ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

800 ತೆಂಗಿನ ಸಸಿ ಕಿತ್ತ ಪೊಲೀಸರು

ಗುಡ್ಡೇನಹಳ್ಳಿ: ಎಂ.ಟಿ.ಕೃಷ್ಣಪ್ಪರಿಂದ 30ರಿಂದ ಪಾದಯಾತ್ರೆ
Last Updated 21 ಆಗಸ್ಟ್ 2020, 8:02 IST
ಅಕ್ಷರ ಗಾತ್ರ

ತುರುವೇಕೆರೆ: ‘ತಾಲ್ಲೂಕಿನ ಗುಡ್ಡೇನಹಳ್ಳಿ ರೈತರು ತಮ್ಮ ಜಮೀನಿನಲ್ಲಿ ನೆಟ್ಟಿರುವ ತೆಂಗಿನ ಸಸಿಗಳನ್ನು ಶಾಸಕ ಮಸಾಲ ಜಯರಾಂ ಅವರು ಪೊಲೀಸ್‍ ಮತ್ತು ಕಂದಾಯ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಕೀಳಿಸಿ ತಮಗೆ ಬೇಕಾದವರಿಗೆ ಜಮೀನು ನೀಡಲು ಮುಂದಾಗಿದ್ದಾರೆ. ಬಡ ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ’ ಎಂದು ಜೆಡಿಎಸ್‌ ಮುಖಂಡ ಎಂ.ಟಿ.ಕೃಷ್ಣಪ್ಪ ನೇರ ಆರೋಪ ಮಾಡಿದರು.

ಪಟ್ಟಣದಲ್ಲಿ ರೈತರ ಭೂ ದಾಖಲೆಗಳನ್ನು ಪ್ರದರ್ಶಿಸಿ ಮಾತನಾಡಿದ ಅವರು, ‘ಮಾಯಸಂದ್ರ ಹೋಬಳಿಯ ಗುಡ್ಡೇನಹಳ್ಳಿ ಗ್ರಾಮದ ಸರ್ವೆ ನಂ. 4, 5, 6, 7, 8, 9, 15, 16, 27 ಮತ್ತು 28ರಲ್ಲಿ ಸುಮಾರು 18 ಎಕರೆ ಜಮೀನನ್ನು ಗ್ರಾಮದ 60 ಬಡ ಕುಟುಂಬಗಳು ಹಲವು ವರ್ಷದಿಂದ ಸಾಗುವಳಿ ಮಾಡುತ್ತಿವೆ ಮತ್ತು ಬಗರ್‌ಹುಕುಂ ಯೋಜನೆ ಅಡಿ ರೈತರು ಅರ್ಜಿ ಸಲ್ಲಿಸಿದ್ದರು’.

‘ಇದರಲ್ಲಿ ಇಬ್ಬರಿಗೆ ನನ್ನ ಅವಧಿಯಲ್ಲೇ ತಲಾ 3 ಎಕರೆ ಜಮೀನನ್ನು ಮಂಜೂರು ಮಾಡಿ ಕೊಟ್ಟಿದೆ. ಉಳಿದವರು ಇಲ್ಲಿ ತಲಾ 20 ಗುಂಟೆ ಉಳುಮೆ ಮಾಡುತ್ತಿದ್ದರು. ಕೆಲ ರೈತರು ಈಚೆಗೆ ಸುಮಾರು 800 ತೆಂಗಿನ ಸಸಿಗಳನ್ನು ನೆಟ್ಟಿದ್ದರು’ ಎಂದರು.

‘ಗೋಮಾಳಗಳನ್ನು ಉಳುಮೆ ಮಾಡಿಕೊಳ್ಳಲು ಸರ್ಕಾರದ ಅನುಮತಿ ಇದೆ ಹಾಗೂ ಬಿ. ಫಾರೆಸ್ಟ್ ಇದ್ದು, ವ್ಯವಸಾಯ ಮಾಡುತ್ತಾ ಬಗರ್‌ಹುಕುಂಗೆ ಅರ್ಜಿ ಹಾಕಿದ್ದರೆ ಅದನ್ನು ಖಾಲಿ ಮಾಡಿಸಲು ಯಾರಿಗೂ ಅನುಮತಿ ಇಲ್ಲ’.

‘ಹೀಗಿದ್ದರೂ ಶಾಸಕ ಮಸಾಲ ಜಯರಾಂ ಗ್ರೇಡ್‌– 2 ತಹಶೀಲ್ದಾರ್ ಸಿದ್ದಗಂಗಯ್ಯ, ಕಂದಾಯ ಅಧಿಕಾರಿ ಪುಟ್ಟಣ್ಣಶೆಟ್ಟಿ ಹಾಗೂ ಪಟ್ಟಣದ ಪೊಲೀಸ್‍ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಗುಡ್ಡೇನಹಳ್ಳಿ ಬಗರ್‌ಹುಕುಂ ಜಮೀನಿನಲ್ಲಿ ನೆಟ್ಟಿದ್ದ ಸಾವಿರಾರು ರೂಪಾಯಿ ಮೌಲ್ಯದ ತೆಂಗಿನ ಸಸಿಗಳನ್ನು ಕೀಳಿಸಿದ್ದಾರೆ. ಆ ಮೂಲಕ ಬಡ, ಕೂಲಿಕಾರ ರೈತರ ಭೂಮಿಯನ್ನು ತಮ್ಮ ಹಿಂಬಾಲಕರಿಗೆ ನೀಡಿ ಆನಂತರ ತಮ್ಮ ಹೆಸರಿಗೆ ಮಂಜೂರು ಮಾಡಿಕೊಳ್ಳುವ ಹುನ್ನಾರ ನಡೆಸಿದ್ದಾರೆ’ ಎಂದು ಆರೋಪಿಸಿದರು.

‘ರಕ್ಕಸ ಶಾಸಕ ಮಸಾಲ ಜಯರಾಂ ದುರಾಡಳಿತ ಖಂಡಿಸಿ ಆ. 30ರಿಂದ 31ರವರೆಗೆ ಗುಡ್ಡೇನಹಳ್ಳಿ ಗ್ರಾಮಸ್ಥರೊಟ್ಟಿಗೆ ಪಾದಯಾತ್ರೆ ಕೈಗೊಂಡು ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಲಾಗುವುದು’ ಎಂದರು.

ಕೊಳಾಲ ಗಂಗಾಧರ್, ಬಸವ ರಾಜು, ಕೆಂಚಯ್ಯ, ಮುಕುಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT