ಶನಿವಾರ, ಜೂನ್ 19, 2021
27 °C
ಲಾಕ್‌ಡೌನ್‌ ನಡುವೆಯೂ ತೆರಿಗೆ ಪಾವತಿ; ನವೆಂಬರ್‌ವರೆಗೂ ದಂಡದಿಂದ ವಿನಾಯಿತಿ

ತುಮಕೂರು: ₹10.57 ಕೋಟಿ ಆಸ್ತಿ ತೆರಿಗೆ ಸಂಗ್ರಹ

ಅಭಿಲಾಷ ಬಿ.ಸಿ. Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೊರೊನಾ ಸೋಂಕು ನಿಯಂತ್ರಣ ಸಲುವಾಗಿ ಜಾರಿಗೊಳಿಸಲಾದ ಲಾಕ್‌ಡೌನ್‌ ನಡುವೆಯೂ ಮಹಾನಗರ ಪಾಲಿಕೆಯು ಪ್ರಸಕ್ತ ಆರ್ಥಿಕ ವರ್ಷದ ಮೊದಲ ಎರಡು ತಿಂಗಳಲ್ಲಿ ₹ 10.57 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ. ಇದರಿಂದ ತೆರಿಗೆ ಸಂಗ್ರಹದಲ್ಲಿ ಪಾಲಿಕೆ ಶೇ 33ರಷ್ಟು ಗುರಿ ಸಾಧನೆ ಮಾಡಿದಂತಾಗಿದೆ.

ಏಪ್ರಿಲ್‌ನಲ್ಲಿ ₹ 3.92 ಕೋಟಿ ಸಂಗ್ರಹವಾಗಿದ್ದು, ಮೇನಲ್ಲಿ ತೆರಿಗೆ ಪಾವತಿ ಪ್ರಮಾಣ ಹೆಚ್ಚಾಗಿದ್ದು ₹ 6.65 ಕೋಟಿಗೆ ಏರಿಕೆಯಾಗಿದೆ.

‘ಕಳೆದ ವರ್ಷ ಯಾವ ಬಿಕ್ಕಟ್ಟೂ ಇಲ್ಲದ ಸಂದರ್ಭದಲ್ಲಿ ಏಪ್ರಿಲ್‌, ಮೇ ತಿಂಗಳಲ್ಲಿ ₹ 15 ಕೋಟಿ ತೆರಿಗೆ ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ, ಈ ಬಾರಿ ತೆರಿಗೆ ಸಂಗ್ರಹದಲ್ಲಿ ಇಳಿಕೆಯಾಗಿದೆ’ ಎಂದು ಪಾಲಿಕೆ ಕಂದಾಯ ಅಧಿಕಾರಿ ನೀಲಲೋಚನ ಪ್ರಭು ತಿಳಿಸಿದರು.

ಬಾಕಿ ತೆರಿಗೆ ವಸೂಲಿಯಲ್ಲಿ ಈ ಬಾರಿಯೂ ಪ್ರಗತಿ ಆಗಿಲ್ಲ. 2019–20ನೇ ಸಾಲಿನಲ್ಲೂ ₹3.6 ಕೋಟಿ ಬಾಕಿ ಉಳಿದುಕೊಂಡಿದೆ. ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಈ ಎರಡು ತಿಂಗಳಲ್ಲಿ ನೋಟಿಸ್‌ ನೀಡಿ ವಸೂಲಿಗೆ ಕ್ರಮಕೈಗೊಂಡಿಲ್ಲ. ಆರ್ಥಿಕ ಸಂಕಷ್ಟವಿರುವುದರಿಂದ ಒತ್ತಾಯ ಪೂರ್ವಕವಾಗಿ ಹಾಗೂ ಸಿಬ್ಬಂದಿ ಮನೆಬಾಗಿಲಿಗೆ ಹೋಗಿ ತೆರಿಗೆ ಕಟ್ಟುವಂತೆ ಒತ್ತಾಯಿಸುತ್ತಿಲ್ಲ. ಪಾಲಿಕೆ ಸಿಬ್ಬಂದಿ, ಪೌರ ಕಾರ್ಮಿಕರು, ಸ್ವಚ್ಛತೆ ಸೇರಿದಂತೆ ಇತರ ಕೆಲಸಗಳಿಗೆ ಪ್ರತಿತಿಂಗಳು ಪಾಲಿಕೆ ನಿರ್ವಹಣೆಗೆ ₹ 3.20 ಕೋಟಿ ಅಗತ್ಯವಿದೆ. ಹಣದ ಕೊರತೆಯಾದರೂ ಈ ವರ್ಷ ತೆರಿಗೆ ಕಟ್ಟುವಂತೆ ಜನರನ್ನು ಒತ್ತಾಯಿಸುತ್ತಿಲ್ಲ ಎಂದು ಅವರು ಹೇಳಿದರು.

ನವೆಂಬರ್‌ ನಂತರ ಕೊರೊನಾ ನಿಯಂತ್ರಣಕ್ಕೆ ಬಂದು ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಿದರೆ ತೆರಿಗೆ ವಸೂಲಿಯಲ್ಲಿ ಗುರಿ ಸಾಧಿಸುತ್ತೇವೆ ಎಂದು ಆಶಾವಾದ ವ್ಯಕ್ತಪಡಿಸಿದರು.

ನವೆಂಬರ್‌ವರೆಗೆ ಬಡ್ಡಿ ಇಲ್ಲ: ಆಸ್ತಿ ತೆರಿಗೆಗೆ ಪ್ರತಿ ತಿಂಗಳು ಶೇ 2ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಒಂದು ಆಸ್ತಿಗೆ ₹ 100 ತೆರಿಗೆ ಪಾವತಿಸಬೇಕು ಎಂದಿಟ್ಟುಕೊಳ್ಳಿ. ಜುಲೈ 31ರ ಒಳಗೆ ಪಾವತಿಸಿದರೆ ಶೇ 5ರಷ್ಟು ರಿಯಾಯಿತಿ ಸಿಗುವುದರಿಂದ
₹ 95 ಕಟ್ಟಿದರೆ ಸಾಕು. ನವೆಂಬರ್‌ ನಂತರ ಪ್ರತಿ ತಿಂಗಳಿಗೆ ಶೇ 2ರಂತೆ ಬಡ್ಡಿ ಸೇರಿಸಿ ಪಾವತಿಸಬೇಕಾಗುತ್ತದೆ. ನವೆಂಬರ್‌ವರೆಗೆ ಆಸ್ತಿ ತೆರಿಗೆ ಮೇಲೆ ಬಡ್ಡಿ ಇಲ್ಲ. ಜೊತೆಗೆ ತೆರಿಗೆ ಕಟ್ಟದವರಿಗೂ ನೋಟಿಸ್‌ನಿಂದ ವಿನಾಯಿತಿ ನೀಡಲಾಗಿದೆ.

ಸಿಬ್ಬಂದಿ ಕೊರತೆ

ಪಾಲಿಕೆ ಕಳೆದ ವರ್ಷ ತೆರಿಗೆ ಸಂಗ್ರಹಕ್ಕೆ ಮೂರು ವಲಯಗಳನ್ನು ಮಾಡಿತ್ತು. ಮಂಡಿಪೇಟೆಯ ದಿವಾನ್‌ ಪೂರ್ಣಯ್ಯ ಛತ್ರ, ಶಿರಾಗೇಟ್‌, ಜಯನಗರದಲ್ಲಿ ಮೂರು ವಲಯ ಕಚೇರಿ ತೆರೆಯಲಾಗಿತ್ತು. ಆದರೆ ಈ ವಲಯವಾರು ವಿಂಗಡನೆ ಕ್ರಮಬದ್ಧವಾಗಿಲ್ಲ ಎಂಬ ಅಪವಾದ ಕೇಳಿಬಂದಿತ್ತು. ಜೊತೆಗೆ ಈ ಕಚೇರಿಗಳನ್ನು ನಡೆಸಲು ಅಗತ್ಯ ಸಿಬ್ಬಂದಿ ಇಲ್ಲದೆ ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿ ಬಾಗಿಲು ಮುಚ್ಚಿದ್ದವು.

ಆನ್‌ಲೈನ್‌ ಪಾವತಿಗಿಲ್ಲ ಒಲವು

ಆಸ್ತಿ ತೆರಿಗೆ ಪಾವತಿಗೆ ಆನ್‌ಲೈನ್‌ ವ್ಯವಸ್ಥೆ ಅಳವಡಿಸಿ ಅನೇಕ ವರ್ಷಗಳೇ ಕಳೆದರೂ ಹೆಚ್ಚಿನವರು ಬ್ಯಾಂಕ್‌ನಲ್ಲೇ ತೆರಿಗೆ ತುಂಬುತ್ತಿದ್ದಾರೆ. ಜಿಲ್ಲೆಯಿಂದ ಹೊರಗಿರುವವರು ಮಾತ್ರ ಆನ್‌ಲೈನ್‌ನಲ್ಲಿ ಪಾವತಿಸುತ್ತಾರೆ. ಬಹುತೇಕರು ಕಚೇರಿಗೆ ಬಂದು ಪಾವತಿಸುತ್ತಾರೆ. ಈ ವರ್ಷ ಲಾಕ್‌ಡೌನ್‌ನಲ್ಲಿ ಪಾಲಿಕೆ ಸಿಬ್ಬಂದಿಯೇ ತೆರಿಗೆ ಪಾವತಿಸಲು ಇಚ್ಚಿಸುವವರ ಮನೆಗೆ ತೆರಳಿ ಹಣ ಸಂಗ್ರಹಿಸಲು ಯೋಜನೆ ರೂಪಿಸಿದ್ದರು. ಆದರೆ ಅದಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಅಂಕಿ ಅಂಶ

₹ 30.36 ಕೋಟಿ - ಆಸ್ತಿ ತೆರಿಗೆ ಸಂಗ್ರಹ ಗುರಿ

₹ 3.6 ಕೋಟಿ - ಹಿಂದಿನ ವರ್ಷದ ತೆರಿಗೆ ಬಾಕಿ

₹19.67 - ಈ ಬಾರಿ ವಸೂಲಾಗಬೇಕಾದ ತೆರಿಗೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು