ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ-ಆಗುಂಬೆ ಮಾರ್ಗ: 93 ಮರಗಳ ಕಡಿತಲೆಗೆ ಒಪ್ಪಿಗೆ

ನೆರಳು ನೀಡಿದ ಮರಗಳು ಇನ್ನು ನೆನಪು ಮಾತ್ರ
Last Updated 9 ಮೇ 2019, 20:08 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಪಶ್ಚಿಮ ಘಟ್ಟ ಪ್ರದೇಶದ ಅತಿ ಸೂಕ್ಷ್ಮ ಜೀವವೈವಿಧ್ಯ ಪ್ರದೇಶದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಗೆ ಸರ್ಕಾರ 4 ವರ್ಷಗಳ ಹಿಂದೆ ನೀಲನಕ್ಷೆ ಸಿದ್ಧಪಡಿಸಿದ್ದು ಈಗ ಕಾಮಗಾರಿ ನಡೆಯುತ್ತಿದೆ.

ನೂರಾರು ವರ್ಷಗಳಿಂದ ನೆರಳು ನೀಡಿ ಪಶು–ಪಕ್ಷಿಗಳಿಗೆ ಆಹಾರ ಉಣ್ಣಿಸಿದ್ದ ಸಾಲು ಧೂಪ, ಹಲಸು, ನೇರಲೆ, ಹೆಬ್ಬಲಸು, ನಾಯಿಹಲಸು ಸೇರಿದಂತೆ ರಸ್ತೆಗೆ ಹೊಂದಿಕೊಂಡಿರುವ ಮರಗಳನ್ನು ತೆರವುಗೊಳಿಸಲು ಸಿದ್ಧತೆ ನಡೆಸಲಾಗಿದೆ.

ಶಿವಮೊಗ್ಗ-ಉಡುಪಿ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 169(ಎ) ಮಾರ್ಗದ ತೀರ್ಥಹಳ್ಳಿ ಪಟ್ಟಣದ ಬಾಳೇಬೈಲಿನಿಂದ ಮೇಗರವಳ್ಳಿಯವರೆಗಿನ 13.98 ಕಿ.ಮೀ. ಉದ್ದದ ಹೆದ್ದಾರಿ ವಿಸ್ತರಣೆ ಕಾಮಗಾರಿಗಾಗಿ ರಸ್ತೆಯಂಚಿನ ಬೃಹತ್ ಗಾತ್ರದ ಮರಗಳನ್ನು ನೆಲಕ್ಕುರುಳಿಸುವ ಕಸರತ್ತಿಗೆ ಚಾಲನೆ ದೊರೆತಿದೆ.

ಬುಧವಾರ ಸಾರ್ವಜನಿಕರ ಸಮ್ಮುಖದಲ್ಲಿ ಮರಗಳನ್ನು ಕಡಿತಲೆಗೆ ಗುರುತಿಸಲಾಗಿದೆ. ನೂರಾರು ವರ್ಷಗಳ ಇತಿಹಾಸವಿರುವ ಮರಗಳು ರಸ್ತೆ ವಿಸ್ತರಣೆ ಕಾಮಗಾರಿಗೆ ಬಲಯಾಗುವುದು ಬಹುತೇಕ ಖಚಿತಗೊಂಡಿದೆ. ಅರಣ್ಯ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು, ಪರಿಸರ ಆಸಕ್ತರು, ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ಸಮೀಕ್ಷೆ ಕಾರ್ಯದಲ್ಲಿ 93 ಮರಗಳನ್ನು ಕಡಿಯಲು ತೀರ್ಮಾನಿಸಲಾಗಿದೆ.

ರಸ್ತೆ ಮಾರ್ಗದಲ್ಲಿನ 407 ಮರಗಳ ಕಡಿತಲೆ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅರಣ್ಯ ಇಲಾಖೆಗೆ ಕೋರಿಕೆಯ ಪ್ರಸ್ತಾವ ಸಲ್ಲಿಸಿತ್ತು. ಮಾರ್ಗ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ 207 ಮರಗಳನ್ನು ಕಡಿತಲೆಗೆ ಗುರುತಿಸಿತ್ತು. ಈ ನಡುವೆ ಮೇಗರವಳ್ಳಿಯಿಂದ ಆಗುಂಬೆ ಮಾರ್ಗದಲ್ಲಿನ ನೂರಾರು ಮರಗಳ ಬಲಿಗೆ ಆಡಳಿತದಲ್ಲಿ ಸದ್ದಿಲ್ಲದೇ ಸಿದ್ಧತೆಗಳನ್ನು ನಡೆಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಅಕ್ಕ–ಪಕ್ಕದಲ್ಲಿನ ಮರಗಳ ಕಡಿತಲೆ ತೀರ್ಮಾನವನ್ನು ಪರಿಸರ ಪ್ರೇಮಿಗಳು, ಸಾರ್ವಜನಿಕರು ತೀವ್ರವಾಗಿ ವಿರೋಧಿಸಿದ್ದ ಕಾರಣ ವಿವಾದ ಸೃಷ್ಟಿಯಾಗಿತ್ತು. 2010 ಮಾರ್ಚ್ 11 ರಂದು ಮೇಗರವಳ್ಳಿ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ನಡೆದ ಜನಪ್ರತಿನಿಧಿಗಳ, ಅಧಿಕಾರಿಗಳ, ವಿವಿಧ ಸಂಘ–ಸಂಸ್ಥೆಗಳ, ಸಾರ್ವಜನಿಕರ ಅಹವಾಲು ಸಭೆಯಲ್ಲಿ ಪರ, ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು. ಅಭಿವೃದ್ಧಿ ಹೆಸರಿನಲ್ಲಿ ಅನಗತ್ಯವಾಗಿ ಕೆಲವು ಮರಗಳನ್ನು ಕಡಿಯುವ ಸಂಚು ನಡೆಯುತ್ತಿರುವುದು ಗೊತ್ತಾಗುತ್ತಿದ್ದಂತೆ ಪರಿಸರ ಸಂಘಟನೆಯ ಪ್ರಮುಖರು ಸಾರ್ವಜನಿಕರ ಸಮ್ಮುಖದಲ್ಲಿ ಸಮೀಕ್ಷೆ ನಡೆಸುವಂತೆ ಒತ್ತಾಯಿಸಿದ್ದರು. ಪರಿಸ್ಥಿತಿಯನ್ನು ಅರಿತ ಅರಣ್ಯ ಇಲಾಖೆ ಸಮೀಕ್ಷೆ ನಡೆಸಿ ಮರಗಳ ತೆರವಿಗೆ ಕಾನೂನಿನ ಅಡಿಯಲ್ಲಿ ಅಂತಿಮ ರೂಪ ನೀಡಲು ಈಗ ಮುಂದಾಗಿದೆ.

ರಾಷ್ಟ್ರೀಯ ಹೆದ್ದಾರಿ 169(ಎ) ಮಾರ್ಗದ 13.98 ಕಿ.ಮೀ ದೂರದ ರಸ್ತೆ ಬದಿಯಲ್ಲಿನ 97 ಮರಗಳ ಮಾರಣಹೋಮ ಅಂತಿಮಗೊಂಡಿದೆ. ಸಮೀಕ್ಷೆ ಕಾರ್ಯಾಚರಣೆಯಲ್ಲಿ ಒಪ್ಪಿಗೆ ದೊರೆತ ಹಿನ್ನೆಲೆಯಲ್ಲಿ ಸಮಾಧಾನಗೊಂಡಿರುವ ಅರಣ್ಯ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತುರ್ತಾಗಿ ಮರಗಳನ್ನು ನೆಲಕ್ಕುರುಳಿಸಲು ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿವೆ.

ಬ್ರಟಿಷರ ಆಳ್ವಿಕೆ, ಮೈಸೂರು ಅರಸರ ಕಾಲದಲ್ಲಿ ರಸ್ತೆ ಉದ್ದಕ್ಕೂ ನೆರಳಿನಾಸರೆಗೆ ನೆಡಲಾಗಿದ್ದ ತುಂಬು ತೇರಿನಂಥ ಸಾಲುಧೂಪದ ಬೃಹತ್ ಗಾತ್ರದ ಮರಗಳು ಇನ್ನು ನೆನಪು ಮಾತ್ರ. ಹಲಸು, ಹೆಬ್ಬಲಸು, ನೇರಲೆ, ನಾಯಿಹಲಸು, ಬಿಳಾಲೆ ಮುಂತಾದ ಹಸಿರು ಚೆಲ್ಲುವ ಮರಗಳು ರಸ್ತೆ ಅಭಿವೃದ್ಧಿಗಾಗಿ ಜೀವ ಕಳೆದುಕೊಳ್ಳಲಿವೆ.

ಕರ್ನಾಟಕ ವೃಕ್ಷ ಸಂರಕ್ಷಣೆ ಕಾಯ್ದೆ ಪ್ರಕರಣ 8(3)ರ ಅಡಿ ಮರಗಳ ಕಡಿತಲೆಗೆ ಇಲಾಖೆ ಕ್ರಮ ವಹಿಸಿದೆ. ಕಾಯ್ದೆ ನಿಯಮ ಪ್ರಕರಣ 50ಕ್ಕಿಂತ ಹೆಚ್ಚು ಮರಗಳ ಕಡಿತಲೆ ನಿರ್ಧಾರಕ್ಕೂ ಮುನ್ನ ಸಾರ್ವಜನಿಕರಿಂದ ಅಹವಾಲು ಪಡೆಯುವುದು ಕಡ್ಡಾಯವಾದ ಕಾರಣ ಸಾರ್ವಜನಿಕರೊಂದಿಗೆ ಅಹವಾಲು ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಅರಣ್ಯ ಇಲಾಖೆ ಬಂದಿದೆ.

ಜಗತ್ತಿನ 18 ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟ ಪ್ರದೇಶದ ಆಗುಂಬೆಯಲ್ಲಿನ ಪ್ರಕೃತಿ ಸೌಂದರ್ಯ, ಸೂರ್ಯಾಸ್ತ, ಮಳೆಯ ವೈಭವದ ಆಗುಂಬೆ ಮಾರ್ಗದ ರಸ್ತೆ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿರುವುದು ಅಭಿವೃದ್ಧಿ ಪರ ಹಾಗೂ ಪ್ರಕೃತಿ ಪ್ರಿಯರ ನಡುವೆ ಪರ, ವಿರೋಧದ ಚರ್ಚೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT