ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಸನದ ಮಡುವಿನಿಂದ ನೆಮ್ಮದಿಯೆಡೆಗೆ

ಕೈಗೆ ಸಿಗುತ್ತಿಲ್ಲ ಮದ್ಯ; ಕುಡಿತದ ಚಟದಿಂದ ದೂರ ಸರಿಯುತ್ತಿದ್ದಾರೆ ಮದ್ಯಪಾನ ಪ್ರೀಯರು
Last Updated 24 ಏಪ್ರಿಲ್ 2020, 5:36 IST
ಅಕ್ಷರ ಗಾತ್ರ

ತುಮಕೂರು: ಹಲವರ ಬದುಕನ್ನೇ ಕಗ್ಗತ್ತಲೆಗೆ ದೂಡಿರುವ ಲಾಕ್‌ಡೌನ್‌, ಮದ್ಯ ವ್ಯಸನಿಗಳ ಬಾಳಲ್ಲಿ ಆಶಾಕಿರಣವೊಂದನ್ನು ಮೂಡಿಸಿದೆ.

ಎಲ್ಲ ಬಾರ್‌ಗಳು ಬಂದ್ ಆಗಿವೆ. ಮದ್ಯ ಸುಲಭದಲ್ಲಿ ಕೈಗೆಟಕುತ್ತಿಲ್ಲ. ಹಾಗಾಗಿ ಮದ್ಯ ಕುಡಿಯುವ ಚಟದಿಂದ ಕೆಲವರು ದೂರ ಸರಿಯುತ್ತಿದ್ದು, ಅವರ ಬಾಳಲ್ಲಿ ಸಕಾರಾತ್ಮಕ ಬದಲಾವಣೆಯ ಗಾಳಿ ಬೀಸುತ್ತಿದೆ.

ಕೊರಟಗೆರೆ ತಾಲ್ಲೂಕು ತಂಗನಹಳ್ಳಿ ಲೋಕೇಶ್‌ ಅವರಿಗೆ ಕುಡಿತದ ಅಭ್ಯಾಸವಿತ್ತು. ಅದರಿಂದ ಹೊರಬರಲು ವ್ಯಸನಮುಕ್ತವಾಗಿಸುವ ಕೇಂದ್ರಗಳಿಗೂ ಹೋಗಿ ಚಿಕಿತ್ಸೆ ಪಡೆಯುತ್ತಿದ್ದರು. ಅದೇ ವೇಳೆ ಲಾಕ್‌ಡೌನ್ ಘೋಷಣೆಯಾಯಿತು. ಹಾಗಾಗಿ ಮದ್ಯದಿಂದ ಮತ್ತಷ್ಟು ದೂರ ಸರಿದರು. ಈಗ ಅವರ ಬಾಳಲ್ಲಿ ನೆಮ್ಮದಿ ಮನೆಮಾಡಿದೆ.

ಲಾಕ್‌ಡೌನ್‌ನಿಂದ ಒಳ್ಳೆಯದೇ ಆಯಿತು. ಈಗ ಮದ್ಯದ ನೆನಪೇ ಬರುತ್ತಿಲ್ಲ. ಅಕ್ಕಪಕ್ಕದ ಜನರು ಕೂಡ ಒಳ್ಳೆ ಬುದ್ಧಿ ಕಲಿತುಕೊಂಡ ಎಂದು ಹೇಳುತ್ತಿದ್ದಾರೆ. ಹೆಂಡತಿ, ಮಕ್ಕಳೊಂದಿಗೆ ಸಂತೋಷವಾಗಿ ಇದ್ದೇನೆ. ಈಗ ಲಾಕ್‌ಡೌನ್‌ ಸ್ವಲ್ಪ ಸಡಿಲ ಮಾಡಿದ್ದು, ತುಮಕೂರಿನ ದೋಬಿಘಾಟ್‌ನಲ್ಲಿ ಗಾರೆ ಕೆಲಸಕ್ಕೆ ಹೋಗುತ್ತಿದ್ದೇನೆ ಎಂದು ಸಂತಸದಿಂದ ಹೇಳಿಕೊಂಡರು.

ಗುಬ್ಬಿಯ 58 ವರ್ಷದ ಬಾಬಣ್ಣ (ಹೆಸರು ಬದಲಿಸಲಾಗಿದೆ) ಅವರಿಗೆ ದಿನ ಆರಂಭ ಆಗುತ್ತಿದ್ದದ್ದೇ ಕುಡಿತದಿಂದ. ದಿನದ ಬಹುತೇಕ ಸಮಯ ಹಾಸಿಗೆಯಲ್ಲೇ ಇರುತ್ತಿದ್ದರು. ಈಗ ಅವರ ಕೈಗೆ ಮದ್ಯ ಸಿಗುವುದು ಬಂದ್‌ ಆಗಿದೆ.

ಆರಂಭದಲ್ಲಿ ಕೈ–ಕಾಲುಗಳು ನಿಶಕ್ತವಾದಂತೆ ಅನಿಸುತಿತ್ತು. ವೈದ್ಯರಿಂದ ಮಾತ್ರೆಗಳನ್ನು ತೆಗೆದುಕೊಂಡೆ. ದಿನಗಳು ಕಳೆದಂತೆ ಮದ್ಯದ ಕಡೆಗಿನ ಸೆಳೆತ ಕಡಿಮೆ ಆಯಿತು. ಈಗ ಎದ್ದು ಆರಾಮವಾಗಿ ಓಡಾಡುತ್ತೇನೆ. ಅಡಿಕೆ ತೋಟಕ್ಕೂ ಹೋಗಿ ಬರುತ್ತೇನೆ. ಈ ಮೊದಲು ರೇಗುತ್ತಿದ್ದಾಗ, ಮೊಮ್ಮಕ್ಕಳು ಸಹ ಹತ್ತಿರ ಬರುತ್ತಿರಲಿಲ್ಲ. ಈಗ ಓಡೋಡಿ ಬಂದು ಅಪ್ಪಿಕೊಳ್ಳುತ್ತಿವೆ. ಅವರೊಂದಿಗೆ→ಆಟವಾಡುತ್ತಿದ್ದರೆ, ಕಾಲ ಕಳೆದಿದ್ದೇ ಗೊತ್ತಾಗುತ್ತಿಲ್ಲ ಎಂದರು.

ನನ್ನೊಂದಿಗೆ ಕುಡಿಯು ತ್ತಿದ್ದವರು ಈಗ ಗಾಂಜಾ ಸೇದುತ್ತಿದ್ದಾರೆ. ಅವರಿಂದ ಅಂತರ ಕಾಯ್ದುಕೊಂಡಿದ್ದೇನೆ. ಕುಡಿತದಿಂದ ಸುಖವಿಲ್ಲ ಎಂದು ಬೇರೆಯವರಿಗೂ ಬುದ್ಧಿವಾದ ಹೇಳುತ್ತಿದ್ದೇನೆ ಎಂದರು.

ತುಮಕೂರಿನ ಈದ್ಗಾ ಮೊಹಲ್ಲಾದ ನಜೀರ್‌ (ಹೆಸರು ಬದಲಿಸಲಾಗಿದೆ) ಅವರದ್ದು ಆಟೊ ಓಡಿಸುವ ಕೆಲಸ. ಸ್ನೇಹಿತರ ಸಹವಾಸದಿಂದ ಕುಡಿತದ ಚಟ ಅಂಟಿಕೊಂಡಿತ್ತು. ದುಡಿಮೆಯ ಬಹುಪಾಲು ಹಣ ಬಾರ್‌ಗಳ ಗಲ್ಲಾಪೆಟ್ಟಿಗೆ ಸೇರುತಿತ್ತು. ಕುಡಿದ ಸಮಯದಲ್ಲಿ ಅಪಘಾತವಾಗಿ ಪೆಟ್ಟು ಮಾಡಿಕೊಂಡಿದ್ದರು. ಆಟೊಗೂ ಹಾನಿಯಾಗಿತ್ತು. ದುಡಿಮೆ
ಇಲ್ಲದೆ, ಸಾಲದ ಸುಳಿಗೂ ಸಿಲುಕಿದ್ದರು.

ಈಗ ಸುಲಭವಾಗಿ ಮದ್ಯ ಸಿಗದೆ ಅನಿವಾರ್ಯವಾಗಿ ಮರೆಯುತ್ತಿದ್ದಾರೆ. ಆರಂಭವಾಗಲಿರುವ ರಂಜಾನ್‌ ತಿಂಗಳ ಉಪವಾಸ ಆಚರಣೆಗೆ ಮಾನಸಿಕವಾಗಿ ಸಿದ್ಧರಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT