗಳಿಲ್ಲದ ಸೋಂಕು ವಾಹಕ ವ್ಯಕ್ತಿಗಳ ಬಗ್ಗೆ ಅರಿವು ಸಮಾಜದಲ್ಲಿ ತಳಮಟ್ಟದ ತನಕವೂ ತಲುಪಬೇಕಾದ್ದು ಅಗತ್ಯ ಎಂದರು.

ಒಳ್ಳೆಯ ಲೈಂಗಿಕ ರೋಗ ಚಿಕಿತ್ಸಾ ಕೇಂದ್ರದಲ್ಲಿ ಸೂಕ್ತ ಸಲಹೆ, ತಪಾಸಣೆ, ಚಿಕಿತ್ಸೆ ಮತ್ತು ರೋಗ ವಾಹಕ ಮೂಲಗಳ ಪ್ರತ್ಯೇಕ ವ್ಯವಸ್ಥೆ ಅಗತ್ಯವಿರುತ್ತದೆ. ಜತೆಗೆ ರೋಗಿಗಳ ಗೌಪ್ಯತೆ ಕಾಪಾಡುವುದು, ಸ್ತ್ರೀ ರೋಗಿಗಳ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದರು.

ಲೈಂಗಿಕ ರೋಗಗಳ ನಿಯಂತ್ರಣ ಕಾರ್ಯಕ್ರಮಗಳಲ್ಲಿ ಸರ್ಕಾರದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಡಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಲ್ಲಿನ ಆರೋಗ್ಯ ಮಾರ್ಗದರ್ಶಿಗಳು, ಆರೋಗ್ಯ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸಬೇಕು ಎಂದು ತಿಳಿಸಿದರು.

ಹೆಚ್ಚಾಗಿ ಲೈಂಗಿಕ ರೋಗಿಗಳು ಹಳ್ಳಿ ಮದ್ದು ಕೊಡುವವರು, ಪಂಡಿತರು, ಔಷಧಿ ಮಾರಾಟಗಾರರನ್ನು ಮೊದಲು ಸಂಪರ್ಕಿಸಿ, ಚಿಕಿತ್ಸೆ ಪಡೆಯುತ್ತಾರೆ. ಹಾಗಾಗಿ ಅವರನ್ನು ಲೈಂಗಿಕ ರೋಗ ನಿಯಂತ್ರಣದಲ್ಲಿ ಸಕ್ರಿಯ ಪಾತ್ರ ವಹಿಸುವಂತೆ ಮಾಡಿ, ಸಮಗ್ರವಾದ ಕಾರ್ಯಕ್ರಮವೊಂದನ್ನು ರೂಪಿಸಬೇಕು ಎಂದರು.

ಸಾಂಪ್ರದಾಯಿಕ ಕುಟುಂಬಗಳಲ್ಲಿ ಇಂದೂ ಲೈಂಗಿಕ ವಿಚಾರಗಳ ಬಗ್ಗೆ ಬಹಿರಂಗ ಚರ್ಚೆ ನಡೆಯುವುದಿಲ್ಲ. ಈ ಭೇದವನ್ನು ತೊರೆದು, ಮುಕ್ತ ಚರ್ಚೆಗಳು ಕುಟುಂಬದೊಳಗೆ ನಡೆಯಬೇಕು. ಮಕ್ಕಳಿಗೆ ಪ್ರಜನನ ವ್ಯವಸ್ಥೆಯ ಬಗ್ಗೆ, ಆರೋಗ್ಯಕರ ಲೈಂಗಿಕ ಬದುಕಿನ ಬಗ್ಗೆ ಮಾಹಿತಿಗಳು ಎಳೆ ವಯಸ್ಸಿನಲ್ಲೇ ದೊರೆಯುವಂತಾಗಬೇಕು ಎಂದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !